ಬಳ್ಳಾರಿ: ರಾಜ್ಯಮಟ್ಟದ "ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ " ಹಾಗೂ "ಬಳ್ಳಾರಿ ರಾಘವ " ಕೃತಿ ಲೋಕಾರ್ಪಣೆ ಸಮಾರಂಭವನ್ನು ಜು.28ರಂದು ಸಂಜೆ 6 ಗಂಟೆಗೆ ನಗರದ ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ತಿಳಿಸಿದರು.
ಪ್ರಶಸ್ತಿಯು ₹25 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಲೋಹಿಯಾ ಪ್ರಕಾಶನ ಮುಖ್ಯಸ್ಥ, ಸಮಾಜಮುಖಿ ಚಿಂತಕ ಸಿ.ಚನ್ನಬಸವಣ್ಣ ಪ್ರಶಸ್ತಿ ಪ್ರದಾನಿಸುವರು. "ಬಳ್ಳಾರಿ ರಾಘವ " ಕೃತಿಯನ್ನು ವಿಪ ಸದಸ್ಯ ವೈ.ಎಂ.ಸತೀಶ್ ಲೋಕಾರ್ಪಣೆಗೊಳಿಸುವರು. ರಾಘವ ಸ್ಮಾರಕ ಗೌರವಾಧ್ಯಕ್ಷ ಕೆ.ಚನ್ನಪ್ಪ, ಹೊಸಪೇಟೆಯ ಹಿರಿಯ ಲೇಖಕ ಡಾ.ಮೃತ್ಯುಂಜಯ ರುಮಾಲೆ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ ಉಪಸ್ಥಿತರಿರುವರು ಎಂದು ಪ್ರಭುದೇವ ಕಪ್ಪಗಲ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಡಾ.ಜೋಳದರಾಶಿ ದೊಡ್ಡನಗೌಡರ ಜನ್ಮದಿನ ಅಂಗವಾಗಿ ಪ್ರತಿ ವರ್ಷ ಪುರಸ್ಕಾರ ನೀಡಲಾಗುತ್ತಿದೆ. ಕಾರ್ಯಕ್ರಮದ ಮುನ್ನ ದಿನವಾದ ಜು.27ರಂದು ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿಯಿಂದ ಚೇಳ್ಳಗುರ್ಕಿ ಕ್ರಾಸ್‌ನಲ್ಲಿರುವ ದೊಡ್ಡನಗೌಡರು ಸಮಾಧಿಸ್ಥಳದವರೆಗೆ ರಂಗಜ್ಯೋತಿಯಾತ್ರೆ ನಡೆಯಲಿದೆ. ಅಲ್ಲಿಂದ ಜೋಳದರಾಶಿಯ ಅವರ ನಿವಾಸಕ್ಕೆ ಜ್ಯೋತಿ ತೆರಳಲಿದೆ. ಚೇಳ್ಳಗುರ್ಕಿ ಕ್ರಾಸ್‌ನಲ್ಲಿರುವ ದೊಡ್ಡನಗೌಡರ ಸಮಾಧಿ ಸ್ಥಳದಲ್ಲಿ ಉದ್ಯಾನ ನಿರ್ಮಿಸುವ ಯೋಚನೆ ಇದೆ. ಈ ಕುರಿತು ಗೌಡರ ಕುಟುಂಬ ಸದಸ್ಯರ ಜೊತೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.ಸಾಂಸ್ಕೃತಿಕ ಶಕ್ತಿ ಗೌಡರು:
ಬಳ್ಳಾರಿ ಜಿಲ್ಲೆಯ ಜೋಳದರಾಶಿಯ ದೊಡ್ಡನಗೌಡರು ನಮ್ಮ ನಾಡಿನ ಅಪ್ರತಿಮ ಸಾಂಸ್ಕೃತಿಕ ಶಕ್ತಿಯಾಗಿದ್ದಾರೆ. ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಿದ ಬಳ್ಳಾರಿ ರಾಘವ ಅವರ ಶಿಷ್ಯರಾಗಿದ್ದವರು. ಕುವೆಂಪು, ಕೈಲಾಸಂ, ಶ್ರೀರಂಗ, ಮಾಸ್ತಿ, ಬಿಎಂಶ್ರೀ, ಅನಕೃ, ಡಿವಿಜಿ ಅಂಥವರಿಂದ ಪ್ರಾಚೀನ ಹಾಗೂ ಆಧುನಿಕ ಕಾವ್ಯಗಳ ರಸಭರಿತ ಗಮಕಕ್ಕಾಗಿ ಸೈ ಎನಿಸಿಕೊಂಡವರು. ಕನ್ನಡ, ತೆಲುಗು ಉಭಯ ಭಾಷೆಗಳಲ್ಲಿ ನಾಟಕ, ಭಕ್ತಿಗೀತೆ, ವಚನಗಳನ್ನು ರಚಿಸಿ ಸಾಂಸ್ಕೃತಿಕ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು. ನಟ, ನಾಟಕಕಾರ, ಗಮಕ, ವಚನ, ಲಾವಣಿಕಾರ, ಕವಿ, ಸಾಹಿತಿ, ಸಂಘಟಕ, ಪ್ರವಚನ ಶಿರೋಮಣಿಯಾಗಿದ್ದ ಗೌಡರನ್ನು ಔಚಿತ್ಯಪೂರ್ಣವಾಗಿ ಸ್ಮರಿಸಿಕೊಳ್ಳಲು ರಂಗತೋರಣ ಸದಾ ಪ್ರಯತ್ನಿಸುತ್ತಿದ್ದು, 2016ರಿಂದ ಅವರ ಹೆಸರಿನಲ್ಲಿ ರಾಜ್ಯದ ಹಿರಿಯ ರಂಗಕರ್ಮಿಗಳಿಗೆ ರಾಜ್ಯಮಟ್ಟದ ರಂಗತೋರಣ ಪುರಸ್ಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.ಜೋಳದರಾಶಿ ದೊಡ್ಡನಗೌಡ ಟ್ರಸ್ಟ್‌ನ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ , ರಂಗತೋರಣದ ಅಡವಿಸ್ವಾಮಿ ಹಾಗೂ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ಎಚ್.ತಿಪ್ಪೇಸ್ವಾಮಿ ಮುದ್ದಟನೂರು ಸುದ್ದಿಗೋಷ್ಠಿಯಲ್ಲಿದ್ದರು.