ಕಾರಟಗಿ:
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದು, ಪಕ್ಷವನ್ನು ಬಲಿಷ್ಠವಾಗಿ ಕಟ್ಟಿದ್ದಾರೆ. ಅವರು ಪಕ್ಷದಿಂದ ಹೊರ ಹೋಗುತ್ತಾರೆ ಎಂಬುದು ಹಾಸ್ಯಾಸ್ಪದ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ಡಿಕೆಶಿ ಮಹಾರಾಷ್ಟ್ರದ ಮತ್ತೊಬ್ಬ ಶಿಂಧೆಯಾಗುತ್ತಾರೆ ಎಂದು ಬಿಜೆಪಿಯವರು ಹೇಳುತ್ತಿರುವುದು ಕನಸಿನ ಮಾತು ಎಂದಿರುವ ಸಚಿವರು, ಕಳೆದ ಎರಡು ದಿನಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆ ಮತ್ತು ಡಿ.ಕೆ. ಶಿವಕುಮಾರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಭಾಗವಹಿಸಿರುವ ಚರ್ಚೆಯ ವಿಷಯ ಕುರಿತು ಅವರು ಶುಕ್ರವಾರ ಸುದ್ದಿಗಾರರಗೆ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ರಾಜ್ಯದಲ್ಲಿ ಪಕ್ಷವನ್ನು ಅತ್ಯಂತ ಬಲಿಷ್ಠವಾಗಿ ಕಟ್ಟಿ ಸರ್ಕಾರ ರಚಿಸಿದ್ದಾರೆ. ಇದೀಗ ಡಿಕೆಶಿ ಪ್ರಯಾಗ್‌ರಾಜ್‌ಕ್ಕೆ ಹೋಗಿರುವುದು, ಹಿಂದುತ್ವ ವಿಷಯ ಬಗ್ಗೆ ಮಾತನಾಡಿರುವುದು ಹಾಗೂ ಈಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವುದು ಸಾಮಾನ್ಯ ವಿಷಯ. ಇದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ರಾಜಕಾರಣದಲ್ಲಿ ಎಲ್ಲರೊಂದಿಗೆ ಭಾಗವಹಿಸುವ ಸಂದರ್ಭಗಳು ಸದಾ ಬರುತ್ತವೆ, ಬಿಜೆಪಿ ಮುಖಂಡರ ದೋಸ್ತಿ ಮಾಡಿದರೆ ಎಲ್ಲರು ಬಿಜೆಪಿ ಸೇರಲು ಸಾಧ್ಯವಿಲ್ಲ. ನನಗೂ ಕೂಡಾ ಬಿಜೆಪಿಯವರು ಸಾಕಷ್ಟು ಜನ ಗೆಳೆಯರಿದ್ದಾರೆ ಎಂದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುಂಭಮೇಳ ವಿರೋಧಿಸಿಲ್ಲ. ಕುಂಭಮೇಳವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ ಎಂದಿರುವ ತಂಗಡಗಿ, ಕೆಲಸದ ಒತ್ತಡದಿಂದ ನಾನು ಕುಂಭಮೇಳಕ್ಕೆ ಹೋಗಲಿಲ್ಲ. ಕಾಂಗ್ರೆಸ್ ಪಕ್ಷದಲ್ಲೂ ಬಹುತೇಕ ನಾಯಕರು ಹಿಂದುತ್ವದ ವಿಚಾರ, ದೇವರು, ಧರ್ಮ ನಂಬುತ್ತಾರೆ. ಆದರೆ, ನಾವು ಎಲ್ಲ ಧರ್ಮದವರನ್ನು ಪ್ರೀತಿಸುತ್ತೇವೆ, ಎಲ್ಲರನ್ನು ಸಮಾನರಾಗಿ ಕಾಣುತ್ತೇವೆ. ಬಿಜೆಪಿಗರಂತೆ ಧರ್ಮ ರಾಜಕಾರಣ ಮಾಡುವುದಿಲ್ಲ ಎಂದರು.
ಬಿಜೆಪಿಯಲ್ಲಿ 18 ಬಣ:ನಾವು ನೀಡುತ್ತಿರುವ ಐದು ಗ್ಯಾರಂಟಿಗಳ ಬಗ್ಗೆ ಜನರಲ್ಲಿ ನಂಬಿಕೆ ಬಂದಿದೆ. ಹೀಗಾಗಿ ರಾಜ್ಯದ ಜನತೆ ಸಿದ್ದರಾಮಯ್ಯ ಸರ್ಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಇದು ಬಿಜೆಪಿಗರಿಗೆ ಸಹಿಸಲಾಗದೆ ಕಾಂಗ್ರೆಸ್ ಸರ್ಕಾರ ಇಬ್ಭಾಗವಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ತಮ್ಮಲ್ಲೆ ಹದಿನೆಂಟು ಬಣವಾಗಿರುವ ಬಿಜೆಪಿಗರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಮುಂಬರುವ ಬಜೆಟ್‌ನಲ್ಲಿ ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಿಎಂ ಅನುದಾನ ನೀಡಲಿದ್ದಾರೆ, ಜಿಲ್ಲೆಗೆ ಅವಶ್ಯವಿರುವ ಯೋಜನೆ ಮತ್ತು ಅನುದಾನ ಕುರಿತು ನಾನು ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ್ ಸೇರಿ ಸಿಎಂ ಗಮನಕ್ಕೆ ತಂದಿದ್ದೇವೆ. ತುಂಗಭದ್ರಾ ಜಲಾಶಯದ ಕ್ರಸ್ಟಗೇಟ್‌ಗಳನ್ನು ಹಂತ ಹಂತವಾಗಿ ಅಳವಡಿಸಲಾಗುತ್ತದೆ. ಎರಡು ಬೆಳೆಗೆ ನೀರು ಕೊಡುತ್ತೇವೆ ಎಂದು ರೈತರಿಗೆ ನೀಡಿದ್ದ ಭರವಸೆ ಈಡೇರಿಸಿದ್ದೇವೆ ಎಂದರು.
ದಢೇಸೂಗೂರಗೆ ಸಂಸ್ಕೃತಿ, ಸಂಸ್ಕಾರವಿಲ್ಲಸಂಸ್ಕೃತಿ, ಸಂಸ್ಕಾರವಿಲ್ಲದ ವ್ಯಕ್ತಿಯನ್ನು ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ದೇವದಾಸಿಯರಿಗೆ ಹಂಚಿಕೆ ಮಾಡಿರುವ ಭೂಮಿಯನ್ನೇ ಕಬಳಿಸಿರುವ ಮಾಜಿ ಶಾಸಕ ಬಸವರಾಜ ದಢೇಸೂಗೂರು ಹಿಂದೆ ಎಂತಹ ಕೆಲಸ ಮಾಡಿದ್ದಾರೆ ಎಂಬುದು ಕ್ಷೇತ್ರದ ಪ್ರತಿಯೊಬ್ಬರಿಗೂ ಗೊತ್ತಿದೆ. ಅಂತಹವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿರುವ ಬಿಜೆಪಿ ಯಾವ ಮಟ್ಟಕ್ಕಿಳಿದಿದೆ ಎಂದು ಜನರೇ ಯೋಚಿಸುತ್ತಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.