ಶಿವಮೊಗ್ಗ ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಕೈಗೊಳ್ಳಲಾಗಿರುವ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಿಗದಿಪಡಿಸಿದ ಕಾಲಮಿತಿಯಲ್ಲಿ ಪೂರ್ಣವಾಗದಿರುವುದು ಅತ್ಯಂತ ಬೇಸರದ ಸಂಗತಿಯಾಗಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಲೇ ವಿವಿಧ ಇಲಾಖೆಗಳ ಪರಸ್ಪರ ಸಮನ್ವಯತೆಯಿಂದ ಕಾರ್ಯಪ್ರವೃತ್ತರಾಗಿ ಕೈಗೊಂಡ ಕಾಮಗಾರಿಗಳಿಗೆ ವೇಗ ಹೆಚ್ಚಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಕೈಗೊಳ್ಳಲಾಗಿರುವ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಿಗದಿಪಡಿಸಿದ ಕಾಲಮಿತಿಯಲ್ಲಿ ಪೂರ್ಣವಾಗದಿರುವುದು ಅತ್ಯಂತ ಬೇಸರದ ಸಂಗತಿಯಾಗಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಲೇ ವಿವಿಧ ಇಲಾಖೆಗಳ ಪರಸ್ಪರ ಸಮನ್ವಯತೆಯಿಂದ ಕಾರ್ಯಪ್ರವೃತ್ತರಾಗಿ ಕೈಗೊಂಡ ಕಾಮಗಾರಿಗಳಿಗೆ ವೇಗ ಹೆಚ್ಚಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಭೂಸ್ವಾಧೀನ, ಅರಣ್ಯ ಸಂಬಂಧಿ ಸಮಸ್ಯೆಗಳು ಹಾಗೂ ಭೂಸ್ವಾಧೀನಪಡಿಸಿಕೊಂಡ ರೈತರಿಗೆ ಅಗತ್ಯ ಪರಿಹಾರ ನೀಡಿರುವ ಬಗ್ಗೆ ಹಾಗೂ ವಿವಿಧ ರಸ್ತೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ, ರಾಷ್ಟ್ರೀಯ ಹೆದ್ದಾರಿ 206 ತುಮಕೂರು-ಹೊನ್ನಾವರ ರಸ್ತೆಯ ಶಿವಮೊಗ್ಗ-ಆನಂದಪುರಂ ರಸ್ತೆ, ಎಲ್.ಸಿ-110 ಹೊಸೂರು ಹಾಗೂ ಎಲ್.ಸಿ 152 ತಾಳಗುಪ್ಪ ರೈಲ್ವೆ ಮೇಲ್ಸೇತುವೆ, ಸಾಗರ ಪಟ್ಟಣದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ, ಹಾಗೂ ವಿವಿಧ ಮುಖ್ಯ ರಸ್ತೆಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಬೈಪಾಸ್ ರಸ್ತೆಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ-169 ಶಿವಮೊಗ್ಗ-ಮಂಗಳೂರು ರಸ್ತೆಯ ನೆಲ್ಲಿಸರ ಕ್ಯಾಂಪ್ ನಿಂದ ತೀರ್ಥಹಳ್ಳಿ ಪಟ್ಟಣದವರೆಗೆ ಚತುಷ್ಪಥ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ-766 ಸಿ ಬೈಂದೂರು-ರಾಣೆಬೆನ್ನೂರು ರಸ್ತೆಯ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸಿರುವ ಬಿಕ್ಕೋಡಿ ಬಳಿ ಎರಡು ಭಾರಿ ಸೇತುವೆ ಹಾಗೂ ದ್ವಿಪಥ ರಸ್ತೆ ನಿರ್ಮಾಣ, ಶಿಕಾರಿಪುರ ಬೈಪಾಸ್ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ 169ಎ ಮೇಗರವಳ್ಳಿಯಿಂದ ಆಗುಂಬೆ ವರೆಗೆ ದ್ವಿಪಥ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ-13 ರ ಶಿವಮೊಗ್ಗದಿಂದ ಚಿತ್ರದುರ್ಗದ ವರೆಗೆ ಬಾಕಿ ಉಳಿದ ಭಾಗಗಳ ರಸ್ತೆ, (ಚಿತ್ರದುರ್ಗ, ಚನ್ನಗಿರಿ, ಹೊಳೆಹೊನ್ನೂರು, ಶಿವಮೊಗ್ಗ ಬೈಪಾಸ್ ರಸ್ತೆ) ಹಾಗೂ 3 ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ, ಹಾಗೂ ಇನ್ನಿತರೆ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲಿಸಿದರು.
ಕೇಂದ್ರ ಭೂಸಾರಿಗೆ ಮಂತ್ರಾಲಯದ ಪ್ರಾದೇಶಿಕ ಅಧಿಕಾರಿ ಬಿ.ಟಿ.ಶ್ರೀಧರ್ ಮಾತನಾಡಿ, ಅರಣ್ಯ ಬಿಡುಗಡೆ ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳಲ್ಲಿ ಆಗುತ್ತಿರುವ ವಿಳಂಬ ಮತ್ತು ಅದರಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ವಿವರವಾಗಿ ಸಭೆಗೆ ವಿವರಿಸಿ, ಈ ತಿಂಗಳ ಅಂತ್ಯದೊಳಗೆ ಎಲ್ಲಾ ಅರಣ್ಯ ಬಿಡುಗಡೆ ಸಂಬಂಧ ಎಲ್ಲಾ ಪ್ರಕ್ರಿಯೆಗಳನ್ನು ಹಾಗೂ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಕಾಮಗಾರಿಯನ್ನು ಅನುಷ್ಟಾನಗೊಳಿಸಲು ಸಹಕಾರ ನೀಡುವಂತೆ ಸಭೆಯಲ್ಲಿ ಹಾಜರಿದ್ದ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕೋರಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅನುಷ್ಠಾನದಲ್ಲಿ ಭೂ ಪರಿಹಾರ ಪಡೆಯಲು ದಾಖಲೆ ನೀಡದೇ, ಸಹಕರಿಸದ ಭೂ ಮಾಲೀಕರ ಭೂ ಪರಿಹಾರ ಮೊತ್ತವನ್ನು ತುರ್ತಾಗಿ ನ್ಯಾಯಾಲಯಕ್ಕೆ ಜಮೆ ಮಾಡಲು ಸಾಗರ ಮತ್ತು ಶಿವಮೊಗ್ಗ ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.
ಪೊಲೀಸ್ ಇಲಾಖೆಯ ರಕ್ಷಣೆಯೊಂದಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಕಾಮಗಾರಿಗಳ ಅಡೆ-ತಡೆಗಳನ್ನು ನಿವಾರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯನ್ನು ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕೇಂದ್ರ ಭೂಸಾರಿಗೆ ಮಂತ್ರಾಲಯದ ಪ್ರಾದೇಶಿಕ ಅಧಿಕಾರಿ ಬಿ.ಟಿ.ಶ್ರೀಧರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ ಮತ್ತಿತರರು ಇದ್ದರು.
---------------
ಪೋಟೋ: 16ಎಸ್‌ಎಂಜಿಕೆಪಿ10
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಭೂಸ್ವಾಧೀನ, ಅರಣ್ಯ ಸಂಬಂಧಿ ಸಮಸ್ಯೆಗಳು ಹಾಗೂ ಭೂಸ್ವಾಧೀನಪಡಿಸಿಕೊಂಡ ರೈತರಿಗೆ ಅಗತ್ಯ ಪರಿಹಾರ ನೀಡಿರುವ ಬಗ್ಗೆ ಹಾಗೂ ವಿವಿಧ ರಸ್ತೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.