ಹಾವೇರಿ: ಪ್ರಾಚೀನವಾದ ಜೈನ ಧರ್ಮದವರ ಸಂಖ್ಯೆ 2500 ವರ್ಷಗಳ ಹಿಂದೆ 38 ಕೋಟಿ ಇತ್ತು, ಈಗ ಎರಡು ಕೋಟಿಗೂ ಕಡಿಮೆ ಇದೆ. ಹಾಗಾಗಿ ಜೈನಧರ್ಮ ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹೇಳಿದರು.ನಗರದ ರಜನಿ ಸಭಾಂಗಣದಲ್ಲಿ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ಎರಡನೇ ದಿನವಾದ ಶನಿವಾರ ಜರುಗಿದ ಜೈನ ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಇಂದು ಸಂಸ್ಕಾರದ ಅಭಾವದಿಂದ ಜೈನರನ್ನು ಜೈನರನ್ನಾಗಿ ಮಾಡುವುದು ಕಠಿಣವಾಗಿದೆ. ಜೈನಧರ್ಮ ಬಹಳ ಸರಳವಾಗಿದೆ. ಇದನ್ನು ಇಂದಿನ ಮಕ್ಕಳಿಗೆ ತಿಳಿಸಬೇಕು ಹಾಗೂ ಬಾಲ್ಯದಲ್ಲೇ ಸಂಸ್ಕಾರ ನೀಡಬೇಕು. ಜೈನಧರ್ಮದ ತತ್ವ ಇಡೀ ಜಗತ್ತಿಗೆ ತಿಳಿಸಿದೆ, ಆದರೆ ಇಂದು ಜೈನಧರ್ಮ ಅಳಿವಿನ ಅಂಚಿಗೆ ಬಂದಿರುವುದು ವಿಷಾದಕರ ಸಂಗತಿಯಾಗಿದೆ. ಸಮಾಜದವರು ಎಚ್ಚೆತ್ತುಕೊಂಡು ತಮ್ಮ ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದರು. ಅನೇಕ ಗ್ರಾಮಗಳಲ್ಲಿ ನಾವು ವಿಹಾರ ಮಾಡಿದಾಗ ಗಮನಿಸಲಾಗಿದ್ದು, ಧರ್ಮ ಅವನತಿ ಕಡೆಗೆ ಸಾಗುತ್ತಿದೆ. ಹಾಗಾಗಿ ರಾಜ್ಯಾದ್ಯಂತ ನಗರ ಹಾಗೂ ಗ್ರಾಮಗಳಲ್ಲಿ ಶ್ರಾವಕ ಸಂಸ್ಕಾರ ಶಿಬಿರಗಳನ್ನು ಮಾಡಲು ಚಿಂತನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿಗಳಾದ ಆಕರ್ಶ್ ಎಂ, ಮಾತನಾಡಿ, ಜೈನ ಸಾಹಿತ್ಯ ಪ್ರಾಚೀನವಾಗಿದ್ದು, ಪ್ರಾಕೃತಿ, ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿದೆ. ಜೈನ ಸಾಹಿತ್ಯಕ್ಕೆ ಹಾಗೂ ಕಾನೂನಿಗೆ ಅವಿನಾಭಾವ ಸಂಬಂಧವಿದೆ. ಸತ್ಯ ಹಾಗೂ ಅಹಿಂಸೆ ಜೈನಧರ್ಮ ಹೇಳುತ್ತದೆ, ಇದನ್ನೇ ಕಾನೂನು ಹೇಳುತ್ತದೆ. ಜೈನಧರ್ಮ ಪಾಲನೆ ಮಾಡಿದರೆ ಎಲ್ಲ ಕಾನೂನು ಪಾಲನೆ ಮಾಡಿದಂತೆ. ಜೈನ ಸಾಹಿತ್ಯ ಭವಿಷ್ಯದ ಪೀಳಿಗೆಗೆ ಆದರ್ಶವಾಗಿದೆ. ಜೀವನದಲ್ಲಿ ಜೈನ ತತ್ವ ಪಾಲಿಸೋಣ ಎಂದು ಹೇಳಿದರು.ಬೆಂಗಳೂರು ಇಂಟರ್‌ನಲ್ ಸೆಕ್ಯೂರಿಟಿಡಿ ಜಿ.ಪಿ. ಜಿನೇಂದ್ರಖಣಗಾವಿ ಮಾತನಾಡಿ, ಕನ್ನಡ ಸಾಹಿತ್ಯದ ಬಹುಭಾಗ ಜೈನ ಸಾಹಿತ್ಯವಾಗಿದೆ. ಪಂಪ, ರನ್ನ, ಜನ್ನ ಸೇರಿದಂತೆ ಜೈನ ಕವಿಗಳು ಹಾಗೂ ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜೈನ ಸಾಹಿತ್ಯ ಶ್ರೀಮಂತವಾಗಿದ್ದು, ಸಾಹಿತ್ಯ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ನಾನು ಐಪಿಎಸ್ ಅಧಿಕಾರಿಯಾಗಲು ಜೈನ ಸಾಹಿತ್ಯ ಕಾರಣವಾಗಿದೆ. ಐಎಎಸ್ ಹಾಗೂ ಐಪಿಎಸ್ ಪರೀಕ್ಷೆ ಕನ್ನಡ ಸಾಹಿತ್ಯ ಆಯ್ಕೆ ಮಾಡಿಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇಚ್ಛಾಶಕ್ತಿ ಹಾಗೂ ಪ್ರಬಲ ಆಕಾಂಕ್ಷೆ ಇರಬೇಕು. ಸಮಾಜದಲ್ಲಿ ಉನ್ನತ ಹುದ್ದೆ ಪಡೆಯಲು ಪಾಲಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು. ಹುಬ್ಬಳ್ಳಿ ಮಹಾವೀರ ಕೃತಕ ಕಾಲು ಜೋಡಣಾ ಕೇಂದ್ರ ಅಧ್ಯಕ್ಷ ಮಹೇಂದ್ರ ಶಿಂಘಿ ಮಾತನಾಡಿ, ದೇಶದ ಸುಖ ಶಾಂತಿಗಾಗಿ ಈ ಆರಾಧನೆ ಮಾಡಲಾಗುತ್ತಿದ್ದು, ಶ್ವೇತಾಂಬರ- ದಿಗಂಬರ ಎನ್ನದೇ ಎಲ್ಲರೂ ಒಂದಾಗಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ಹೇಳಿದರು.ಧಾರವಾಡದ ಜಿನದತ್ತ ಹಡಗಲಿ ಅವರು ಕನ್ನಡಜೈನ ಸಾಹಿತ್ಯ ಬೆಳೆದು ಬಂದದಾರಿ, ಶ್ರವಣಬೆಳಗೊಳದ ಪ್ರೊ. ಜೀವಂಧರಕುಮಾರ ಹೋತಪೇಟೆ ಅವರು ಜೈನದರ್ಶನ ಹಾಗೂ ಹರಿಹರದ ಉಪನ್ಯಾಸಕ ಡಾ. ರವಿಕುಮಾರ ನವಲಗುಂದ ಅವರು ಹಾವೇರಿ ಜಿಲ್ಲೆಯ ಜೈನ ಶಾಸನಗಳು ಕುರಿತು ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ಗಣ್ಯರು ಆಚಾರ್ಯ ವಿದ್ಯಾಸಾಗರ ಮಹಾರಾಜರ ಭಾವಚಿತ್ರ ಆನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ 1008 ಶ್ರೀ ನೇಮಿನಾಥ ದಿಗಂಬರ ಜೈನ ಕಮೀಟಿ ಅಧ್ಯಕ್ಷ ಚಂದ್ರನಾಥ ಕಳಸೂರ, ಬ್ಯಾಡಗಿ ಶ್ವೇತಾಂಬರ ಜೈನ ಸಮಾಜದ ಅಧ್ಯಕ್ಷ ಅಂಬಾಲಾಲ್ ಜೈನ, ಹಾವೇರಿ ಜಿಲ್ಲಾ ಜೈನ ಸಮಾಜದ ಉಪಾಧ್ಯಕ್ಷ ಸುನೀಲ ಅರೆಗೊಪ್ಪ, ಸಾಹಿತಿ ಸತೀಶ ಕುಲಕರ್ಣಿ, ನಗರಸಭೆ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸುಜಿತ ಜೈನ್, ವಿಮಲ ತಾಳಿಕೋಟಿ, ಮಾಣಿಕಚಂದ ಲಾಡರ ಇತರರು ಇದ್ದರು. ಭರತರಾಜ ಹಜಾರಿ ಸ್ವಾಗತಿಸಿದರು. ಕುಮುದಾ ಕಾರ್ಯಕ್ರಮ ನಿರೂಪಿಸಿದರು. ಎಸ್.ಎ. ವಜ್ರಕುಮಾರ ವಂದಿಸಿದರು.ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ಜಿನ ಭಗವಂತರ ಜಲಾಭಿಷೇಕ, ಗಂಧಾಭಿಷೇಕ, ಪುಷ್ಪವೃಷ್ಟಿ, ಬೃಹತ್ ಶಾಂತಿಧಾರೆ, ನಿತ್ಯಪೂಜೆ, ದೇವಶಾಸ್ತ್ರ ಗುರುಪೂಜೆ, ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.