ಕನ್ನಡಪ್ರಭ ವಾರ್ತೆ ರಾಮನಗರ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರ ಟೌನಿನ ಮಧ್ಯಭಾಗದಲ್ಲಿ ಹರಿಯುತ್ತಿರುವ ಆರ್ಕಾವತಿ ನದಿಯ ಎರಡು ದಡದಲ್ಲಿ ಸುಮಾರು ₹157 ಕೋಟಿ ವೆಚ್ಚದಲ್ಲಿ ಉದ್ಯಾನವನ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯಲ್ಲಿ ಶ್ರೀ ಅರ್ಕೇಶ್ವರ ದೇವಾಲಯ, ಶನಿಮಹಾತ್ಮ ದೇವಾಲಯ, ಪೀರನ್ ಷಾ ವಲಿ ದರ್ಗಾ ಹಾಗೂ ರಾಘವೇಂದ್ರ ಕಾಲೋನಿ ಮನೆಗಳಿಗೆ ಧಕ್ಕೆ ಆಗಲಿದೆ ಎಂದು ಪ್ರಚೋದನೆ ಮಾಡಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದರು.
ಈ ಯೋಜನೆ ಅನುಷ್ಠಾನಗೊಳ್ಳುತ್ತಿರುವುದರ ಹಿಂದೆ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರ ಪರಿಶ್ರಮವಿದೆ. ನಗರಸಭೆ ಅಭಿವೃದ್ಧಿ ಪರವಾಗಿ ಇರಬೇಕೇ ಹೊರತು ವಿರುದ್ಧ ಅಲ್ಲ. ಅದರಲ್ಲೂ ವಿಪಕ್ಷದವರೇ ಯೋಜನೆ ಒಪ್ಪಿಕೊಂಡಿರುವಾಗ ಆಡಳಿತ ಪಕ್ಷದವರು ವಿರೋಧ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ. ಇನ್ನು ಮುಂದೆ ನಗರಸಭೆ ಅಭಿವೃದ್ಧಿ ಮರೆತು ಸರ್ಕಾರದ ವಿರುದ್ಧವಾಗಿ ನಡೆದುಕೊಂಡರೆ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಆರ್ಕಾವತಿ ಇಕ್ಕೆಲಗಳಲ್ಲಿ ಅದ್ಭುತವಾದ ಕಲ್ಪನೆಯೊಂದಿಗೆ ಸಾಕಾರಗೊಳ್ಳಲಿರುವ ಹೈಟೆಕ್ ಉದ್ಯಾನವನ ನಗರದ ಜನರ ಜೀವನಶೈಲಿಗೆ ಹೊಸ ರೂಪ ಕೊಡಲಿದೆ. ಸಾವಿರಾರು ಜನ ಬೀದಿ ಬದಿ ವ್ಯಾಪಾರಸ್ಥರು ಇನ್ನಿತರ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜೀವನ ನಿರ್ವಹಣೆಗೆ ಸಹಕಾರಿಯಾಗಲಿದೆ. ಇದನ್ನು ಅರ್ಥಮಾಡಿಕೊಳ್ಳದ ಕೆಲ ಸ್ವಾರ್ಥಿಗಳು ರಾಜಕಾರಣಕ್ಕಾಗಿ ಧಾರ್ಮಿಕ ವಿಚಾರ ಮುಂದಿಟ್ಟುಕೊಂಡು ಜನರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ನರಸಿಂಹಯ್ಯ ಮಾತನಾಡಿ, ಕಳೆದ ಮೂರು ವರ್ಷಗಳ ಹಿಂದೆ ಶಾಸಕರಾಗಿ ಆಯ್ಕೆಯಾದ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅವರು ನೂರಾರು ಕೋಟಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದು, ಶಾಸಕರು ಕಾಲಹರಣ ಮಾಡದೇ ದಿನನಿತ್ಯ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ಪರಿಶಿಷ್ಟ ವಿಭಾಗದ ಮುಖಂಡ ಕೊಂಕಾಣಿದೊಡ್ಡಿ ಶಿವಲಿಂಗಯ್ಯ ಮಾತನಾಡಿ, ಕಳೆದ 30 ವರ್ಷಗಳಿಂದ ಅಭಿವೃದ್ಧಿ ಕಾಣದ ರಾಮನಗರವನ್ನು ಶಾಸಕ ಇಕ್ಬಾಲ್ ಹುಸೇನ್ ಅವರು ಅಭಿವೃದ್ಧಿ ಮಾಡವಲ್ಲಿ ಶ್ರಮಿಸುತ್ತಿದ್ದಾರೆ. ಅದನ್ನು ಸಹಿಸದವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದನ್ನು ನಾವು ಖಂಡಿಸುತ್ತೇವೆ. ಶಾಸಕರ ಒಳ್ಳೆಯ ಕೆಲಸಗಳಿಗೆ ಅವರ ಜೊತೆಗೆ ನಾವೆಲ್ಲರೂ ನಿಲ್ಲೋಣ ಎಂದರು.