ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ನಡತೆ, ಮಾರ್ಗದರ್ಶನ ನೀಡಿ ಬೆಳೆಸಬೇಕು.
ಹಾವೇರಿ: ಇಳಿವಯಸ್ಸಿನಲ್ಲಿರುವ ಹೆತ್ತವರ ಪೋಷಣೆ, ಸಂರಕ್ಷಣೆ ಮಕ್ಕಳ ಕರ್ತವ್ಯ. ಮಕ್ಕಳಿಂದ ವಂಚನೆ, ಕಿರುಕುಳ, ದೌರ್ಜನ್ಯಕ್ಕೆ ಒಳಗಾಗುವ ಪೋಷಕರು ಕಾನೂನು ಸೇವಾ ಪ್ರಾಧಿಕಾರಕ್ಕೆ ಬಂದು ಸಮಾಲೋಚನೆ ನಡೆಸಿ ಅಗತ್ಯ ಕಾನೂನು ನೆರವು ಪಡೆದುಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ದೇವೆಂದ್ರಪ್ಪ ಬಿರಾದಾರ ತಿಳಿಸಿದರು.ವಿಶ್ವ ಹಿರಿಯ ನಾಗರಿಕರ ದೌರ್ಜನ್ಯ ತಡೆ ಜಾಗೃತಿ ದಿನಾಚರಣೆ ಅಂಗವಾಗಿ ಗುರುವಾರ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ- 2007 ಹಿರಿಯರಿಗೆ ಆಹಾರ, ಬಟ್ಟೆ, ವಸತಿ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸುವುದು ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವಾ ಪ್ರಾಕಾರದ ಸದಸ್ಯ ಕಾರ್ಯದರ್ಶಿ ಶೈಲಜಾ ಎಚ್.ವಿ. ಮಾತನಾಡಿ, ಹಿರಿಯ ನಾಗರಿಕರ ಸಂರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಹಿರಿಯರ ಮೇಲಾಗುವ ದೌರ್ಜನ್ಯ, ಸಮಸ್ಯೆಗಳು ಅಧಿಕಾರಿಗಳಿಗೆ ತಲುಪಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕು. ಯಾವುದೇ ಅಧಿಕಾರಿಗಳಿಗೆ ಸಮಸ್ಯೆ ಅರ್ಜಿ ಸಲ್ಲಿಕೆ ಮಾಡಿದ್ದರೂ ಪ್ರಯೋಜನವಾಗದ ಕಾಲಕ್ಕೆ ನೇರವಾಗಿ ಜಿಲ್ಲಾ ಕಾನೂನು ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಿದರೆ ಖಂಡಿತ ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಬಿ. ಅಣ್ಣಿಗೇರಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳು ಹಿರಿಯ ನಾಗರಿಕರನ್ನು ಅಧೋಗತಿಗೆ ತಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿರಿಯರು ತಾವು ಬದುಕಿರುವಷ್ಟು ದಿನ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿ ಇರಬೇಕು ಎಂದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ನಡತೆ, ಮಾರ್ಗದರ್ಶನ ನೀಡಿ ಬೆಳೆಸಬೇಕು. ಎಸ್‌ಪಿ ಕಚೇರಿಯಲ್ಲಿ ಹಿರಿಯ ನಾಗರಿಕರಿಗಾಗಿ ಸಹಾಯವಾಣಿ ಆರಂಭಿಸಲಾಗಿದೆ. ಹಿರಿಯ ನಾಗರಿಕರು ತಮಗೆ ಏನೇ ದೌರ್ಜನ್ಯವಾದರೂ 1930 ಸಂಖ್ಯೆಗೆ ಕರೆ ಮಾಡಿ ಮಾಹಿತಿ ತಿಳಿಸಬಹುದು ಎಂದರು. ಕಾರ್ಯಕ್ರಮದಲ್ಲಿ ವಕೀಲ ಎಂ.ಸಿ. ಭರಮಣ್ಣನವರ ಅವರು, ಹಿರಿಯ ನಾಗರಿಕರ ಕಾಯಿದೆ ಕುರಿತು ಉಪನ್ಯಾಸ ನೀಡಿದರು. ಹಿರಿಯ ನಾಗರಿಕರ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಬೆಳವಡಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ನಾಗರಾಜ ಇಚ್ಚಂಗಿ, ಹಿರಿಯ ನಾಗರಿಕರಾದ ರವಿ ತಾಳಿಕೋಟಿ, ಟಿ.ಬಿ. ಭಾವನೂರು, ಎಸ್.ಎನ್. ತಿಪ್ಪನಗೌಡ್ರ, ಕೆ.ಎನ್. ಪಾಟೀಲ, ವಿ.ವಿ. ಕುಂಬಾರ, ಬಸವರಾಜ ಬೆಲ್ಲದ, ನಾಗರಾಜ ವಿಭೂತಿ, ಶಿವಬಸಪ್ಪ ಗೋವಿ, ಹೇಮಣ್ಣ ಪೂಜಾರ, ರೇಣುಕಾ ಗುಡಿಮನಿ, ಗೋವಿಂದಪ್ಪ ದೊಡ್ಡಮನಿ ಮೊದಲಾದವರು ಇದ್ದರು.
ಹಿರಿಯರಿಂದ ಸಮಸ್ಯೆಗಳ ಅನಾವರಣ
ಹಿರಿಯ ನಾಗರಿಕರ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ನಗರದಲ್ಲಿ ಪ್ರತಿ ದಿನ ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಹಿರಿಯ ನಾಗರಿಕರು ಹೇಳಿಕೊಂಡರು.
ಹಾವೇರಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ, ಫುಟ್‌ಪಾತ್ ಅತಿಕ್ರಮಣ, ಗುರುಭವನ, ಬಸ್ ನಿಲ್ದಾಣ ಸೇರಿ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಅಂಗಡಿಗಳ ವ್ಯಾಪಾರಿಗಳು ರಸ್ತೆಗಳ ಮೇಲೆ ಬಂದು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಹಿರಿಯ ನಾಗರಿಕರಿಗೆ ಓಡಾಡಲು ಸಮಸ್ಯೆಯಾಗುತ್ತಿದ್ದು, ಇದನ್ನು ಪರಿಹರಿಸಬೇಕು. ಆಟೋ ಚಾಲಕರು ಮೀಟರ್ ಹಾಕದೇ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿದ್ದಾರೆ. ಯುವಕರಿಂದ ಟ್ರಾಫಿಕ್ ನಿಯಮ ಉಲ್ಲಂಘನೆಯಾಗುತ್ತಿವೆ.
ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸುವುದು ಸೇರಿ ಹಲವು ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಹುಲಗೂರ ಪಿಎಸ್‌ಐ ಪರಶುರಾಮ ಕಟ್ಟಿಮನಿ ಅವರು ಅಹವಾಲು ಸ್ವೀಕರಿಸಿ, ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.