ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಮತಕ್ಷೇತ್ರದ 38 ಹಳ್ಳಿಗಳು 50 ಸಾವಿರ ಎಕರೆ ಪ್ರದೇಶಕ್ಕೆ ಆಧುನಿಕ ತಂತ್ರಜ್ಞಾನ ಬಳಸಿ ನೀರುಣಿಸುವ ಬೂದಿಹಾಳ-ಪಿರಾಪುರ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಬಹುತೇಕ ಪೂರ್ಣಗೊಂಡು ಟ್ರಯಲ್ ಹಂತದಲ್ಲಿವೆ. ಕಾಮಗಾರಿಗೆ ಬೇಕಾದ ಅನುದಾನ ಬಿಡುಗಡೆ ಮಾಡಿ ಜಮೀನುಗಳಿಗೆ ನೀರು ಹರಿಸಿ ರೈತರ ಬಾಳು ಹಸನಾಗಿಸಲು ಉದ್ಘಾಟನೆಗೆ ಡಿಸಿಎಂ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಆಹ್ವಾನಿಸಿದರು.ಡಿಸಿಎಂ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಂಗಳವಾರ ನಡೆದ ಕೃಷ್ಣಭಾಗ್ಯ ಜಲ ನಿಗಮದ ಯೋಜನಾ ವ್ಯಾಪ್ತಿಯ ಶಾಸಕರು ಹಾಗೂ ವಿ.ಪ.ಸದಸ್ಯರ ಪರಿಶೀಲನಾ ಸಭೆ ವಿಧಾನಸೌಧದ ಸಭಾಂಗಣದಲ್ಲಿ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕಾಮಗಾರಿಗಳ ಕುರಿತು ಮಾತನಾಡಿದರು. ಈ ಭಾಗದ ರೈತರ ಬಹುನಿರೀಕ್ಷಿತ ಯೋಜನೆಯಾದ ಬೂದಿಹಾಳ-ಪೀರಾಪುರ ನೀರಾವರಿ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡು ಟ್ರಯಲ್ ಹಂತದಲ್ಲಿದೆ. ಇನ್ನುಳಿದ ಕಾಮಗಾರಿಗಳ ಹಾಗೂ ಲಿಫ್ಟ್ ಯೋಜನೆಗೆ ಬೇಕಾದ ಅನುದಾನ ನೀಡಿ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತಿಳಿಸಲು ಸಚಿವರಿಗೆ ಮನವಿ ಮಾಡಿದರು.ಈಗಾಗಲೇ ಮೊದಲೇ ಹಂತದ ₹550 ಕೋಟಿ ವೆಚ್ಚದ ಕಾಮಗಾರಿ ಹಾಗೂ 2ನೇ ಹಂತದ ಕಾಮಗಾರಿಗೆ ಸುಮಾರು ₹796.11ಕೋಟಿ ಅನುದಾನ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು. ಇನ್ನುಳಿದ ಕೆಲ ಕಾಮಗಾರಿಗಳಿಗೆ ಅನುದಾನ ನೀಡಲು ಹಾಗೂ ಕುದರಗೂಂಡ-ಹುಣಶ್ಯಾಳ ಗ್ರಾಮಗಳ ಕೆರೆ ತುಂಬುವ ಯೋಜನೆಯ ಹುಣಶ್ಯಾಳ ಕೆರೆ ತುಂಬುವ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕೋರಿದರು.ಕ್ಷೇತ್ರದ ನೀರಾವರಿಗೆ ಹೆಚ್ಚಿನ ಹಣ ನೀಡಿ, ಈ ಭಾಗದ ರೈತರ ಬಹು ನಿರೀಕ್ಷಿತ ಯೋಜನೆಗೆ ನೀರು ಹರಿಸುವ ಮೂಲಕ ಅನ್ನದಾತರಿಗೆ ಅಭಯ ನೀಡಲು ಉದ್ಘಾಟನೆಗೆ ಸಚಿವರನ್ನು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಆಹ್ವಾನಿಸಿದರು.