ಎರಡು ದಿನಗಳ ಕೊಪಣ ಮೀಡಿಯಾ ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ
ಕನ್ನಡಪ್ರಭ ವಾರ್ತೆ ಕೊಪ್ಪಳಮಾಧ್ಯಮಗಳಿಗೆ ಬಹುದೊಡ್ಡ ಜವಾಬ್ದಾರಿ ಇದ್ದು, ಜನಪರವಾಗಿ ಸುದ್ದಿಗಳಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ಬಹುತ್ವ ಮೀಡಿಯಾ ಹೌಸ್, ಬಹುತ್ವ ಬಳಗ ವಿವಿಧ ಸಹಯೋದಡಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಕೊಪಣ ಮೀಡಿಯಾ ಫೆಸ್ಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂವಿಧಾನ ಓದು ಪುಸ್ತಕ ಒಳ್ಳೆಯ ಪುಸ್ತಕ, ಈ ಪುಸ್ತಕವನ್ನು ಎಲ್ಲ ವಿದ್ಯಾರ್ಥಿಗಳು ಓದಬೇಕು. ಈ ಪುಸ್ತಕವು ಎಲ್ಲರಿಗೂ ಸಂವಿಧಾನದ ಕುರಿತು ಕನಿಷ್ಠ ತಿಳುವಳಿಕೆ ಮೂಡಿಸುತ್ತದೆ ಎಂದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಮಾಧ್ಯಮಗಳ ಮೂಲಭೂತ ಹಕ್ಕು. ಇದಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ರಾಷ್ಟ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಬಹಳ ಮಹತ್ವವಾದದ್ದು ಎಂದರು.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ರಾಮ್.ಎಲ್. ಅರಸಿದ್ದಿ ಮಾತನಾಡಿ, ಸಮಾಜದಲ್ಲಿ ಮಾಧ್ಯಮಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು. ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಪತ್ರಕರ್ತ ರವೀಂದ್ರ ವಿ.ಕೆ. ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಗಣಪತಿ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪತ್ರಕರ್ತ ಸಿರಾಜ್ ಬಿಸರಳ್ಳಿ ಮಾತನಾಡಿದರು. ರಾಜು ಬಿ.ಆರ್. ಕಾರ್ಯಕ್ರಮದ ನಿರೂಪಿಸಿದರು. ಡಾ. ನರಸಿಂಹ ಗುಂಜಳ್ಳಿ ಸ್ವಾಗತಿಸಿದರು. ಪತ್ರಕರ್ತ ಮಂಜುನಾಥ ಗೊಂಬಾಳ ಸಂವಿಧಾನ ಪೀಠಿಕೆ ವಾಚನ ಮಾಡಿದರು. ಬಹುತ್ವ ಬಳಗದ ರಾಜಾಬಕ್ಷಿ ಎಚ್.ವಿ., ಪತ್ರಕರ್ತರಾದ ಎಂ.ಡಿ. ಕಲೀಲ್ ಹುಡೇವು, ಅಖಿಲ್ ಹುಡೇವು, ಮಾರುತಿ, ದಾವಲಸಾಬ, ಡಾ. ಪಾಷಾ ಇದ್ದರು.