ಹಾವೇರಿ: ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಬಿಜೆಪಿಯ ನಾಯಕರು ಒಂದಾಗಬೇಕು ಅನ್ನುವ ಭಾವನೆ ಜನ ಸಾಮಾನ್ಯರಲ್ಲಿದೆ. ನಮ್ಮ ಕಾರ್ಯಕರ್ತರಲ್ಲೂ ಇದೆ. ಆ ಕಾರಣಕ್ಕೆ ಎಲ್ಲರೂ ಕೂಡ ಒಂದಾಗಬೇಕು ಅನ್ನುವಂತ ವಾತಾವರಣ ಮೂಡಿದೆ. ಇದು ಒಳ್ಳೆಯ ಬೆಳವಣಿಗೆ, ಪಕ್ಷದಿಂದ ಹೊರ ಹೋಗಿರುವ ಎಲ್ಲ ನಾಯಕರನ್ನು ವಾಪಸ್ ತರುವ ತೀರ್ಮಾನ ಹೈಕಮಾಂಡ್ ಮಟ್ಟದಲ್ಲಿ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಈಶ್ವರಪ್ಪನವರನ್ನು ಯಾವಾಗ ಸೇರಿಸಿಕೊಳ್ಳುತ್ತೀರಿ ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ಇದನ್ನು ಹೈಕಮಾಂಡ್ ತೀರ್ಮಾನ ಮಾಡಬೇಕು. ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಅಮಿತ್ ಶಾ ಅವರನ್ನು ಭೇಟಿ ಆಗುತ್ತಿದ್ದಾರೆ. ಬಹುತೇಕ ಅಲ್ಲಿ ಚರ್ಚೆಗೆ ಬರಬಹುದು. ಇದು ಪ್ರಾರಂಭ, ಇನ್ನೂ ಹಲವಾರು ಸುತ್ತಿನ ಚರ್ಚೆ ಆಗುತ್ತದೆ ಎಂದು ಹೇಳಿದರು.
ಅಕ್ರಮ ದಂಧೆ ನಿಯಂತ್ರಣ, ಗೃಹ ಸಚಿವರು ಗಮನ ಹರಿಸಬೇಕು..ಹಾವೇರಿ ಜಿಲ್ಲೆಯಲ್ಲಿ ಮಟ್ಕಾ, ಇಸ್ಪೀಟ್ ದಂಧೆ ಹೆಚ್ಚಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಮಿತಿ ಮೀರಿ ಹೋಗಿದೆ. ಮಿತಿ ಮೀರಿ ಎಷ್ಟು ಹೋಗಿದೆ ಅಂತಂದ್ರೆ ಇಲ್ಲಿ ಯಾರಿಗೂ ಕಂಟ್ರೋಲ್ ಮಾಡುವಂತಹ ನೈತಿಕ ಶಕ್ತಿ ಇಲ್ಲ. ಇದರಲ್ಲಿ ಎಲ್ಲರೂ ಪಾಲುದಾರರು ಇದ್ದಾರೆ. ಇಡೀ ರಾಜ್ಯದಲ್ಲಿ ಈ ತರದ ಅಡ್ಡೆಗಳು ನಡೆದಿದೆ. ಇದರ ಜೊತೆಗೆ ಬಹಳ ಆತಂಕಕಾರಿಯಾದಂತದ್ದು ಡ್ರಗ್ಸ್. ಗ್ರಾಮೀಣ ಪ್ರದೇಶದಲ್ಲಿ ಈಗ ಡ್ರಗ್ಸ್ ಇರುವಂತಹ ವ್ಯವಸ್ಥೆ ನೋಡಿದಾಗ ಮತ್ತು ಅದರಿಂದ ಆಗ್ತಾ ಇರುವಂತ ಕ್ರೈಮ್‌ಗಳು ಅದಕ್ಕೆ ಪುರಾವೆ ಇವೆ. ಎಲ್ಲಾ ಸ್ಕೂಲ್ ಕಾಲೇಜ್ ಹತ್ತಿರ ಡ್ರಗ್ಸ್ ವ್ಯವಸ್ಥೆಗಳು ಆಗ್ತಾ ಇದೆ. ನಾನು ಹಲವಾರು ಬಾರಿ ಹೇಳಿದ್ದೇನೆ, ಪುರಾವೆ ಕೊಟ್ಟಿದ್ದೀವಿ, ಲೊಕೇಶನ್ಸ್ ಹೇಳಿದ್ದೀವಿ, ನೀವು ಹೇಳಿದ್ದೀರಿ. ಈ ಬಗ್ಗೆ ಡಿಜಿಪಿ ಮತ್ತು ಹೋಮ್ ಮಿನಿಸ್ಟರ್ ವೈಯಕ್ತಿಕವಾಗಿ ಆಸಕ್ತಿ ತೆಗೆದುಕೊಳ್ಳಬೇಕು. ಇಲ್ಲಾಂದ್ರೆ ಒಂದು ಜನಾಂಗವೇ ನಾಶ ಆಗುವಂತಹ ಪರಿಸ್ಥಿತಿ ಇದೆ ಎಂದು ಎಚ್ಚರಿಸಿದರು.
ರೈತರಿಗೆ ಪರಿಹಾರವಿಲ್ಲ: ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಮತ್ತು ಬಡವರಿಗೆ ಸರ್ಕಾರವು ಯಾವುದೇ ರೀತಿಯ ಆರ್ಥಿಕ ನೆರವು ಅಥವಾ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಎಸ್‌ಡಿಆರ್‌ಎಫ್ ನಿಧಿ ಲಭ್ಯವಿದ್ದರೂ, ಸರ್ಕಾರದ ಬಳಿ ಹಣವಿಲ್ಲ ಎಂಬಂತೆ ವರ್ತಿಸುತ್ತಿರುವುದು ಸರಿಯಲ್ಲ ಎಂದರು.