ಕನ್ನಡಪ್ರಭ ವಾರ್ತೆ ಶಿರಸಿ
ಜಿಎಸ್‌ಟಿ ದರದಲ್ಲಿ ಪರಿಷ್ಕರಣೆ ಮಾಡಿರುವುದರಿಂದ ಜನಸಾಮಾನ್ಯರಿಗ ಅನುಕೂಲವಾಗಿದೆ. ಇದು ಜಿಎಸ್‌ಟಿ ಉಳಿತಾಯದ ಸಂಭ್ರಮದ ಕಾಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಸೋಮವಾರ ನಗರದ ಪೂಗಭವನದಲ್ಲಿ ಶಿರಸಿ -ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಜಿಎಸ್ಟಿ ಉಳಿಕೆ ಉತ್ಸವ - ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಮನಸ್ಸು ಮಾಡಿದರೆ ಯಾವೆಲ್ಲ ಪರಿವರ್ತನೆ ಮಾಡಬಹುದು ಎಂಬುದನ್ನು ಜಿಎಸ್‌ಟಿ ದರ ಪರಿಷ್ಕರಣೆ ಮೂಲಕ ಕೇಂದ್ರ ಸರ್ಕಾರ ತೋರ್ಪಡಿಸಿದೆ. ಸಾಮಾನ್ಯ ಬಡ ಜನರಿಗೆ ನ್ಯಾಯ ಕೊಡುವ ಕೆಲಸವನ್ನು ಸರ್ಕಾರ ಕಳೆದ ಹನ್ನೊಂದು ವರ್ಷದಲ್ಲಿ ಮಾಡುತ್ತಿದೆ. ಇದರಿಂದ ದೇಶದಲ್ಲಿ ಸುಮಾರು ೨೫ಕೋಟಿಯಷ್ಟು ಜನ ಬಡತನರೇಖೆಗಿಂತ ಮೇಲೆ ಬಂದಿದ್ದಾರೆ ಎಂದರು.
ದೇಶದಲ್ಲಿ ಕೇಂದ್ರ ಸರ್ಕಾರದ ಕ್ರಮದಿಂದ ಸ್ವದೇಶಿ ಹಾಗೂ ಸ್ವಾವಲಂಬಿ ಚಿಂತನೆ ನಡೆಯುತ್ತಿದೆ. ಭಾರತ ಜಗತ್ತಿನ ನೀತಿ ನೀರೂಪಣೆ ಮಾಡುವ ದೇಶವಾಗಿ ಹೊರಹೊಮ್ಮಿದೆ. ಜಿಎಸ್‌ಟಿ ತೆರಲೇಬೇಕಾಗಿತ್ತು. ಆದರೆ ಆರಂಭದಲ್ಲಿದ್ದ ದೋಷ ಸರಿಪಡಿಸಿ ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ಸುಧಾರಣೆ ಮಾಡಿದ್ದಾರೆ. ಅಗತ್ಯತೆಗೆ ತಕ್ಕಂತೆ ಪರಿವರ್ತನೆ ಮಾಡಿದ್ದಾರೆ ಎಂದರು.ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಬಿಜೆಪಿ ಆರ್ಥಿಕ ಪ್ರಕೋಷ್ಟದ ರಾಜ್ಯ ಮಾಜಿ ಸಂಚಾಲಕ ಎಸ್. ವಿಶ್ವನಾಥ್ ಭಟ್ ಮಾತನಾಡಿ, ನಮ್ಮೆಲ್ಲರ ಕಲ್ಪನೆ ಮೀರಿ ₹5 ಲಕ್ಷದ ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಏರಿಸಿದ್ದು ಮೋದಿ ಸಾಧನೆಯಾಗಿದೆ. ಜಿಎಸ್ಟಿ 2.0 ಇದ್ದಕ್ಕಿದ್ದಂತೆ ಆದ ಸುಧಾರಣೆಯಲ್ಲ, ಸರ್ವನುಮತದಿಂದ ಅಂಗೀಕರಿಸಲಾದ ಸುಧಾರಣೆ ಇದು. ಎಲ್ಲಾ ರಾಜ್ಯಗಳ ಸಮ್ಮತಿ ದೊರೆತದ್ದು, ಭಾರತದ ಒಕ್ಕೂಟ ವ್ಯವಸ್ಥೆಗೆ ಸಂದ ಜಯ. ಇದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ದೊರೆತ ಜಯ ಎಂದರು.
ತೆರಿಗೆ ಕಡಿತದಿಂದ ಗ್ರಾಹಕರ ಕೊಳ್ಳುವ ಶಕ್ತಿ ಖಂಡಿತವಾಗಿ ಹೆಚ್ಚಾಗಲಿದೆ. ಉತ್ಪಾದನೆ ಹಾಗೂ ಪೂರೈಕೆ ಹೆಚ್ಚಳ ಆಗಲಿದೆ, ಹಾಗಾಗಿ ಉದ್ಯೋಗ ಸೃಷ್ಟಿಯಾಗಲಿದೆ. ತೆರಿಗೆ ಸಂಗ್ರಹದಲ್ಲಿ ಈ ಕ್ಷಣದಲ್ಲಿ ಆಗುವ ಕೊರತೆ ಈ ಎಲ್ಲಾ ಚಟುವಟಿಕೆಯಿಂದ ನೀಗಲಿದೆ ಎಂದರು.ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ, ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಇದ್ದರು. ಆನಂದ ಸಾಲೇರ್ ಸ್ವಾಗತಿಸಿದರು. ಉಷಾ ಹೆಗಡೆ ನಿರೂಪಿಸಿದರು.