ಬಳ್ಳಾರಿ: ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಇಂದಿಗೂ ಚಾಲ್ತಿಯಲ್ಲಿರುವುದು ವಿಷಾದನೀಯ ಸಂಗತಿಯಾಗಿದೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಅನಿಷ್ಟ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಜಿ.ಶಾಂತಿ ಹೇಳಿದರು.
ಶಿಕ್ಷಣದ ಕೊರತೆಯಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಈ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಸರ್ಕಾರ ಹಲವು ಕಾನೂನು ಜಾರಿಗೆ ತಂದಿದೆ. ಆದರೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸದ ಪರಿಣಾಮ ಇದು ಇನ್ನು ಅಸ್ತಿತ್ವದಲ್ಲಿದೆ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು. ಮಾಜಿ ದೇವದಾಸಿಯರಿಗೆ ಸರ್ಕಾರಿ ಸೌಲಭ್ಯಗಳು ದೊರೆಯದಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಬಹುದು ಎಂದು ಸಲಹೆ ನೀಡಿದರು.
ಮಾಜಿ ದೇವದಾಸಿ ಮಹಿಳೆಯರಿಗೆ ಹಲವಾರು ಸರ್ಕಾರದ ಸೌಲಭ್ಯಗಳಿದ್ದು, ಪುನರ್ವಸತಿ ಯೋಜನೆ (ನಿವೇಶನ/ಮನೆ), ಮಾಸಾಶನ, ಶಿಕ್ಷಣ, ತರಬೇತಿ ಮತ್ತು ಸ್ವಯಂ ಉದ್ಯೋಗ ಸೌಲಭ್ಯ, ಮಕ್ಕಳಿಗೆ ವಿದ್ಯಾರ್ಥಿವೇತನ, ಆರೋಗ್ಯ ಕಿಟ್ ಹಾಗೂ ವಿವಿಧ ದಾಖಲಾತಿಗಳನ್ನು ಸುಲಭಗೊಳಿಸಲಾಗಿದೆ. ಕುಟುಂಬದ ಸಮಗ್ರ ಪುನರ್ವಸತಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇವುಗಳ ಸೌಲಭ್ಯ ಪಡೆದು ಉತ್ತಮ ಜೀವನ ನಡೆಸಿ ಮುಖ್ಯವಾಹಿನಿಗೆ ಬರಬೇಕು. ದೇವದಾಸಿ ಪದ್ಧತಿಯನ್ನು ಶ್ಯೂನಕ್ಕೆ ತರಲು ನಾವೆಲ್ಲರೂ ಪಣತೋಡಬೇಕು ಎಂದರು.ವಿಕಲಚೇತನರು ವಿಶೇಷ ಶಕ್ತಿ ಉಳ್ಳವರು, ಇವರು ಸಮಾಜದ ಒಂದು ಭಾಗವಾಗಿದ್ದು, ಅವರಿಗೆ ಪೋತ್ಸಾಹ ನೀಡಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಸರ್ಕಾರಿ ಕಚೇರಿಗಳಲ್ಲಿ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಅವರಿಗಾಗಿ ವಿಶೇಷ ಕೂರುವ ವ್ಯವಸ್ಥೆ ಮತ್ತ ಉತ್ತಮ ಸೌಲಭ್ಯ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಮಾತನಾಡಿದರು. ಜಿಲ್ಲೆಯಲ್ಲಿ ದೇವದಾಸಿ ಮಹಿಳೆಯರ ಸಮೀಕ್ಷೆಗೆ 4000 ಗುರಿಯನ್ನು ಹೊಂದಿದ್ದು, ಅದರಲ್ಲಿ ಇನ್ನೂ 600ಕ್ಕಿಂತ ಹೆಚ್ಚು ಮಾಜಿ ದೇವದಾಸಿ ಮಹಿಳೆಯರು ಸಮೀಕ್ಷೆಯಲ್ಲಿ ಭಾಗವಹಿಸಿಲ್ಲ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಮೀಕ್ಷೆಯಲ್ಲಿ ಭಾಗವಹಿಸಿ ಎಂದು ಸಿಇಒ ಸುಮೈರ್ ಮನವಿ ಮಾಡಿದರು.
ಕಾರ್ಯಾಗಾರದಲ್ಲಿ ಮಾಜಿ ದೇವದಾಸಿ ಮಹಿಳಾ ಫಲಾನುಭಾವಿಗಳಿಗೆ ವಿವಿಧ ಯೋಜನೆಯಡಿ ಚೆಕ್ ಹಾಗೂ ವಿಕಲಚೇತನರಿಗೆ ಹೊಲಿಗೆ ಯಂತ್ರ ಮತ್ತು ಕಿಟ್‌ಗಳನ್ನು ವಿತರಿಸಲಾಯಿತು.