ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!

KannadaprabhaNewsNetwork |  
Published : Jun 18, 2025, 02:48 AM ISTUpdated : Jun 18, 2025, 12:32 PM IST
ಶಾಲಾ ಮಕ್ಕಳು | Kannada Prabha

ಸಾರಾಂಶ

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ 20 ದಿನಗಳು ಸಮೀಪಿಸುತ್ತಿದ್ದರೂ ಸರ್ಕಾರಿ ಶಾಲಾ ಮಕ್ಕಳಿಗೆ ಇನ್ನೂ ಶೂ, ಸಾಕ್ಸ್‌ ಖರೀದಿಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.

  ಬೆಂಗಳೂರು : ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ 20 ದಿನಗಳು ಸಮೀಪಿಸುತ್ತಿದ್ದರೂ ಸರ್ಕಾರಿ ಶಾಲಾ ಮಕ್ಕಳಿಗೆ ಇನ್ನೂ ಶೂ, ಸಾಕ್ಸ್‌ ಖರೀದಿಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಈ ಸಂಬಂಧ ಶಿಕ್ಷಣ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ದೊರೆತು ಹಣ ಬಿಡುಗಡೆ ವಿಳಂಬವಾಗಿದೆ ಎನ್ನಲಾಗಿದೆ.

2025-26ನೇ ಶೈಕ್ಷಣಿಕ ಸಾಲು ಮೇ 29ರಿಂದ ಆರಂಭಗೊಂಡು ಶಾಲೆಗಳಲ್ಲಿ ತರಗತಿ ಚಟುವಟಿಕೆಗಳು ನಡೆಯುತ್ತಿವೆ. ಈ ಬಾರಿ ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕ, ಸಮವಸ್ತ್ರವನ್ನು ಶಾಲೆಗಳಿಗೆ ತಲುಪಿಸಿದ ಶಿಕ್ಷಣ ಇಲಾಖೆ ಅದ್ಯಾಕೋ ಶೂ ಮತ್ತು ಸಾಕ್ಸ್‌ ಖರೀದಿಗೆ ಹಣ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದೆ.

ಕಳೆದ ಸಾಲಿನಲ್ಲಿ 1ರಿಂದ 10ನೇ ತರಗತಿವರೆಗಿನ 42 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಜೂನ್‌ 1ರಂದು ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್‌ ಖರೀದಿಗೆ ₹121 ಕೋಟಿ ಅನುದಾನ ಬಿಡಗುಡೆ ಮಾಡಲಾಗಿತ್ತು. ಆದರೆ, ಈ ಬಾರಿ ಶಾಲೆ ಆರಂಭವಾಗಿ 20 ದಿನಗಳಾಗುತ್ತಿದ್ದರೂ ಇನ್ನೂ ಹಣ ನೀಡಿಲ್ಲ. ಇದರಿಂದ ಮಕ್ಕಳು ಹಳೆಯ ಶೂ, ಸಾಕ್ಸ್‌ಗಳನ್ನೇ ಹಾಕಿಕೊಂಡು ಬರುವಂತಾಗಿದೆ. ಹಳೆಯ ಶೂ, ಸಾಕ್ಸ್‌ಗಳು ಹರಿದು ಹೋಗಿರುವವರು ಚಪ್ಪಲಿ ಹಾಕಿಕೊಂಡು ಶಾಲೆಗೆ ಬರುತ್ತಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿಗೆ ಅನುಗುಣವಾಗಿ ಶೂ, ಸಾಕ್ಸ್‌ ಖರೀದಿಗೆ ಬೇಕಿರುವ ಅನುದಾನಕ್ಕಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಹಣಕಾಸು ಇಲಾಖೆಯಲ್ಲಿ ಈ ಪ್ರಸ್ತಾವನೆಗೆ ಇನ್ನೂ ಅನುಮೋದನೆ ದೊರೆತಿಲ್ಲ ಎನ್ನಲಾಗಿದೆ. ಇಲಾಖೆಯ ಪ್ರಸ್ತಾವನೆಯಲ್ಲಿ ಈ ಬಾರಿಯೂ ಶೂ, ಸಾಕ್ಸ್ ದರದ ಪರಿಷ್ಕರಣೆಗೆ ಇಲಾಖೆ ಬೇಡಿಕೆ ಇಟ್ಟಿಲ್ಲ. ಹಾಗಾಗಿ 1ರಿಂದ 5ನೇ ತರಗತಿ ಮಕ್ಕಳ ಪ್ರತಿ ಜೊತೆ ಶೂಗೆ ₹265, 6ರಿಂದ 8ನೇ ತರಗತಿ ಮಕ್ಕಳ ಶೂ ಖರೀದಿಗೆ ತಲಾ ₹295 ಮತ್ತು 9 ಮತ್ತು 10ನೇ ತರಗತಿ ಮಕ್ಕಳಿಗೆ ತಲಾ ₹325 ದರವನ್ನೇ ಉಳಿಸಲಾಗಿದೆ.

ಕಳೆದ ಐದು ವರ್ಷಗಳ ಹಿಂದಿನ ದರವನ್ನೇ ಈಗಲೂ ಮುಂದುವರೆಯುವ ಸಾಧ್ಯತೆ ಇದೆ. ಬಹುತೇಕ ಈ ಬಾರಿ 40 ಲಕ್ಷಕ್ಕೂ ಹೆಚ್ಚಿನ ಮಕ್ಕಳಿಗೆ ಪ್ರತೀ ವರ್ಷದಂತೆ ಆಯಾ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ (ಎಸ್‌ಡಿಎಂಸಿ) ಮೂಲಕವೇ ಶೂ, ಸಾಕ್ಸ್‌ ಖರೀದಿಗೆ ಸುಮಾರು ₹120 ಕೋಟಿ ಅನುದಾನ ಕೋರಲಾಗಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌ ಖರೀದಿಗೆ ಅಗತ್ಯ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಅನುಮೋದನೆ ದೊರೆತು ಆದೇಶ ಹೊರಬರುವುದನ್ನು ಎದುರು ನೋಡುತ್ತಿದ್ದೇವೆ. ಆದಷ್ಟು ಶೀಘ್ರ ಆದೇಶ ಹೊರಬೀಳುವ ನಿರೀಕ್ಷೆ ಇದೆ.

-ಡಾ। ತ್ರಿಲೋಕ್‌ ಚಂದ್ರ, ಶಾಲಾ ಶಿಕ್ಷಣ ಇಲಾಖೆ ಆಯುಕ್ತ.

PREV
Read more Articles on

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ