ಬಳ್ಳಾರಿ ನಗರದ ಇನ್ಫೆಂಟ್ರಿ ರಸ್ತೆಯ ನೇತಾಜಿ ನಗರದ ಕೆಎಚ್‌ಬಿ ಕಾಲನಿಯ ಎಬಿಆರ್ ಕಾಂಪ್ಲೆಕ್ಸ್‌ನ 3ನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡ ಆದಾಯ ತೆರಿಗೆ ತನಿಖಾ ವಿಭಾಗದ ನೂತನ ಕಚೇರಿಯನ್ನು ಹುಬ್ಬಳ್ಳಿ ವಿಭಾಗದ ಆದಾಯ ತೆರಿಗೆ (ತನಿಖೆ) ಇಲಾಖೆಯ ಜಂಟಿ ನಿರ್ದೇಶಕ ಆರ್. ಭರತ್ ಉದ್ಘಾಟಿಸಿದರು.
ಬಳ್ಳಾರಿ: ಉದ್ಯೋಗ ಸೃಷ್ಟಿಸಿ, ದೇಶದ ಮೂಲಸೌಕರ್ಯ ನಿರ್ಮಾಣಕ್ಕೆ ಕೊಡುಗೆ ನೀಡುವ ತೆರಿಗೆದಾರರನ್ನು ಗೌರವಯುತವಾಗಿ ಕಾಣುವುದು ಇಲಾಖೆಯ ಕರ್ತವ್ಯವಾಗಿದ್ದು, ಕಚೇರಿಗೆ ಬರುವ ತೆರಿಗೆದಾರರನ್ನು ಸೂಕ್ತ ಸೌಲಭ್ಯ, ಗೌರವ ನೀಡಿ ಸತ್ಕರಿಸಿ ವಹಿವಾಟುಗಳ ಕುರಿತು ಸಮಾಲೋಚಿಸಬೇಕು ಎಂದು ಹುಬ್ಬಳ್ಳಿ ವಿಭಾಗದ ಆದಾಯ ತೆರಿಗೆ (ತನಿಖೆ) ಇಲಾಖೆಯ ಜಂಟಿ ನಿರ್ದೇಶಕ ಆರ್. ಭರತ್ ಹೇಳಿದರು.
ನಗರದ ಇನ್ಫೆಂಟ್ರಿ ರಸ್ತೆಯ ನೇತಾಜಿ ನಗರದ ಕೆಎಚ್‌ಬಿ ಕಾಲನಿಯ ಎಬಿಆರ್ ಕಾಂಪ್ಲೆಕ್ಸ್ ನ 3ನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡ ಆದಾಯ ತೆರಿಗೆ ತನಿಖಾ ವಿಭಾಗದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ರದುರ್ಗದಿಂದ ಬೀದರ್ ವರೆಗಿನ 12-13 ಜಿಲ್ಲೆಗಳ ಪೈಕಿ ಬಳ್ಳಾರಿಯು ಗರಿಷ್ಠ ಜಿಎಸ್‌ಟಿ ನೋಂದಣಿ ಹಾಗೂ ಅತಿ ಹೆಚ್ಚು ಬ್ಯಾಂಕಿಂಗ್ ವಹಿವಾಟು ಹೊಂದಿರುವ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಬಳ್ಳಾರಿ ವ್ಯಾಪ್ತಿಯೊಂದರಲ್ಲೇ ತೆರಿಗೆ ವಂಚನೆಗೆ ಸಂಬಂಧಿಸಿದಂತೆ 200ಕ್ಕೂ ಹೆಚ್ಚು ಅರ್ಜಿಗಳು/ದೂರುಗಳು ಬಂದಿದ್ದು, ಇತ್ತೀಚೆಗೆ 40 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ವಹಿವಾಟುಗಳ ಆಳವಾದ ತನಿಖೆ ಹಾಗೂ ಅಗತ್ಯವಿದ್ದಲ್ಲಿ ಸರ್ವೆ/ದಾಳಿ ಕಾರ್ಯಾಚರಣೆಗಳು ಮುಂದುವರಿಯಲಿವೆ. ಸ್ಥಳೀಯ ಆರ್ಥಿಕ ಸ್ಥಿತಿಗತಿ ಹಾಗೂ ತೆರಿಗೆ ಸಂಗ್ರಹ ವೃದ್ಧಿಗಾಗಿ ಸಿಎ ಮತ್ತು ವೃತ್ತಿಪರರೊಂದಿಗೆ ನಿಯಮಿತವಾಗಿ ಸಂವಾದ ನಡೆಸಲು ಇಲಾಖೆ ನಿರ್ಧರಿಸಿದೆ ಎಂದು ತಿಳಿಸಿದರು.
ಬಳ್ಳಾರಿಯ ಆದಾಯ ತೆರಿಗೆ ಇಲಾಖೆಯ ಸಹಾಯಕ ನಿರ್ದೇಶಕ (ತನಿಖೆ) ಎ.ಪಿ. ವಿಜಯಚಂದ್ರ ಮಾತನಾಡಿ, 15ರಿಂದ 20 ವರ್ಷಗಳ ಕಾಲ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯು ಇದೀಗ ಸುಸಜ್ಜಿತ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ ಎಂದು ಹೇಳಿದರು.
ಹುಬ್ಬಳ್ಳಿ ವಿಭಾಗದ ಆದಾಯ ತೆರಿಗೆ (ತನಿಖೆ) ಇಲಾಖೆಯ ಸಹಾಯಕ ನಿರ್ದೇಶಕ ಕೆ. ಗೋಪಾಲ್ ಕೃಷ್ಣಮೂರ್ತಿ ಶುಭ ಹಾರೈಸಿದರು. ಬಳ್ಳಾರಿ ವಿಭಾಗದ ಆದಾಯ ತೆರಿಗೆ (ವೃತ್ತ- 1) ಇಲಾಖೆಯ ಸಹಾಯಕ ಆಯುಕ್ತ ಡಿ. ಪಾಂಡುರಂಗ, ಬಳ್ಳಾರಿ ವಿಭಾಗದ ಆದಾಯ ತೆರಿಗೆ (ಮುಖ್ಯ ವೃತ್ತ) ಇಲಾಖೆಯ ಸಹಾಯಕ ಆಯುಕ್ತ ಬಿ.ಜೆ. ರವಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.