ವೈದ್ಯರೆಂದರೆ ಬರೀ ಹಣ ಸುಲಿಯುವವರು ಎಂಬ ಭಾವನೆ ಸರಿಯಲ್ಲ: ಡಾ. ಸುರೇಶ್ ಹೆಗಡೆ

KannadaprabhaNewsNetwork |  
Published : Oct 28, 2024, 01:19 AM ISTUpdated : Oct 28, 2024, 01:20 AM IST
ಸಮಾರೋಪ ಸಮಾರಂಭ  | Kannada Prabha

ಸಾರಾಂಶ

ಶಿಕ್ಷಣ ‌ಪಡೆದವರು ಮಾಡುವ ಅವಾಂತರಗಳಿಂದ ಜನರಲ್ಲಿ ಉದಾಸೀನತೆ ಮೂಡುತ್ತಿದೆ. ಸಮಾಜ, ವೈದ್ಯರು ಎನ್ನುವ ಬಿರುಕು ಉಂಟಾಗುತ್ತಿದೆ. ಏತನ್ಮಧ್ಯೆ ಉತ್ತಮ ಸೇವೆ ನೀಡುವ ವೈದ್ಯರಿದ್ದಾರೆ.

ಹೊನ್ನಾವರ: ವನವಾಸಿ ಕಲ್ಯಾಣ ಕರ್ನಾಟಕ, ನ್ಯಾಷನಲ್ ಮೆಡಿಕಲ್ ಆರ್ಗನೈಜೆಸನ್ ಕರ್ನಾಟಕ ಹಾಗೂ ಸೇವಾ ಭಾರತಿ ಮತ್ತು ಆರೋಗ್ಯ ಭಾರತಿ ಹೊನ್ನಾವರ ಇವರ ಸಹಯೋಗದಲ್ಲಿ ಹಳದೀಪುರದ ಗೋ ಗ್ರೀನ್ ಸಭಾಭವನದಲ್ಲಿ ಭಗವಾನ್ ಪರಶುರಾಮ ಸ್ವಾಸ್ಥ್ಯ ಸೇವಾ ಯಾತ್ರೆಯ ಸಮಾರೋಪ ಸಮಾರಂಭ ನಡೆಯಿತು.

ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಮಾರಂಭ ಉದ್ದೇಶಿಸಿ ಡಾ. ಸುರೇಶ್ ಹೆಗಡೆ ಮಾತನಾಡಿ, ವೈದ್ಯರೆಂದರೆ ಹಣ ಸುಲಿಯುವವರು ಎನ್ನುವ ಆರೋಪವಿದೆ. ಅದಕ್ಕೆ ತದ್ವಿರುದ್ಧವಾಗಿ ಸೇವೆ ನೀಡಬೇಕು. ವೃತ್ತಿಗೆ ಅಪಚಾರವಾಗದಂತೆ ಕೆಲಸ ಮಾಡಬೇಕು. ನಾವು ಹಣದ ಹಿಂದೆ ಹೋದರೆ ಪಾಶ್ಚಿಮಾತ್ಯ ದೇಶದವರಂತೆ ಆಗುತ್ತೇವೆ ಎಂದರು.

ಶಿಕ್ಷಣ ‌ಪಡೆದವರು ಮಾಡುವ ಅವಾಂತರಗಳಿಂದ ಜನರಲ್ಲಿ ಉದಾಸೀನತೆ ಮೂಡುತ್ತಿದೆ. ಸಮಾಜ, ವೈದ್ಯರು ಎನ್ನುವ ಬಿರುಕು ಉಂಟಾಗುತ್ತಿದೆ. ಏತನ್ಮಧ್ಯೆ ಉತ್ತಮ ಸೇವೆ ನೀಡುವ ವೈದ್ಯರಿದ್ದಾರೆ. ಶಿಬಿರದಲ್ಲಿ ಕಲಿತಿರುವ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಸೇವೆ ಮಾಡುವಾಗ ನೈಜತೆಯ ದರ್ಶನ ಪಡೆಯಿರಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗ ಮಾತನಾಡಿ, ಕೇವಲ ಪುಸ್ತಕ ಅಧ್ಯಯನ ಮಾಡಿದರೆ ಸಾಲದು. ಸಮಾಜವನ್ನು ಓದಿದಾಗ ಮಾತ್ರ ಪರಿಣಿತರಾಗುತ್ತಿರಿ. ಕರ್ಮವನ್ನು ಶ್ರದ್ಧೆಯಿಂದ ಮಾಡಿದರೆ ಹಣ, ಹೆಸರು ತಾನಾಗಿಯೇ ಬರುತ್ತದೆ. ಬದುಕಿಗಾಗಿ ಸಂಪಾದನೆ ಮಾಡಬೇಕೆ ವಿನಾ ಸಂಪಾದನೆಗಾಗಿ ಬದುಕಬಾರದು. ಆ ದಿಸೆಯಲ್ಲಿ ಸೇವೆ ಸಲ್ಲಿಸಿ. ಆದರ್ಶ ಸಮಾಜ ಕಟ್ಟುವ ಜವಾಬ್ದಾರಿ ವೈದ್ಯರ ಮೇಲಿದೆ. ಮಾನವೀಯ ಮೌಲ್ಯಗಳಿಂದ ವೃತ್ತಿಯಲ್ಲಿ ತೊಡಗಿಕೊಳ್ಳಿ ಎಂದರು.

ಡಾ. ಮೃತ್ಯುಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದಲ್ಲಿ ಪಾಲ್ಗೊಂಡ ವೈದ್ಯರು, ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಗ್ರಾಮೀಣ ಭಾಗಕ್ಕೆ ಆಗಮಿಸಿ ಶಿಬಿರದ ಮೂಲಕ ವೈದ್ಯಕೀಯ ಸೇವೆ ನೀಡಿದ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಗೋಗ್ರಿನ್ ಮಾಲೀಕರಾದ ಚಂದ್ರಶೇಖರ, ರಾಮಚಂದ್ರ ಕಿಣಿ, ರಾಜೀವ ಶ್ಯಾನಭಾಗ, ಡಾ. ಜಿ.ಜಿ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಡಾ. ಅಮರಪ್ಪ ಸ್ವಾಗತಿಸಿದರು. ವೈದ್ಯಕೀಯ ವಿದ್ಯಾರ್ಥಿ ಅರುಣಕುಮಾರ್ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು. ನ್ಯಾಷನಲ್ ಮೆಡಿಕಲ್ ಆರ್ಗನೈಜೆಸನ್ ಕರ್ನಾಟಕ ಕಾರ್ಯದರ್ಶಿ ಡಾ. ಗೀತಾ ಭರತ್ ವಂದಿಸಿದರು. 30 ಗ್ರಾಮಕ್ಕೆ 30 ವೈದ್ಯಕೀಯ ತಂಡ ತೆರಳಿ ಉಚಿತ ಆರೋಗ್ಯ ಶಿಬಿರದ ಮೂಲಕ 2124 ಜನರಿಗೆ ಆರೋಗ್ಯ ತಪಾಸಣೆ ನಡೆಸಿದ್ದರು.

ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಕಾಯಿಲೆಯ ಪರಿಣಾಮದ‌ ಬಗ್ಗೆ ವಿವರಿಸಿ ಕೂಡಲೇ ಮೇಲ್ದರ್ಜೆಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ.

ಶಿಬಿರಕ್ಕೆ ಸೇವಾ ಭಾರತಿ ಮತ್ತು ಆರೋಗ್ಯ ಭಾರತಿ ಹೊನ್ನಾವರ, ರಾಷ್ಟ್ರೀಯ ಸ್ವಯಂ ಸೇವಕದ ಕಾರ್ಯಕರ್ತರು ಸಹಕಾರ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!