ಯಲಬುರ್ಗಾ: ತಾಲೂಕಿನ ಕೋನಸಾಗರ ಗ್ರಾಮಕ್ಕೆ ಹೆಚ್ಚುವರಿ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಎಸ್ಎಫ್ಐ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.
ಎಸ್ಎಫ್ಐ ತಾಲೂಕು ಮುಖಂಡ ರಾಮಮೂರ್ತಿ ಮಾತನಾಡಿ, ತಾಲೂಕಿನ ಕೋನಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ತಾಲೂಕು ಕೇಂದ್ರಕ್ಕೆ ಪ್ರತಿನಿತ್ಯ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯವಿಲ್ಲದೆ ತೀವ್ರ ತೊಂದರೆ ಎದುರಾಗುತ್ತಿದೆ. ಈ ಮಾರ್ಗದಲ್ಲಿ ಒಂದೇ ಬಸ್ ಸಂಚರಿಸುತ್ತಿದ್ದು, ಅದು ತುಮ್ಮರಗುದ್ದಿ, ಹಗೇದಾಳ, ಬೂನಕೊಪ್ಪ, ಚಿಕ್ಕಬನ್ನಿಗೋಳ ತಾಂಡಾ, ಕೋನಸಾಗರ, ವಜ್ರಬಂಡಿ, ಜಿ. ಜರಕುಂಟಿ, ಕುದ್ರಿಕೊಟಗಿ ಮಾರ್ಗವಾಗಿ ಯಲಬುರ್ಗಾಕ್ಕೆ ತೆರಳುತ್ತದೆ. ಇದರಿಂದ ಕೋನಸಾಗರ ಹಾಗೂ ಚಿಕ್ಕಬನ್ನಿಗೋಳ ಭಾಗದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಕಾರಣ ಶಾಲಾ-ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳು ಸಾರಿಗೆ ಘಟಕ ವ್ಯವಸ್ಥಾಪಕರ ಗಮನಕ್ಕೆ ತಂದರೂ ಸ್ಪಂದಿಸದಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನೆಲೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಹೆಚ್ಚುವರಿ ಬಸ್ ಕಳುಹಿಸುವ ವ್ಯವಸ್ಥೆ ಮಾಡಿದರು. ಹೀಗಾಗಿ ಎಸ್ಎಫ್ಐ ವಿದ್ಯಾರ್ಥಿಗಳ ನ್ಯಾಯಯುತ ಹೋರಾಟಕ್ಕೆ ಸ್ಥಳದಲ್ಲೇ ಸಮಸ್ಯೆ ಬಗೆಹರಿದಿದೆ ಎಂದರು.ವಿದ್ಯಾರ್ಥಿಗಳ ಸಂಚಾರದ ಸಮಸ್ಯೆ ಶಾಶ್ವತವಾಗಿ ಬಗೆಹರಿಸಲು ಮುಂದಿನ ದಿನಗಳಲ್ಲಿಯೂ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್ ಬಿಡಬೇಕು. ಇಲ್ಲದಿದ್ದಲ್ಲಿ ಎಸ್ಎಫ್ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಯಲಬುರ್ಗಾ ಬಂದ್ ಮಾಡಲಾಗುವುದು ಎಂದು ಆಗ್ರಹಿಸಿದರು.
ಈ ಸಂದರ್ಭ ಅಂಬೇಡ್ಕರ್ ಯುವಪಡೆಯ ಸೂರಿ, ಎಸ್‌ಎಫ್‌ಐ ಕಾರ್ಯಕರ್ತ ಚಿರಂತ್ ಅಂಗಡಿ, ನಾಗರಾಜ್ ಬುಡಶೆಟ್ನಾಳ, ಬಸು ಬನ್ನಿಗೋಳ, ನೇತ್ರಾ, ಅಕ್ಷತಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.