ಕನ್ನಡಪ್ರಭ ವಾರ್ತೆ ಸುರಪುರ
ಹಿರಿಯರು ಕುಟುಂಬದ ಮೂಲಬೇರುಗಳಾಗಿದ್ದು, ಅವರನ್ನು ಸಂರಕ್ಷಿಸುವುದು ಮಕ್ಕಳ ಮತ್ತು ಸಮಾಜದ ಜವಾಬ್ದಾರಿಯಾಗಿದೆ. ಹಿರಿಯರಿಗೆ ಅನ್ಯಾಯವಾದಲ್ಲಿ ನ್ಯಾಯಾಲಯವು ನ್ಯಾಯ ಕೊಡಿಸುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಫಕೀರವ್ವ ಕೆಳಗೇರಿ ಹೇಳಿದರು.ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿಗಳ ಸಂಘ ಹಾಗೂ ತಾಲೂಕಾ ಆಡಳಿತ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನಿನ ಅರಿವು-ನೆರವು ಕಾರ್ಯಕ್ರಮದಲ್ಲಿ ನಡೆದ ಹಿರಿಯರ ನಾಗರಿಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
2016ರ ಯೋಜನೆ ಅನ್ವಯ ಹಿರಿಯ ನಾಗರಿಕರಿಗೆ ಕಾನೂನು ಸೇವೆಗಳು ದೊರೆಯುತ್ತವೆ. 60 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಹಿರಿಯ ನಾಗರಿಕರಾಗುತ್ತಾರೆ. ಹಿರಿಯರನ್ನು ನಿರ್ಲಕ್ಷ್ಯ ಮಾಡಬಾರದು. ಮಕ್ಕಳು ಹಿರಿಯರ ಆಸ್ತಿ ಕಬಳಿಕೆ ಮಾಡಿ ವೃದ್ಧಾಶ್ರಮಕ್ಕೆ ತಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದಾಗಿದೆ. ಹಿರಿಯರನ್ನು ರಕ್ಷಿಸಿ, ಮೂಲಸೌಲಭ್ಯ ಒದಗಿಸಿಕೊಡುವುದು ಮಕ್ಕಳ ಕರ್ತವ್ಯವಾಗಿದೆ ಎಂದು ತಿಳಿಸಿದರು.ಹೆತ್ತವರು ಮಕ್ಕಳನ್ನು ದೊಡ್ಡವರನ್ನಾಗಿ ಮಾಡಲು ಪಟ್ಟ ಕಷ್ಟ ಅವರಿಗೆ ನೆನಪಿಗೆ ಬಾರದಿರುವುದು ದುರದೃಷ್ಟವಾಗಿದೆ. ಪತ್ನಿ ಮತ್ತು ತಮ್ಮ ಮಕ್ಕಳಿಗೆ ಆದ್ಯತೆ ನೀಡುತ್ತಾರೆ. ತಂದೆ-ತಾಯಿಯಂದಿರನ್ನು ನಿರ್ಲಕ್ಷಿಸುತ್ತಾರೆ. ಹಾಗಾದಾರೆ ಮುಪ್ಪಿನ ಕಾಲಕ್ಕೆ ಪ್ರತಿಯೊಬ್ಬರೂ ಬರಲೇಬೇಕು. ಹಿರಿಯರನ್ನು ಗೌರವಿಸುವುದು, ಸಾಕುವುದನ್ನು ಮಕ್ಕಳು ನೋಡದಿದ್ದರೆ ನಿಮ್ಮನ್ನು ಹೇಗೆ ಸಲುಹಬಹುದು ಎಂಬುದನ್ನು ಅರಿಯಬೇಕು. ಹಿರಿಯ ಆರೋಗ್ಯದ ರಕ್ಷಣೆಗೆ ಒತ್ತು ನೀಡಬೇಕು ಎಂದರು.
ಹಿರಿಯ ವಕೀಲರಾದ ಅರವಿಂದಕುಮಾರ, ವಿ.ಸಿ. ಪಾಟೀಲ್ ಮಾತನಾಡಿದರು. ಗ್ರೇಡ್-2 ತಹಸೀಲ್ದಾರ್ ಮಲ್ಲು ದಂಡು, ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ, ಸಹಾಯಕ ಸರಕಾರಿ ಅಭಿಯೋಜಕ ಮರೆಪ್ಪ ಹೊಸಮನಿ, ವಕೀಲರಾದ ನಿಂಗಣ್ಣ ಚಿಂಚೋಡಿ, ನಾಗರಾಜ ಚವಲ್ಕರ್, ಹಿರಿಯ ನಾಗರಿಕರಾದ ಶಿವಣ್ಣ ಕಟ್ಟಿಮನಿ, ಗುಮಾಸ್ತ ಗುರುಬಸಪ್ಪ ಸೇರಿದಂತೆ ಇತರರಿದ್ದರು. ಎಫ್‌ಡಿಎ ಚನ್ನಬಸವ ಚಲವಾದಿ ಸ್ವಾಗತಿಸಿದರು. ನಂದಕುಮಾರ ಪಿ. ಬಾಂಬೆಕರ ಕನ್ನಳ್ಳಿ ನಿರೂಪಿಸಿದರು. ಮಂಜುನಾಥ ಹುದ್ದಾರ ವಂದಿಸಿದರು.