ದಾಬಸ್‍ಪೇಟೆ: ಕಲೆಯನ್ನು ಉಳಿಸಿ ಸಾಂಸ್ಕೃತಿಕ ನೆಲಗಟ್ಟನ್ನು ಕಾಯ್ದುಕೊಳ್ಳುವುದು ಮಠಮಾನ್ಯಗಳ ಕರ್ತವ್ಯಗಳಲ್ಲೊಂದಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯ ಯೋಜನೆಗಳನ್ನು ಕ್ರಿಯಾಶೀಲಗೊಳಿಸಬೇಕು ಎಂದು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ವನಕಲ್ಲು ಮಠದ ಡಾ.ಶ್ರೀ ಬಸವರರಮಾನಂದ ಸ್ವಾಮೀಜಿ ಮಾತನಾಡಿ, ಪಾಣಿನಿಯು ಮಹೇಶ್ವರ ಸೂತ್ರದಿಂದ ವ್ಯಾಕರಣ ಶಾಸ್ತ್ರವನ್ನು ಪ್ರಾರಂಭಿಸಿದನು. ಮಹಾಕವಿ ಕಾಳಿದಾಸ ವಾಗರ್ಥಾವಿವ ಶ್ಲೋಕದಿಂದ ಕುಮಾರ ಸಂಭವವೆಂಬ ಮಹಾಕಾವ್ಯವನ್ನು ಪ್ರಾರಂಭಿಸಿದರು. ದಂಡಿ, ಬಾಣ, ಹರ್ಷ ಇತ್ಯಾದಿ ಕವಿಗಳಿಂದ ಸಂಸ್ಕೃತ ಇಂದಿಗೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ ಎಂದರು.
ಶರಣಶ್ರೀ ಪ್ರಶಸ್ತಿ ಪುರಸ್ಕೃತ ವೀರೇಶ್ ಮಾತನಾಡಿ, ನಾಡಿನ ಕಲೆಗಳ ಪ್ರಕಾರಗಳಲ್ಲಿ ಜಾನಪದೀಯ ಕಲೆಗಳನ್ನು ದೇಶೀಯ ಕಲೆಗಳನ್ನಾಗಿ ಉಳಿಸಲು ಲಾಲನೆ ಪೋಷಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ವನಕಲ್ಲು ಮಠವು ರಾಜ್ಯದ ನೂರಾರು ಕಲಾವಿದರನ್ನು ಮತ್ತು ಕಲಾತಂಡಗಳನ್ನು ಕಲೆಹಾಕಿ ಕಲೆಯ ಆರಾಧನೆಗೆ ಒತ್ತು ನೀಡಿರುವುದು ಸಂತಸದ ಸಂಗತಿ. ಶ್ರೀಮಠದಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೈಶಿಷ್ಟ್ಯ ಪೂರ್ಣವಾಗಿ ರೂಪಿಸಿದ್ದು, ಇಂತಹ ಮಹತ್ಕಾರ್ಯಕ್ಕೆ ಸರ್ವರೂ ಸಹಕರಿಸಬೇಕೆಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಾಮಾಂಜಿನೇಯ, ಎಚ್.ಪಿ.ಸುರೇಶ್, ಶಿವಕುಮಾರ್ ನಾಗರನವಿಲೆ, ಯುವ ಮುಖಂಡ ತೀರ್ಥಕುಮಾರ್, ನಾಗೇಶ್ ಮತ್ತೀತ್ತರಿದ್ದರು.