ಕನ್ನಡಪ್ರಭ ವಾರ್ತೆ ತುಮಕೂರುಅಕ್ಕಮಹಾದೇವಿಯಕ್ಕನವರ ವಿಚಾರಧಾರೆಗಳು ಮನುಕುಲದ ಮಂಗಳ ಸೌಭಾಗ್ಯವೆನಿಸಿವೆ ಎಂದು ಅರಸೀಕೆರೆ ತಾಲೂಕು ಬಂದೂರು ವಿರಕ್ತಾಶ್ರದ ಪೀಠಾಧಿಪತಿ ಮಹಾಲಿಂಗಸ್ವಾಮೀಜಿ ಅಭಿಪ್ರಾಯಪಟ್ಟರು.

ಬಸವಕೇಂದ್ರ ಮತ್ತು ಅನುಭವ ಮಂಟಪದವರು ನಗರದ ಜಯದೇವ ಮುರುಘರಾಜೇಂದ್ರ ಸಭಾಂಗಣದಲ್ಲಿ ಶರಣೆ ಲಲಿತಮ್ಮ ಟಿ.ಸಿ ಮೋಹನ್‌ರವರ ಸ್ಮರಣಾರ್ಥ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

12 ನೇ ಶತಮಾನದಲ್ಲಿ ಬದುಕಿದ್ದ ಶರಣರು ಸಮಾನತೆಯ ಸಮಾಜವನ್ನು ಸ್ಥಾಪಿಸಲು ಬಿಜ್ಜಳನ ರಾಜಪ್ರಭುತ್ವವನ್ನೆ ತೃಣವಾಗಿ ಕಂಡು ಶೋಷಿತರ ದನಿಯಾಗಿ ಹೋರಾಟ ನಡೆಸಿ ತಮ್ಮ ವಿಚಾರ ಧಾರೆಗಳನ್ನು ವಚನಗಳ ಮೂಲಕ ತಿಳಿಸಿದರು. ಅವುಗಳನ್ನು ಜೀವನದಲ್ಲಿ ಪಾಲಿಸಬೇಕಾದಂತಹ ಅನಿವಾರ್ಯತೆ ಇಂದು ಅತಿ ಅಗತ್ಯವಾಗಿದೆ. ವೈರಾಗ್ಯ ನಿಧಿ ಎನಿಸಿದ್ದ ಅಕ್ಕಮಹಾದೇವಿ ಸಮಾಜಮುಖಿಯಾಗಿ ಹೊರಟಳು ಅಂದಿಗೂ ಇಂದಿಗೂ ಮಹಾದೇವಿಯಕ್ಕನ ವೈಚಾರಿಕ ನಿಲುವು ಔಪಚಾರಿಕವಾಗಿಲ್ಲ ಪ್ರಚಾರ ಪ್ರಿಯವಾಗಿಲ್ಲ ನಿಂದನೆ ಹಾಗೂ ನಿವೇದನೆಯ ಮೂಲಕ ಈಕೆಯ ವೈಚಾರಿಕ ನಿಲುವುಗಳು ಜಗತ್ತಿಗೇ ಆದರ್ಶದ ಪಾಠವನ್ನು ಹೇಳಿವೆ ಎಂದರು. ಮಹಾದೇವಿಯಕ್ಕನ ಹೋರಾಟ ಸ್ತ್ರೀ ಸಮುದಾಯದ ಕುರಿತಾದ ಚಿಂತನೆಯ ದಿಕ್ಕನ್ನೇ ಬದಲಿಸಿತು. ಅವಳ ವಚನಗಳು ಕಾವ್ಯದ ದೃಷ್ಟಿಯಿಂದಲೂ ಅಲಂಕಾರ ದೃಷ್ಠಾಂತಗಳಿಂದ ಕೂಡಿದ್ದು ಸಂಕೀರ್ಣವಾಗಿ ಮತ್ತು ಸಂಗತದಿಂದ ಕೂಡಿವೆ. ನಮಗೆ ಸಿಕ್ಕಿರುವ ಅಕ್ಕನ ಒಂದೊಂದು ವಚನಗಳೂ ಅನರ್ಘ್ಯ ರತ್ನಗಳಂತಿವೆ. ಅಲ್ಲಮರಿದ್ದ ಸಭೆಯಲ್ಲಿ ತನ್ನನ್ನು ತಾನು ಜಗತ್ತಿಗೆ ತೋರ್ಪಡಿಸಿ ರೀತಿ ಇಂದಿಗೂ ಮಾದರಿಯಾಗಿದೆ. ಬಸವಾದಿಶರಣರಿಂದ ಅಕ್ಕ ಎಂದು ಕರೆಸಿಕೊಂಡ ಮಹಾದೇವಿ ಇಂದು ನಮ್ಮೇಲ್ಲರಿಗೆ ಆದರ್ಶಮಯ ಜೀವನದ ದಾರಿ ತೋರಿದ ಮಹಾ ಸಾದ್ವಿ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಇತಿಹಾಸ ಸಂಶೋಧಕ ಡಾ. ಡಿ ಎನ್ ಯೋಗೀಶ್ವರಪ್ಪ ಮಾತನಾಡಿ, ಮಹಾದೇವಿಯಕ್ಕ ತನ್ನ ವೈಚಾರಿಕತೆ ಮತ್ತು ಆತ್ಮ ಪ್ರತ್ಯಯದ ಮೂಲಕ ಬೆಳಕಾದವಳು. ಈಕೆ ಸಂಸಾರದಲ್ಲಿದ್ದು ಇಲ್ಲದ ಹಾಗೆ ತಾವರೆಯ ಎಲೆಯ ಮೇಲಿನ ನೀರಿನಂತೆ ಅಂಟಿಯೂ ಅಂಟದಂತೆ ಇದ್ದವಳು. ರಾಜ ಪ್ರಭುತ್ವ ಮತ್ತು ಸಾಮಾಜಿಕ ಪ್ರಭುತ್ವ ಎರಡನ್ನೂ ಏಕಕಾಲಕ್ಕೆ ದಿಕ್ಕರಿಸಿ ಮಹಾ ಬೆಳಕಾಗಾಗಿ ಜೀವಿಸಿದ ಮನುಕುಲದ ಶ್ರೇಷ್ಠ ಮಾದರಿಯೊಂದನ್ನು ಸೃಷ್ಟಿಸಿದವಳು ಎಂದರು.

ಸಾಹಿತಿಗಳಾದ ಡಾ ಬಿ ಸಿ ಶೈಲಾನಾಗರಾಜು ಮಾತನಾಡಿ, ಚೆನ್ನಮಲ್ಲಿಕಾರ್ಜುನನ್ನೇ ತನ್ನ ಅಲೌಕಿಕ ಪತಿಯನ್ನಾಗಿ ಸ್ವೀಕರಿಸಿದ್ದ ಮಹಾದೇವಿಯಕ್ಕ ಕನ್ನಡದ ಮೊದಲ ಲೇಖಕಿಯಾಗಿ ವಚನಗಳ ರಚನೆಯ ಜೊತೆಗೆ ಯೋಗಾಂಗ ತ್ರಿವಿದಿಗಳಿಂದ ಕೂಡಿರುವ ಈ ಕೃತಿಯನ್ನು ಸ್ಪರ ವಚನಗಳೆಂದು ಕರೆಯಲಾಗಿದೆ ಅಕ್ಕನ ಪ್ರತಿಯೊಂದು ವಚನಗಳಲ್ಲಿಯೂ ಸ್ತ್ರೀ ಸಂವೇದನೆಯ ಅನೇಕ ವಿಚಾರಧಾರೆಗಳು ಇರುವುದನ್ನು ಗುರುತಿಸಬಹುದು.ವೇದಿಕೆಯಲ್ಲಿ ಶರಣ ತತ್ವ ಚಿಂತಕರಾದ ಡಾ. ವಿಜಯಕುಮಾರ ಕಮ್ಮಾರ್ ಗುರುನಾಥ್ ಬೂದಿಹಾಳೆ ಚಂದ್ರಶೇಖರ್ ನಾಗಭೂಷಣ ರಾಮಕೃಷ್ಣಪ್ಪ ಹಾಜರಿದ್ದರು. ಬಸವಕೇಂದ್ರದ ಅಧ್ಯಕ್ಷರಾದ ಸಿದ್ಧಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು ಮಕ್ಕಳಾದ ವಚನನೃತ್ಯ ಅನುಭವಮಂಟಪದ ಮಹಿಳೆಯರಿಂದ ಶರಣರ ವೇಷ ಭೂಷಣ ಕಾರ್ಯಕ್ರಮ ನಡೆಯಿತು.ಬಸವಕೇಂದ್ರದ ಕಲ್ಪನಾ ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ನಿರಂಜನ್ ನಿರೂಪಿಸಿದರು. ಮಂಗಳಾ ಸದಾನಂದ್ ಸ್ವಾಗತಿಸಿದರು.