ಗಿ‍ಳಿ ಶಾಸ್ತ್ರ ಕೇಳಿ ₹35 ಲಕ್ಷ ಟೋಪಿ ಹಾಕಿಸಿಕೊಂಡ ಐಟಿ ಅಧಿಕಾರಿ!

KannadaprabhaNewsNetwork |  
Published : Mar 11, 2026, 01:45 AM IST
Parrot

ಸಾರಾಂಶ

ತಮ್ಮ ವೃತ್ತಿ ಬದುಕಿನ ಅಭ್ಯುದಯಕ್ಕೆ ಗಿಳಿಶಾಸ್ತ್ರ ಕೇಳಲು ಹೋಗಿ ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು 35 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವ ಸ್ವಾರಸ್ಯಕರ ಪ್ರಸಂಗ ನಡೆದಿದೆ.

 ಬೆಂಗಳೂರು :  ತಮ್ಮ ವೃತ್ತಿ ಬದುಕಿನ ಅಭ್ಯುದಯಕ್ಕೆ ಗಿಳಿಶಾಸ್ತ್ರ ಕೇಳಲು ಹೋಗಿ ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು 35 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳೆದುಕೊಂಡಿರುವ ಸ್ವಾರಸ್ಯಕರ ಪ್ರಸಂಗ ನಡೆದಿದೆ.

ಈ ಬಗ್ಗೆ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟೆಂಟ್ ಎತ್ತಿಕೊಂಡು ಪರಾರಿಯಾದ ಗಿಳಿಶಾಸ್ತ್ರದವನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ತಮ್ಮ ವರ್ಗಾವಣೆ ಭವಿಷ್ಯ ಕೇಳಲು ಹೋಗಿ ಮೋಸ

ಕೆಲ ದಿನಗಳ ಹಿಂದೆ ರಸ್ತೆ ಬದಿ ತಮ್ಮ ವರ್ಗಾವಣೆ ಭವಿಷ್ಯ ಕೇಳಲು ಹೋಗಿ ಗೋವಿಂದ (ಹೆಸರು ಬದಲಾಯಿಸಲಾಗಿದೆ) ಮೋಸ ಹೋಗಿದ್ದಾರೆ. ಈ ಅಧಿಕಾರಿಯಿಂದ 35 ಲಕ್ಷ ಮೌಲ್ಯದ 194 ಗ್ರಾಂ. ಚಿನ್ನಾಭರಣ ಹಾಗೂ 1.3 ಕೆಜಿ ಬೆಳ್ಳಿ ವಸ್ತುಗಳನ್ನು ವಂಚಕ ಜ್ಯೋತಿಷಿ ದೋಚಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಮೂರು ದಶಕಗಳಿಂದ ಕೋರಮಂಗಲ ಸಮೀಪದ ಐಟಿ ಕಚೇರಿಯಲ್ಲಿ ಗೋವಿಂದ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕುಟುಂಬದ ಜತೆ ಭಾರತಿನಗರ ಬಳಿ ನೆಲೆಸಿದ್ದಾರೆ. ಇತ್ತೀಚೆಗೆ ಅ‍ವರು ಬೇರೆಡೆ ವರ್ಗಾವಣೆ ನಿರೀಕ್ಷೆಯಲ್ಲಿದ್ದರು. ಹೀಗಿರುವಾಗ ಮನೆ ಸಮೀಪದ ಮಾರುಕಟ್ಟೆಗೆ ತರಕಾರಿ ತರಲು ಹೋಗುತ್ತಿದ್ದಾಗ ಶ್ರೀ ಸರ್ಕಲ್ ಸಮೀಪ ರಸ್ತೆ ಬದಿ ಗಿಳಿಶಾಸ್ತ್ರದ ಶೇಖರ್ ಕಣ್ಣಿಗೆ ಬಿದ್ದಿದ್ದಾರೆ. ಆಗ ಆತ ಅಧಿಕಾರಿಯನ್ನು ಕರೆದು ನಿಮ್ಮ ಮುಖ ನೋಡಿ ಶಾಸ್ತ್ರ ಹೇಳುತ್ತೇನೆ ಎಂದಿದ್ದಾನೆ. ಈ ಮಾತಿಗೆ, ಸರಿ ಹಾಗಿದ್ರೆ ಭವಿಷ್ಯ ಹೇಳು ಎಂದಿದ್ದಾರೆ. ನಿಮ್ಮ ಬದುಕಿನಲ್ಲಿ ಸುಧಾರಣೆಗೆ ಒಂದು ಪೂಜೆ ಮಾಡಬೇಕು. ಇದಕ್ಕೆ 50 ಸಾವಿರ ರು. ಖರ್ಚಾಗಲಿದೆ ಎಂದಿದ್ದಾನೆ. ಆಗ ಮನೆಗೆ ಹೋಗಿ ದುಡ್ಡು ತರುವುದಾಗಿ ಹೇಳಿ ಬಂದಿದ್ದೆ ಎಂದು ದೂರಿನಲ್ಲಿ ಗೋವಿಂದ ವಿವರಿಸಿದ್ದಾರೆ.

ಇದಾದ ಕೆಲ ದಿನಗಳ ಬಳಿಕ 50 ಸಾವಿರ ರು. ಸಮೇತ ಜ್ಯೋತಿಷಿಯನ್ನು ಅಧಿಕಾರಿ ಭೇಟಿ ಮಾಡಿದ್ದರು. ಆಗ ಹಣ ಪಡೆದ ಆತ, ತಾನು ಪೂಜೆ ಮುಗಿಸಿ ಕರೆ ಮಾಡುವುದಾಗಿ ಹೇಳಿ ಅಧಿಕಾರಿಯನ್ನು ಕಳುಹಿಸಿದ್ದ. ನಿಮಗೆ ಉನ್ನತ ಹುದ್ದೆಗಳು ಹಾಗೂ ಬಡ್ತಿಗಳು ಸಿಗುತ್ತವೆ ಎಂದು ಆಶ್ವಾಸನೆ ಕೊಟ್ಟಿದ್ದ. ಇದಾದ ನಂತರ ಮೊಬೈಲ್‌ನಲ್ಲಿ ಪರಸ್ಪರ ಸಂಪರ್ಕ ಇತ್ತು. ತಾನು ಪೂಜೆ ಮಾಡಿರುವುದಾಗಿ ಗೋವಿಂದ ಅವರಿಗೆ ಆರೋಪಿ ಹೇಳಿದ್ದ.

ಆಭರಣ ಇಲ್ಲದೆ ಪೂಜೆ ಮಾಡಿಸದೆ ಹೋದರೆ ಗಂಡಾಂತರ:

ಕೊನೆಗೆ ತಮ್ಮ ವರ್ಗಾವಣೆ ಭವಿಷ್ಯ ಬಗೆಹರಿಸಿಕೊಳ್ಳಲು ಅವರು ಮುಂದಾಗಿದ್ದಾರೆ. ಆಗ ನಾನು ಸತ್ಯ ಹೇಳುತ್ತೇನೆ. ನಾನು ಹೇಳಿದ ಶಾಸ್ತ್ರದಿಂದ ನಿಮಗೆ ಒಳಿತಾಗಲಿದೆ ಎಂದಿದ್ದಾನೆ. ಈ ಮಾತನ್ನು ಅಧಿಕಾರಿ ನಂಬಿದ್ದಾರೆ. ಮೊದಲು ವಿಶೇಷ ಪೂಜೆ ನೆಪದಲ್ಲಿ 50 ಸಾವಿರು ರು. ಪಡೆದ ಆರೋಪಿ, ನಂತರ ಪೂಜೆ ನೆಪದಲ್ಲಿ ಹಣದ ಬದಲಿಗೆ ಮನೆಯಲ್ಲಿರುವ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಪಡೆದಿದ್ದಾನೆ. ನೀವು ಮನೆಯಲ್ಲಿರುವ ಆಭರಣ ತಂದು ಪೂಜೆ ಮಾಡಿಸದೆ ಹೋದರೆ ಗಂಡಾಂತರ ಎದುರಾಗಲಿದೆ ಎಂದು ಆತ ಹೆದರಿಸಿದ್ದಾನೆ. ಈ ಮಾತಿಗೆ ಹೆದರಿ ಆಭರಣವನ್ನೂ ಆರೋಪಿಗೆ ಅಧಿಕಾರಿ ಕೊಟ್ಟಿದ್ದರು.

ಹೀಗೆ ಹಣ ಹಾಗೂ ಚಿನ್ನಾಭರಣ ಸಂದಾಯವಾದ ಬಳಿಕ ಗಿಳಿ ಶಾಸ್ತ್ರದವನ ವರಸೆ ಬದಲಾಗಿದೆ. ಚಿನ್ನಾಭರಣ ಮರಳಿಸುವಂತೆ ಅಧಿಕಾರಿ ಕೇಳಿದಾಗ ಆತ ಜೀವ ಬೆದರಿಕೆ ಹಾಕಿದ್ದಾನೆ. ಅಂತಿಮವಾಗಿ ಅಧಿಕಾರಿಗೆ ತಾನು ಮೋಸ ಹೋಗಿರುವುದು ಅರಿವಾಗಿ, ಭಾರತಿನಗರ ಠಾಣೆಗೆ ತೆರಳಿ ಅವರು ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ವಂಚಕ ಜ್ಯೋತಿಷಿ ಪತ್ತೆಗೆ ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು