ರಾಜ್ಯ ರಾಜಕಾರಣದ ಮೇಲೆ ತನ್ನದೇ ಆದ ಪ್ರಭಾವ ಬೀರಿರುವ ಬಳ್ಳಾರಿ, ಕಳೆದ ಎರಡು ದಶಕಗಳಿಂದ ಹಲವು ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, ಇದೀಗ ಸಚಿವ ಬಿ. ನಾಗೇಂದ್ರ ಅವರ ರಾಜಿನಾಮೆ ಪ್ರಹಸನ ಬಳ್ಳಾರಿಯ ರಾಜಕೀಯ ರಾಜ್ಯಮಟ್ಟದ ಚರ್ಚೆಗೆ ಮುನ್ನೆಲೆಗೆ ಬಂದಿದೆ.
ಮಂಜುನಾಥ ಕೆ.ಎಂ.
ಬಳ್ಳಾರಿ: ಒಂದಿಲ್ಲೊಂದು ವಿವಾದಗಳಿಗೆ ಸದಾ ಸುದ್ದಿಯಲ್ಲಿರುವ ಬಳ್ಳಾರಿ ರಾಜಕಾರಣ ಇದೀಗ ಸಚಿವ ನಾಗೇಂದ್ರ ಅವರ ರಾಜಿನಾಮೆಗೆ ಒತ್ತಾಯಿಸಿ ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ನಡೆಯುತ್ತಿರುವ ಹೋರಾಟದಿಂದ ಮತ್ತೊಮ್ಮೆ ಸುದ್ದಿಯಲ್ಲಿದೆ.ರಾಜ್ಯ ರಾಜಕಾರಣದ ಮೇಲೆ ತನ್ನದೇ ಆದ ಪ್ರಭಾವ ಬೀರಿರುವ ಬಳ್ಳಾರಿ, ಕಳೆದ ಎರಡು ದಶಕಗಳಿಂದ ಹಲವು ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, ಇದೀಗ ಸಚಿವ ಬಿ. ನಾಗೇಂದ್ರ ಅವರ ರಾಜಿನಾಮೆ ಪ್ರಹಸನ ಬಳ್ಳಾರಿಯ ರಾಜಕೀಯ ರಾಜ್ಯಮಟ್ಟದ ಚರ್ಚೆಗೆ ಮುನ್ನೆಲೆಗೆ ಬಂದಿದೆ.
ಒಂದು ಕಾಲದಲ್ಲಿ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಸಹೋದರರ ಅಕ್ರಮ ಗಣಿಗಾರಿಕೆ ಆರೋಪಗಳು ಬಳ್ಳಾರಿಯನ್ನು ದೇಶದ ಗಮನ ಸೆಳೆಯುವಂತೆ ಮಾಡಿದ್ದವು. 2010ರ ಅವಧಿಯಲ್ಲಿ ಈ ವಿಚಾರ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆರೋಪ-ಪ್ರತ್ಯಾರೋಪ, ಮಾತಿನ ಚಕಮಕಿ ಹಾಗೂ ಬಳ್ಳಾರಿಯ ಬಿಜೆಪಿ ಶಾಸಕರ ವರ್ತನೆ ಕುರಿತು ನಡೆದ ರಾಜಕೀಯ ವಿಶ್ಲೇಷಣೆಗಳು ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದವು. ಅದೇ ಸಂದರ್ಭದಲ್ಲಿ ಸವಾಲೊಂದನ್ನು ಸ್ವೀಕರಿಸಿದ್ದ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ನಡೆಸುವ ಮೂಲಕ ಜಿಲ್ಲೆಯ ರಾಜಕೀಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದ್ದರು. ಅಷ್ಟೇ ಅಲ್ಲ; ಬಳ್ಳಾರಿ ಪಾದಯಾತ್ರೆಯಿಂದಾಗಿಯೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯೂ ಆದರು. ಆಗ ರಾಜ್ಯ ರಾಜಕಾರಣದಲ್ಲಿ ಬಳ್ಳಾರಿ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿತ್ತು.ಇದಕ್ಕೂ ಮುನ್ನವೇ ಬಳ್ಳಾರಿಯ ರೆಡ್ಡಿ ಸಹೋದರರ ರಾಜಕೀಯ ಪ್ರಭಾವ ರಾಜ್ಯದಲ್ಲಿ ಚರ್ಚಿತವಾಗಿತ್ತು. ‘ಆಪರೇಷನ್ ಕಮಲ’ದ ಬೆಳವಣಿಗೆಗಳೊಂದಿಗೆ ರೆಡ್ಡಿ ಸಹೋದರರ ಹೆಸರು ಮುನ್ನೆಲೆಗೆ ಬಂದಿತ್ತು. ಸರ್ಕಾರ ರಚನೆ ಹಾಗೂ ಅಧಿಕಾರದ ರಾಜಕೀಯದಲ್ಲಿ ಬಳ್ಳಾರಿಯ ಪಾತ್ರದ ಕುರಿತು ರಾಜ್ಯದಾದ್ಯಂತ ಚರ್ಚೆ ನಡೆದಿತ್ತು. ಇದರಿಂದ ಜಿಲ್ಲೆ ಕೇವಲ ಗಣಿಗಾರಿಕೆಯ ಕಾರಣಕ್ಕಷ್ಟೇ ಅಲ್ಲ, ರಾಜಕೀಯ ಶಕ್ತಿಕೇಂದ್ರವಾಗಿಯೂ ಗುರುತಿಸಿಕೊಂಡಿತು.
ಮುಂದಿನ ವರ್ಷಗಳಲ್ಲಿ ಬಳ್ಳಾರಿ ರಾಜಕಾರಣ ಮತ್ತೊಂದು ಮಹತ್ವದ ಪ್ರಕರಣಕ್ಕೆ ಸಾಕ್ಷಿಯಾಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೂರಾರು ಕೋಟಿ ರುಪಾಯಿ ಮೌಲ್ಯದ ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿತು. ಪ್ರಕರಣದ ರಾಜಕೀಯ ಪರಿಣಾಮವಾಗಿ ಅಂದಿನ ಸಚಿವರಾಗಿದ್ದ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು. ಪ್ರಕರಣ ರಾಜ್ಯದಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಯಿತು.ಇದೀಗ ಅದೇ ಬಿ. ನಾಗೇಂದ್ರ ಅವರು ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತೊಮ್ಮೆ ಅವರ ವಿರುದ್ಧ ರಾಜಕೀಯ ಸಮರಕ್ಕೆ ಮುಂದಾಗಿದೆ. ನಾಗೇಂದ್ರ ಅವರ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಸದನದ ಒಳಗೂ ಹೊರಗೂ ಪ್ರತಿಭಟನೆ, ಹೋರಾಟ ನಡೆಸುತ್ತಿದೆ. ಪರಿಣಾಮವಾಗಿ ಬಳ್ಳಾರಿಯ ರಾಜಕೀಯ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ಬಳ್ಳಾರಿಯ ಜನರ ಬಗ್ಗೆ ರಾಜ್ಯದ ಜನರು ನಾನಾ ಬಗೆಯಲ್ಲಿ ವಿಶ್ಲೇಷಿಸುವಂತಾಗಿದೆ.
ಇದರ ನಡುವೆ 2026ರ ಜನವರಿ 1ರಂದು ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಹಾಗೂ ಓರ್ವ ವ್ಯಕ್ತಿಯ ಸಾವಿನ ಪ್ರಕರಣವೂ ಜಿಲ್ಲೆಯ ರಾಜಕೀಯ ಮತ್ತು ಸಾಮಾಜಿಕ ವಾತಾವರಣದ ಕುರಿತು ರಾಜ್ಯದ ಗಮನ ಸೆಳೆಯಿತು. ಈ ಘಟನೆ ಬಳ್ಳಾರಿಯ ರಾಜಕೀಯ ವೈಖರಿ ಹಾಗೂ ಇಲ್ಲಿನ ಜನಜೀವನದ ಕುರಿತು ಹಲವು ಚರ್ಚೆಗಳಿಗೆ ಕಾರಣವಾಯಿತು.ಗಣಿಗಾರಿಕೆ ವಿವಾದದಿಂದ ಆರಂಭಿಸಿ ‘ಆಪರೇಷನ್ ಕಮಲ’, ಸಚಿವರ ರಾಜಿನಾಮೆ, ಭ್ರಷ್ಟಾಚಾರ ಆರೋಪ, ರಾಜಕೀಯ ಸಂಘರ್ಷ ಹಾಗೂ ಇತ್ತೀಚಿನ ಘಟನೆಗಳ ವರೆಗೆ ಬಳ್ಳಾರಿ ಒಂದಲ್ಲ ಒಂದು ಕಾರಣಕ್ಕೆ ರಾಜ್ಯದ ರಾಜಕೀಯ ನಕ್ಷೆಯಲ್ಲಿ ತನ್ನ ಛಾಪು ಮೂಡಿಸುತ್ತಲೇ ಬಂದಿದೆ. ಅಧಿಕಾರದ ಆಟದಲ್ಲಿ ಬಳ್ಳಾರಿಯ ಪ್ರಭಾವ ಕಡಿಮೆಯಾಗಿಲ್ಲ ಎಂಬುದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿಯಾಗಿದ್ದು, ರಾಜಕೀಯ ವಿವಾದಗಳ ಜಿಲ್ಲೆ ಎಂಬ ಕುಖ್ಯಾತಿಗೂ ಬಳ್ಳಾರಿ ಒಳಗಾಗಿರುವುದು ಈ ಭಾಗದ ಜನರ ಬೇಸರಕ್ಕೂ ಕಾರಣವಾಗಿಸಿದೆ.