ಕನ್ನಡಪ್ರಭ ವಾರ್ತೆ ಉಡುಪಿ
ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅವರು ಪುರಸ್ಕೃತರ ಕುರಿತು ಮಾತನಾಡಿ, ನಾಡಿನ ಸಾಕ್ಷಿ ಪ್ರಜ್ಞೆ, ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಡಾ. ಬಿ.ವ್ಹಿ. ಶಿರೂರ ಅವರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಶಾಸನ, ಗ್ರಂಥ ಸಂಪಾದನೆ, ಜೈನಸಾಹಿತ್ಯ, ವೀರಶೈವ ಸಾಹಿತ್ಯ, ವಚನ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಪ್ರಸಿದ್ಧರಾಗಿದ್ದಾರೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಬಿ.ವ್ಹಿ. ಶಿರೂರ, ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ವ್ಯಾಕರಣ ಮತ್ತು ಛಂದಸ್ಸಿನಂಥ ಶಾಸ್ತ್ರೀಯ ಪಾಂಡಿತ್ಯವುಳ್ಳ ಪಠ್ಯವನ್ನು ವಿಶ್ವವಿದ್ಯಾಲಯಗಳು ಕಡಿತಗೊಳಿಸಿ ಕನ್ನಡ ಭಾಷಾ ಗಟ್ಟಿತನವನ್ನು ಹಾಳು ಮಾಡುತ್ತಿರುವುದು ವಿಷಾದನೀಯ. ವರ್ತಮಾನದಲ್ಲಿ ಯುವಕರಿಗೆ ಗೋವಿಂದ ಪೈ ಮತ್ತು ಸೇಡಿಯಾಪು ಕೃಷ್ಣ ಭಟ್ಟರ ಶಾಸ್ತ್ರೀಯ ಪಾಂಡಿತ್ಯವನ್ನು ಪರಿಚಯಿಸುವ ಕೆಲಸವನ್ನು ಮಾಡಬೇಕು ಎಂದರು.ಕಾಡಸಿದ್ಧೇಶ್ವರ ಕಾಲೇಜಿನ ಪ್ರಾಚಾರ್ಯ ಪ್ರೊ. ಉಮಾ ನೆರ್ಲೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಡಾ. ವೀರಣ್ಣ ರಾಜೂರ ಮಾತನಾಡಿ, ಡಾ.ಬಿ.ವ್ಹಿ. ಶಿರೂರ ಅವರು ದೊಡ್ಡ ವಿದ್ವಾಂಸರಾಗಿದ್ದರೂ ಎಲ್ಲಿಯೂ ತಮ್ಮನ್ನು ಗುರುತಿಸಿಕೊಂಡವರಲ್ಲ. ಕರಾವಳಿಯವರು ಇಂತಹ ಮಹಾನ್ ಸಂಶೋಧಕರನ್ನು ಗುರುತಿಸಿ ಸನ್ಮಾನಿಸಿರುವುದು ನಮ್ಮನ್ನು ನಾವು ಗೌರವಿಸಿಕೊಂಡಂತೆ ಎಂದರು.