ಸವಣೂರು: ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗ ರಚಿಸದಿದ್ದರೆ ಈವರೆಗೂ ಬಹುಸಂಖ್ಯಾತರಿಗೆ ನ್ಯಾಯ ಸಿಗುತ್ತಿರಲಿಲ್ಲ. ಆದರೆ ದೇವರಾಜ ಅರಸು ಅವರು ತಮ್ಮ ಕಟು ನಿರ್ಧಾರದಿಂದ ಮುಂದಿನ ಪೀಳಿಗೆಯ ಬದುಕಿನ ದೂರದೃಷ್ಠಿಯಿಂದ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿದ್ದರು ಎಂದು ಉಪ ವಿಭಾಗಾಧಿಕಾರಿ ವಿಜಯಕುಮಾರ ಎಚ್.ಬಿ. ಹೇಳಿದರು.

ಪಟ್ಟಣದ ಡಾ. ವಿ.ಕೃ.ಗೋಕಾಕ ಸಭಾ ಭವನದಲ್ಲಿ ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೇವರಾಜು ಅರಸು ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಗೇಣಿ ಶಾಸನ, ಹಾವನೂರು ಆಯೋಗದಂತಹ ಪ್ರಮುಖ ನಿರ್ಧಾರಗಳನ್ನು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ತೆಗೆದುಕೊಂಡ ಹಿನ್ನೆಲೆಯಲ್ಲಿ ಅದರ ಪ್ರತಿಫಲ ಇಂದಿನ ಪೀಳಿಗೆಗೆ ಆಗುತ್ತಿದೆ. ಗೇಣಿ ಹೋರಾಟದ ಅನುಷ್ಠಾನ ಆಗದಿದ್ದರೆ ಬಹುಸಂಖ್ಯಾತರಿಗೆ ನ್ಯಾಯವನ್ನು ದೊರಕಿಸಿಕೊಡಲು ಸಾಧ್ಯವಾಗುತ್ತಿರಲ್ಲಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಹರಿಕಾರ ಅರಸು ಅವರು ಮಲ ಹೊರುವ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಚಾಲನೆ ನೀಡಿದರು. ಅಂತಹ ಮಹಾನ್ ನಾಯಕರ ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಜೀವನ ಸಾರ್ಥಕವಾಗಲಿದೆ. ಅರಸು ಅವರ ಕುರಿತು ಯುವಕರಿಗೆ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವದು ಅವಶ್ಯವಾಗಿದೆ ಎಂದರು.

ತಾಲೂಕು ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷ ಸುಭಾಸ ಮಜ್ಜಗಿ ಮಾತನಾಡಿ, ಜನಸಾಮಾನ್ಯರು ಜನ್ಮದಿನಾಚರಣೆ ಆಚರಿಸಲು ಅರಸು ಅವರ ಸಾಮಾಜಿಕ, ಆರ್ಥಿಕ ಹಾಗೂ ಬೌದ್ಧಿಕವಾಗಿ ಕೈಗೊಂಡ ಸೇವೆ ಕಾರಣವಾಗಿದೆ.

ದೂರದೃಷ್ಠಿ ಹೊಂದಿದ್ದ ರಾಜಕೀಯ ನಾಯಕರು ಆಗಿದ್ದರು. ಇಂದು ಸಹ ಸರ್ಕಾರಗಳು ಡಿ. ದೇವರಾಜ ಅರಸು ಅವರ ಹೆಸರಿನಲ್ಲಿ ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸ್ಥಾಪಿಸಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಸಂತಸ ತಂದಿದೆ ಎಂದರು.


ಶಿಕ್ಷಕ ವಿದ್ಯಾಧರ ಕುತನಿ ಉಪನ್ಯಾಸ ನೀಡಿ, ಸೇನೆಯ ಸೇರುವ ಉದ್ದೇಶ ಹೊಂದಿದ್ದ ಡಿ. ದೇವರಾಜ ಅರಸು ಅವರು ತಾಯಿಯ ಆಸೆಯಂತೆ ಜನರ ಸೇವೆಗೈದು ಜನಮಾನಸರಾದರು. 26ನೇ ವಯಸ್ಸಿಗೆ ರಾಜಕೀಯ ನಾಯಕರಾಗಿ ಬೆಳೆದಿದ್ದು ಇತಿಹಾಸ. ಸಾಹುಕಾರ ಚನ್ನಯ್ಯ ಅವರ ಸಹಕಾರದಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟದ್ದ ಡಿ. ದೇವರಾಜ ಅರಸು ಅವರ ವಿರುದ್ದ 1962ರಲ್ಲಿ ಚುನಾವಣೆ ಎದುರಿಸಲು ಯಾರು ಮುಂದಾಗದಿದ್ದಾಗ ಅವಿರೋಧವಾಗಿ ಆಯ್ಕೆಯಾಗಿದ್ದರು.

ನೇರ, ದಿಟ್ಟ ವ್ಯಕ್ತಿತ್ವ ಹೊಂದಿದ್ದ ಅರಸು ಅವರು ಸತತ ಎಂಟು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ನಾಡಿನ ಸೇವೆ ಸಲ್ಲಿಸಿದ್ದರು. ಮೈಸೂರ ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ಧೀಮಂತ ನಾಯಕರು.

ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸಿದ ಕೀರ್ತಿ ಹಾಗೂ ಖಾನಾಪೂರದಲ್ಲಿ ನಡೆದ ಘಟನೆಯಲ್ಲಿ ಮರಾಠಿ ಭಾಷಿಗರ ಮನಸ್ಸು ಗೆದ್ದ ನಾಡಿನ ಹೆಸರನ್ನು ಮತ್ತಷ್ಟು ಹೆಚ್ಚಿಸಿದ್ದರು.

ಹಿಂದುಳಿದ ವರ್ಗಗಳ ಆಯೋಗ ರಚಿಸಿ, ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಯೋಜನೆ ಜಾರಿಗೊಳಿಸಿದರು. 1978ರ ವರಿಗೆ ಮುಖ್ಯಮಂತ್ರಿ ಆಗಿದ್ದ ಅರಸು ಅವರನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಆದೇಶ ಮೇರೆಗೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಳಿಸಲಾಗಿತ್ತು. ಅವರು ನಂಬಿದವರೇ ಅವರನ್ನು ರಾಜಕೀಯವಾಗಿ ಸೋಲಿಸಿದರು. ತಹಸೀಲ್ದಾರ್ ರವಿಕುಮಾರ ಕೊರವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ವಸತಿ ನಿಲಯದಲ್ಲಿ ಇದ್ದು ಶಿಕ್ಷಣ ಪಡೆದು ನಾನು ತಹಸೀಲ್ದಾರ್ ಆಗಿದ್ದೇನೆ. ಇಂದು ವಸತಿ ನಿಲಯದಲ್ಲಿ ಇದ್ದು ಶಿಕ್ಷಣ ಪಡೆಯುತ್ತಿರುವ ನೀವು ಸಹ ಉನ್ನತ ಸಾಧನೆಗೆ ಮುಂದಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಬಿಸಿಎಂ ಕಲ್ಯಾಣಾಧಿಕಾರಿ ಸುಲೋಚನಾ ಕಟ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಪಂ ಬಿ.ಎಸ್. ಶಿಡೇನೂರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಹೊಸಮನಿ, ಪ್ರಮುಖರಾದ ನಾಗಪ್ಪ ತಿಪ್ಪನವರ, ಪರಶುರಾಮ ಈಳಗೇರ, ಹರೀಶಗೌಡ ಪಾಟೀಲ, ಬಾಬನಸಾಬ್ ರಾಯಚೂರ, ರಾಮಣ್ಣ ಅಗಸರ ಹಾಗೂ ಇತರರು ಪಾಲ್ಗೊಂಡಿದ್ದರು.