ರಾಮನಗರ: ನಗರದ ಆಗಾ ಮತ್ತು ಜಿ ಕಾರ್ಪ್ ಬಡಾವಣೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರನ್ನು ಎರಡು ಬಡಾವಣೆ ನಿವಾಸಿಗಳು ಅಭಿನಂದಿಸಿ ಗೌರವಿಸಿದರು.
ಬಡಾವಣೆ ನಿವಾಸಿಗಳ ಮನವಿ ಆಲಿಸಿದ ಕೆ.ಶೇಷಾದ್ರಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ, ಚಾಲನೆ ಸಹ ನೀಡಲಾಗಿದೆ. ನೀರು ಅತ್ಯಮೂಲ್ಯವಾಗಿದೆ. ಅವಶ್ಯಕತೆ ಇದ್ದಷ್ಟು ನೀರನ್ನು ಬಳಸಿ, ವ್ಯರ್ಥ ಮಾಡಬೇಡಿ ಎಂದು ಕಿವಿಮಾತು ಹೇಳಿದರು.ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದು ನಮ್ಮ ಕರ್ತವ್ಯವಾಗಿದೆ. ಕುವೆಂಪುನಗರದಲ್ಲಿ ಅಲ್ಲಿನ ನಿವಾಸಿಗಳೇ ಉದ್ಯಾನವನದ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಹಾಗಾಗಿ ಈ ಎರಡು ಬಡಾವಣೆಗಳ ನಿವಾಸಿಗಳು ಸಸಿ ನೆಟ್ಟು ತಮ್ಮ ಬಡಾವಣೆಯ ಪಾರ್ಕ್ ಗಳನ್ನು ನಿರ್ವಹಣೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಳ್ಳಿ, ನಿಮ್ಮಲ್ಲಿ ಒಗ್ಗಟ್ಟು ಇದ್ದಾಗ ಬಡಾವಣೆ ಸಮಸ್ಯೆಗಳ ಪರಿಹಾರ ಸಾಧ್ಯ ಎಂದು ಸಲಹೆ ನೀಡಿದರು.
ಕಸ ವಿಲೇವಾರಿ ಸಂಬಂಧ ಸ್ಥಳದ ಸಮಸ್ಯೆ ಎದುರಾಯಿತು. ಜನರು ವಿರೋಧ ಸಹ ವ್ಯಕ್ತ ವಾಯಿತು. ಎಸ್ ಡಬ್ಲ್ಯೂ ಪ್ಲಾಂಟ್ ಆಗುವವರೆಗೆ ಸ್ವಲ್ಪ ಸಮಸ್ಯೆಯಿದೆ. ಈಗ ವಾಹನದಲ್ಲಿ ವಿಂಗಡಣೆ ಮಾಡಿ ಒಣ ಮತ್ತು ಹಸಿ ಕಸ ಸಂಗ್ರಹಿಸಲಾಗುತ್ತದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಕೆ.ಶೇಷಾದ್ರಿ ಹೇಳಿದರು.ಬಡಾವಣೆ ನಿವಾಸಿ ಸಣ್ಣೇಗೌಡ ಮಾತನಾಡಿ, ಕೊಂಕಾಣಿದೊಡ್ಡಿ ವಾರ್ಡಿನಿಂದ ಆಗಾ ಮತ್ತು ಜಿ ಕಾರ್ಪ್ ಬಡಾವಣೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದೆವು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರಾದ ಕೆ.ಶೇಷಾದ್ರಿ ಅವರ ಕಾಳಜಿಯಿಂದ ಬಡಾವಣೆಗೆ ನೀರಿನ ಸಂಪರ್ಕ ಬಂದಿದೆ. ಅವರಿಗೆ ಬಡಾವಣೆ ನಾಗರಿಕರ ಪರವಾಗಿ ಕೃತಜ್ಞಗಳನ್ನು ತಿಳಿಸಿದರು.
ಈ ವೇಳೆ ನಿವಾಸಿಗಳು ರಾತ್ರಿ ವೇಳೆ ರಸ್ತೆಯಲ್ಲಿ ಲೈಟ್ ವ್ಯವಸ್ಥೆ ಇಲ್ಲ, ಕತ್ತಲಲ್ಲಿ ಲೇ ಔಟ್ ಗೆ ಹೋಗಿ ಬರಲು ತೊಂದರೆಯಾಗುತ್ತಿದೆ. ಕಂಬಗಳಿಗೆ ದೀಪ ಕಲ್ಪಿಸಿ, ರಸ್ತೆ, ಯುಜಿಡಿ, ಚರಂಡಿ ಸಮಸ್ಯೆಗಳ ಬಗ್ಗೆ ಅಧ್ಯಕ್ಷರ ಗಮನ ಸೆಳೆದರು.ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿಸುರೇಶ್, ಪ್ರಾಧಿಕಾರದ ನಿರ್ದೇಶಕ ಪ್ರವೀಣ್, ವಾಟರ್ ಬೋರ್ಡ್ ಇಂಜಿನಿಯರ್ ಶಿವರಾಜು, ಮುಖಂಡರಾದ ಡೈರಿ ವೆಂಕಟೇಶ್, ಕಬಡ್ಡಿ ವಿಜಿ, ಲಕ್ಷ್ಮಿಪತಿ, ಹೊನ್ನಪ್ಪ, ವಡೇರಹಳ್ಳಿ ನಾಗರಾಜು, ಶ್ರೀ ರಾಮದೇವರ ಬೆಟ್ಟ ಸೇವಾ ಸಮಿತಿ ಅಧ್ಯಕ್ಷ ನರಸಿಂಹಯ್ಯ, ವಿಶ್ವ ಮೊದಲಾದವರು ಹಾಜರಿದ್ದರು.
13ಕೆಆರ್ ಎಂಎನ್ 3.ಜೆಪಿಜಿರಾಮನಗರದ ಆಗಾ ಮತ್ತು ಜಿ ಕಾರ್ಪ್ ಲೇ ಔಟ್ ಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಅವರನ್ನು ಎರಡು ಬಡಾವಣೆ ನಿವಾಸಿಗಳು ಅಭಿನಂದಿಸಿದರು.