ಕನ್ನಡಪ್ರಭ ವಾರ್ತೆ ಕೊಪ್ಪಳ
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಗಳು ಹದಗೆಟ್ಟು ಹೋಗಿದ್ದು, ಇವುಗಳ ತ್ವರಿತ ದುರಸ್ತಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆಗ್ರಹಿಸಿದ್ದಾರೆ.ಕೊಪ್ಪಳ ಮತಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಕುರಿತು ಸದನದಲ್ಲಿ ಮಾತನಾಡಿ, ಗ್ರಾಮೀಣ ರಸ್ತೆಗಳು ತೀರಾ ಹದಗೆಟ್ಟು ಹೋಗಿದ್ದು, ಇದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಅತಿಯಾದ ಮಳೆಯಿಂದಾಗಿ ರಸ್ತೆಗಳು ಸಂಚಾರ ಮಾಡದಷ್ಟು ಕೆಟ್ಟು ಹೋಗಿದ್ದು, ದುರಸ್ತಿಗಾಗಿ ವಿಶೇಷ ಅನುದಾನ ನೀಡಬೇಕು.
ನಮ್ಮ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿ ಬರುವ ಗ್ರಾಮೀಣ ಪ್ರದೇಶದ ರಸ್ತೆಗಳು ಸತತ ಮಳೆಯಿಂದ ಹಾಳಾಗಿದ್ದು, ರಸ್ತೆಗಳ ಅಭಿವೃದ್ಧಿಗೆ ತ್ವರಿತಗತಿಯಲ್ಲಿ ಅನುದಾನ ಮಾಡಿ ಬಿಡುಗಡೆ ಮಾಡುವಂತೆ ಗ್ರಾಮೀಣ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆಗ್ರಹಿಸಿದರು.ನಮ್ಮ ಸರ್ಕಾರ ಬಂದ ನಂತರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಪ್ರಗತಿಪಥ ಯೋಜನೆ ಜಾರಿ ಮಾಡಿದ್ದು, ಈ ಯೋಜನೆಯಡಿ ಅನುದಾನ ಮಂಜೂರು ಮಾಡಿ ಎಂದು ಸಚಿವರಲ್ಲಿ ಬೇಡಿಕೆ ಇಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಕೊಪ್ಪಳ ಶಾಸಕರ ಮನವಿ ಸ್ವೀಕಾರ ಮಾಡುತ್ತೇವೆ. ನಮ್ಮ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಯ ಸಲುವಾಗಿ ಪ್ರಗತಿಪಥ ಎಂಬ ಯೋಜನೆಯನ್ನು ಜಾರಿ ಮಾಡಿದ್ದು, ಕಳೆದ ಕ್ಯಾಬಿನೆಟ್ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿಯೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದು ಈ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೂ ಪ್ರತಿವರ್ಷ 25ರಿಂದ 30 ಕಿಲೋಮೀಟರ್ ರಸ್ತೆಯ ಅಭಿವೃದ್ಧಿಗೆ ಅನುದಾನ ನೀಡುತ್ತೇವೆ. ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ ಎಂದು ತಿಳಿಸಿದರು.