ದಾಬಸ್‍ಪೇಟೆ: ಸಮಾಜದಲ್ಲಿ ಗುರುವಿನ ಪಾತ್ರ ಮುಖ್ಯವಾದದ್ದು, ಅಂತಹ ಗುರುಗಳಲ್ಲಿ ಶಿಕ್ಷಕ ಕರಿಯಣ್ಣ ಕೂಡ ಒಬ್ಬರಾಗಿದ್ದಾರೆ ಎಂದು ಗ್ರಾಪಂ ಮಾಜಿ ಅಧ್ಯಕ್ಷೆ ಇಂದ್ರಮ್ಮಪರಮೇಶ್ ಅಭಿಪ್ರಾಯಪಟ್ಟರು.
ಸೋಂಪುರ ಹೋಬಳಿಯ ನಿಡವಂದ ಗ್ರಾಮದ ಶ್ರೀ ಮದಕರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ದೈಹಿಕ ಶಿಕ್ಷಕರಿಗೆ ಬೀಳ್ಕೊಡುಗೆ ನೀಡಿ ಮಾತನಾಡಿದರು.ಗುರುಗಳಿಗೆ ಗೌರವ ಕೊಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಶಿಕ್ಷಕ ಕರಿಯಣ್ಣ 39 ವರ್ಷಗಳ ಕಾಲ ಅತ್ಯಂತ ಶಿಸ್ತಿನ ಸಿಪಾಯಿಗಳಾಗಿ ತಮ್ಮ ವೃತ್ತಿಯನ್ನು ನಿರ್ವಹಿಸಿದ್ದಾರೆ. ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಇಂದಿನ ಹಲವಾರು ಶಿಕ್ಷಕರಿಗೆ ಆದರ್ಶ ಶಿಕ್ಷಕರಾಗಿ ನಮ್ಮ ಮುಂದೆ ಇದ್ದಾರೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷೆ ಲಾವಣ್ಯ ಜಗದೀಶ್ ಮಾತನಾಡಿ, ಇಂದು ನಿವೃತ್ತಿ ಹೊಂದುತ್ತಿರುವ ನಿವೃತ್ತ ದೈಹಿಕ ಶಿಕ್ಷಕ ಕರಿಯಣ್ಣನವರ ವ್ಯಕ್ತಿತ್ವ ಎಲ್ಲರೂ ಮೆಚ್ಚುವಂಥದ್ದು, ಈ ಶಾಲೆಗೆ ಬಂದ ದಿನಗಳಿಂದ ವಿದ್ಯಾರ್ಥಿಗಳಲ್ಲಿ ಕ್ರೀಡಾಮನೋಭಾವ ಬೆಳೆಸಿ ನಮ್ಮ ಹೋಬಳಿಯ ಮಕ್ಕಳನ್ನು ಆಟೋಟದಲ್ಲಿ ಜಿಲ್ಲಾ, ರಾಜ್ಯಮಟ್ಟದಲ್ಲಿ ತೊಡಗಿಸುವಂತೆ ಮಾಡಿದ ಕೀರ್ತಿ ಗುರುಗಳಿಗೆ ಸಲ್ಲುತ್ತದೆ ಎಂದರು.ನಿವೃತ್ತ ದೈಹಿಕ ಶಿಕ್ಷಕ ಕರಿಯಣ್ಣ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ಸಾವಿರಾರು ಮಕ್ಕಳಿಗೆ ನೈತಿಕ ಶಿಕ್ಷಣ ನೀಡಿ, ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಾಜಣ್ಣ ಸೇರಿ ಶಾಲಾ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.