ಶಿಕಾರಿಪುರ: ರೈತರಿಗಾದ ಅನ್ಯಾಯವನ್ನು ಶಾಸನಸಭೆಯಲ್ಲಿ ಏಕಾಂಗಿಯಾಗಿ ಖಂಡಿಸಿ ಸರ್ಕಾರ ರೈತ ವಿರೋಧಿ ಮಸೂದೆಯನ್ನು ವಾಪಾಸ್ ಪಡೆಯುವಂತೆ ಮಾಡಿದ ಯಡಿಯೂರಪ್ಪನವರು ದೇಶದಲ್ಲಿಯೇ ಏಕಾಂಗಿಯಾಗಿ ಸರ್ಕಾರವನ್ನು ಮಣಿಸಿದ ಏಕೈಕ ಶಾಸಕ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.
ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಭಾರತೀಯ ಜನತಾ ಪಾರ್ಟಿ, ರೈತ ಮೋರ್ಚಾ, ಶಿಕಾರಿಪುರ ಮಂಡಲ ವತಿಯಿಂದ ಮಳೆಯಿಂದ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಹಾಗೂ ಸಾಗುವಳಿದಾರರಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಮಾತನಾಡಿ, ಗ್ಯಾರಂಟಿ ಹೆಸರಿನಲ್ಲಿ ಜನಸಾಮಾನ್ಯರಿಗೆ ಮಂಕುಬೂದಿ ಎರಚಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಗಳಿಸಿದ್ದು ದೌರ್ಭಾಗ್ಯ ಎಂದು ಹೇಳಿದರು.ಇದೀಗ ತಾಲೂಕಿನಲ್ಲಿ 2 ಸಾವಿರಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಕಿತ್ತುಕೊಂಡಿದ್ದು, ರೈತರಿಗೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಅತಿವೃಷ್ಟಿಯಿಂದಾಗಿ ಮೆಕ್ಕೆಜೋಳ, ಅಡಕೆ, ಬಾಳೆ ಸಹಿತ ಬೆಳೆ ಸಂಪೂರ್ಣ ಹಾನಿಗೀಡಾಗಿದ್ದು, ಆಡಳಿತ ಪಕ್ಷದ ಜನಪ್ರತಿನಿಧಿ ರೈತರ ಹೊಲ ಗದ್ದೆ ಬಳಿ ಸುಳಿಯುತ್ತಿಲ್ಲ. ರೈತರು ಕೇವಲ ಕೇಂದ್ರದ ಬೆಳೆ ವಿಮೆ ಬಗ್ಗೆ ಮಾತ್ರ ಹೆಚ್ಚಿನ ಭರವಸೆ ಹೊಂದಿದ್ದಾರೆ ಎಂದರು.
ಮದ್ದೂರಿನಲ್ಲಿ ಹಿಂದೂ ಕಾರ್ಯಕರ್ತರ ವಿರುದ್ಧದ ಹಲ್ಲೆಯಲ್ಲಿ ಮಹಿಳೆಯೋರ್ವಳು ರು. 2 ಸಾವಿರದ ಆಸೆಗೆ ಹಾಕಿದ ಮತದ ಪರಿಣಾಮ ಇದೀಗ 20 ಸಾವಿರ ರು. ಖರ್ಚು ಮಾಡುವಂತಾಗಿದೆ ಎಂದು ಕಣ್ಣೀರಿಡುವ ಮೂಲಕ ವಾಸ್ತವ ತಿಳಿಸಿದ್ದಾಳೆ ಎಂದ ಅವರು, ಕೇವಲ ಮತಕ್ಕಾಗಿ ಹೊಲಸು ರಾಜಕೀಯದಿಂದಾಗಿ ಜನಸಾಮಾನ್ಯರು ಬಲಿಯಾಗುತ್ತಿದ್ದಾರೆ ಎಂದು ಕಿಡಿಕಾರಿದರು.ಸ್ವಾತಂತ್ರ್ಯ ಹೋರಾಟಗಾರರ ಹುತಾತ್ಮರ ನೆಲದಿಂದ ರೈತ ನಾಯಕನಾಗಿ ದೇಶಕ್ಕೆ ಯಡಿಯೂರಪ್ಪ ಪರಿಚಯವಾಗಲು ತಾಲೂಕಿನ ಜನತೆ ಕಾರಣವಾಗಿದ್ದು, ಈ ದಿಸೆಯಲ್ಲಿ ಅಧಿಕಾರ ದೊರೆತಾಗ ತಾಲೂಕು ಅತಿ ಹೆಚ್ಚು ಅಭಿವೃದ್ಧಿ ಪಡಿಸಿದ್ದಾರೆ. ಚುನಾವಣೆಯಲ್ಲಿ ಸೋತಾಗ ಮನೆಯಲ್ಲಿ ಕೂರದೆ ತಾಲೂಕಿನ ಗಾಂಧಿ ನಗರದ ಸಾಗುವಳಿದಾರರು ಪಕ್ಕದ ತಾಲೂಕಿನ ದೊಡ್ಡ ನಾಯಕರು ಅಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದಾಗ ಸಾಗುವಳಿದಾರರ ಜತೆ ಶಿವಮೊಗ್ಗಕ್ಕೆ ಪಾದಯಾತ್ರೆ ಕೈಗೊಂಡು ಮುಖ್ಯಮಂತ್ರಿ ಕೃಷ್ಣರವರು ಒಕ್ಕಲೆಬ್ಬಿಸುವುದಿಲ್ಲ ಎಂದು ಭರವಸೆ ನೀಡಿದ್ದನ್ನು ಸ್ಮರಿಸಿದರು.
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದ ಅವಧಿಯಲ್ಲಿ ರೈತ ವಿರೋಧಿ ಮಸೂದೆ ಮಂಡಿಸಿದಾಗ ಯಡಿಯೂರಪ್ಪನವರ ಏಕಾಂಗಿ ಹೋರಾಟಕ್ಕೆ ಮಣಿದು ವಾಪಾಸು ಪಡೆದಿದ್ದು ರೈತರಪರ ಹೋರಾಟಕ್ಕೆ ಸಾಕ್ಷಿಯಾಗಿದೆ. ರೈತರ ಪರ ಮಾತನಾಡಲು ಕಾಂಗ್ರೆಸ್ ಮುಖಂಡರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.ಬಳಿಕ ಮಳೆಯಿಂದ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಹಾಗೂ ಸಾಗುವಳಿದಾರರಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ತಾ.ಬಿಜೆಪಿ ಅಧ್ಯಕ್ಷ ಹನುಮಂತಪ್ಪ, ಪ್ರ.ಕಾ ಅಶೋಕ್ ಮಾರವಳ್ಳಿ, ಮುಖಂಡ ರೇವಣಪ್ಪ ಕೊಳಗಿ, ಚನ್ನವೀರಪ್ಪ, ಶೇಖರಪ್ಪ ಅಂಬಾರಗೊಪ್ಪ, ಸಿದ್ದಲಿಂಗಪ್ಪ, ಗಾಯತ್ರಿದೇವಿ, ರೇಖಾ, ಲೀಲಾವತಿ, ನೇತ್ರಾವತಿ, ಪಾಲಾಕ್ಷಪ್ಪ, ಗುರುರಾಜ ಜಕ್ಕಿನಕೊಪ್ಪ, ಯೋಗೀಶಪ್ಪ ಮತ್ತಿತರರು ಉಪಸ್ಥಿತರಿದ್ದರು.