ಕನ್ನಡಪ್ರಭ ವಾರ್ತೆ ಉಡುಪಿ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರದ ಗದ್ದುಗೆಗೆ ಏರಿ ಆರು ತಿಂಗಳಾಯಿತು. ಯಾವ ನಿರೀಕ್ಷೆಯೊಂದಿಗೆ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದರೋ ಅದೇ ಮತದಾರರು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಛೀಮಾರಿ ಹಾಕುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ವ್ಯಂಗ್ಯವಾಡಿದರು. ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ 227 ತಾಲೂಕುಗಳ ಪೈಕಿ 195 ತಾಲೂಕುಗಳನ್ನು ಸಂಪೂರ್ಣ ಬರ ಪೀಡಿತ ಎಂದು ಕಂದಾಯ ಇಲಾಖೆ ಘೋಷಿಸಿ, 30 ಸಾವಿರ ಕೋಟಿ ರು. ಬೆಳೆ ನಷ್ಟವಾಗಿದೆ ಎಂದು ತಿಳಿಸಿದೆ. ಆದರೂ ರಾಜ್ಯ ಸರ್ಕಾರಕ್ಕೆ ಕನಿಷ್ಟ 5 ಸಾವಿರ ಕೋಟಿ ರು.ಗಳನ್ನೂ ಬಿಡುಗಡೆ ಮಾಡಲಿಕ್ಕೆ ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರಕ್ಕೆ ವರದಿ ಕೊಟ್ಟಿದ್ದೇವೆ ಎಂದು ನೆಪ ಹೇಳುತ್ತಿದೆ ಎಂದವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರೈತರು ಬೀಜ, ಗೊಬ್ಬರ ಇಲ್ಲದೆ ಕಂಗಾಲಾಗಿದ್ದಾರೆ. ದಿನಕ್ಕೆ 7 ಗಂಟೆ ನೀಡುತ್ತಿದ್ದ ವಿದ್ಯುತ್ ಅನ್ನು 2 ಗಂಟೆಗೆ ಸೀಮಿತಗೊಳಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆಯ ಒಂದು ರುಪಾಯಿಯನ್ನು ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡಿಲ್ಲ. ಇದರಿಂದ ರಾಜ್ಯದ 54 ಲಕ್ಷ ರೈತರಿಗೆ ಅನ್ಯಾಯವಾಗಿದೆ. ರೈತರ ಖಾತೆಗೆ ಕನ್ನ ಹಾಕಿದ್ದಾರೆ. ಇದು ರೈತರಿಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಯಾಗಿದೆ ಎಂದವರು ಆರೋಪಿಸಿದರು. ಶಾಸಕರ ನೇತೃತ್ವದ ಅಭಿವೃದ್ಧಿಗೆ ಒಂದು ಕೋಟಿಯೂ ಬಿಡುಗಡೆ ಆಗಿಲ್ಲ. ಶಾಲೆಯಲ್ಲಿ ವಿವೇಕ ಕೊಠಡಿಗಳು ನಿರ್ಮಾಣ ಆಗ್ತಿಲ್ಲ, 9000 ಕೊಠಡಿ ನಿರ್ಮಾಣ ಬಾಕಿಯಿದೆ. ಪ.ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ 11,500 ಕೋಟಿ ರು.ಗಳನ್ನು ಗ್ಯಾರೆಂಟಿ ಯೋಜನೆಗೆಂದು ಸರ್ಕಾರ ಬಳಸಿಕೊಂಡಿದೆ. ಜನರ ಹಣದಲ್ಲಿ ಜನರಿಗೆ ಬಸ್, ವಿದ್ಯುತ್, ಅಕ್ಕಿ ಉಚಿತ ಕೊಡುತ್ತಿದ್ದಾರೆ. ಮಕ್ಕಳ ಶಿಕ್ಷಣ, ವಸತಿಗೆ ಮೀಸಲಾದ ಹಣ ಈ ರೀತಿ ಬಳಕೆ ಮಾಡಿರೋದು ಅಕ್ಷಮ್ಯ ಅಪರಾಧ ಎಂದರು. ಖುದ್ದು ಸಚಿವ ಸುಧಾಕರ್ ಎಸ್ಸಿ- ಎಸ್ಟಿ ಭೂಮಿಯನ್ನು ಅಕ್ರಮ ಖರೀದಿ ಮಾಡಿದ್ದಾರೆ. ಕೇಸ್‌ಗೆ ತಡೆಯಾಜ್ಞೆ ತಂದು ಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಸಿಎಂ, ಸಮಗ್ರ ತನಿಖೆಯನ್ನು ನಡೆಸುವಂತೆ ಇಲಾಖೆಗೆ ನಿರ್ದೇಶನ ನೀಡಬೇಕು. ಅಂತಿಮ ವರದಿ ಬರುವವರೆಗೆ ಸಚಿವ ಸ್ಥಾನದಿಂದ ಅವರನ್ನು ಕೆಳಗಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಕಾರ್ಯಕರ್ತ ತನ್ನ ಸಾವಿಗೆ ಸಚಿವ ಶರಣಪ್ರಕಾಶ ಪಾಟೀಲ್ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಅಂದು ಸಂತೋಷ್ ಡೆತ್ ನೋಟ್ ಬರೆದಾಗ, ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದರು. ಈಶ್ವರಪ್ಪ ಮಂತ್ರಿಯಾಗಿ ಮುಂದುವರಿಯಬಾರದು ಎಂದು ಸಿದ್ದರಾಮಯ್ಯ ಹೇಳಿದ್ದರು, ಹಾಗಿದ್ದರೇ ಈಗ ಶರಣಪ್ರಕಾಶ ಪಾಟೀಲ್ ಸಚಿವರಾಗಿ ಮುಂದುವರಿಯಬಹುದೇ ಎಂದು ಪ್ರಶ್ನಿಸಿದರು. * ಹೊಸ ಸಿಎಂ ನಿರೀಕ್ಷೆ 70 ಜನ ಶಾಸಕರು ಬಂಡೆಯಂತೆ ಡಿ.ಕೆ. ಶಿವಕುಮಾರ್ ಪರ ಬಹಿರಂಗ ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ಪಕ್ಷ, ಸರ್ಕಾರ ವಿಭಜನೆಯಾಗಿದೆ. ಆಂತರಿಕ ಗೊಂದಲದಿಂದಾಗಿ ರಾಜ್ಯದ ಅಧಿಕಾರಿಗಳು ಹೊಸ ಸಿಎಂ ನಿರೀಕ್ಷೆ ಮಾಡುತ್ತಿರುವಂತೆ ಕಾಣುತ್ತಿದೆ. ಹಾಗಾಗಿ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ಕೋಟ ಹೇಳಿದರು.