ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ
ಭಾರತದ ಸಂವಿಧಾನ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಇದು ಎಲ್ಲ ನಾಗರಿಕರಿಗೆ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ನ್ಯಾಯ ನೀಡಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಸೋಮವಾರ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣರಾಜ್ಯೋತ್ಸವ ಕೇವಲ ಹಬ್ಬವಲ್ಲ. ಇದು ನಮ್ಮ ಕರ್ತವ್ಯ ನೆನಪಿಸುವ ದಿನ. ದೇಶದ ಕಾನೂನುಗಳನ್ನು ಗೌರವಿಸುವುದು, ಸಾರ್ವಜನಿಕ ಸ್ವತ್ತನ್ನು ಕಾಪಾಡುವುದು, ದೇಶದ ಏಕತೆ ಮತ್ತು ಅಖಂಡತೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ತಹಸೀಲ್ದಾರ್ ಎಸ್.ಅಶ್ವಿನಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, 1950 ರ ಜ.26ರಂದು ನಮ್ಮ ದೇಶಕ್ಕೆ ಸ್ವಂತ ಸಂವಿಧಾನ ಜಾರಿಗೆ ಬಂದು ಭಾರತ ಸಂಪೂರ್ಣ ಗಣರಾಜ್ಯ ರಾಷ್ಟ್ರವಾಗಿ ರೂಪುಗೊಂಡಿತು. ದೇಶಭಕ್ತರ ತ್ಯಾಗ ಮತ್ತು ಬಲಿದಾನದಿಂದ ನಾವಿಂದು ಸ್ವತಂತ್ರವಾಗಿ ಬದುಕಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಶ್ರಮ, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು. ಸ್ವಚ್ಛತೆ, ಪರಿಸರ ಸಂರಕ್ಷಣೆ, ಸಾಮಾಜಿಕ ಸಮಾನತೆ ಗಾಗಿ ಕೆಲಸ ಮಾಡುವುದೇ ನಿಜವಾದ ದೇಶಭಕ್ತಿ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿಮಾಜಿ ಸಚಿವೆ ಮೋಟಮ್ಮ, ಪಪಂ ಮಾಜಿ ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಸದಸ್ಯರಾದ ಹಂಝಾ, ಸಿ.ಬಿ.ಶಂಕರ್, ಜಿಲ್ಲಾ ಕೆಡಿಪಿ ಸದಸ್ಯ ಸುಧೀರ್ ಚಕ್ರಮಣಿ, ತಾಲೂಕು ಸದಸ್ಯರಾದ ಕುನ್ನಳ್ಳಿ ರವಿ, ಸುರೇಂದ್ರ ಉಗ್ಗೇಹಳ್ಳಿ, ಹರೀಶ್ ಸಬ್ಬೇನಹಳ್ಳಿ, ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‌ಗೌಡ, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ನವೀನ್, ಬಿಇಒ ಮೀನಾಕ್ಷಿ, ಸಿಪಿಐ ರಾಜಶೇಖರ್ ಉಪಸ್ಥಿತರಿದ್ದರು. 26 ಮೂಡಿಗೆರೆ 1ಎ: ಮೂಡಿಗೆರೆ ಪಟ್ಟಣದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸದಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿದರು.