ಒಳ್ಳೆ ಮನುಷ್ಯರಾಗಿ ಉಳಿಯುವುದು ಕಷ್ಟ

KannadaprabhaNewsNetwork | Published : Sep 30, 2024 1:18 AM

ಸಾರಾಂಶ

ತುಮಕೂರು: ಕೊನೆಯವರೆಗೆ ಒಳ್ಳೆಯ ಮನುಷ್ಯರಾಗಿ ಉಳಿಯುವುದು ಬಹಳ ಕಷ್ಟ. ಅದರಲ್ಲೂ ಯಾರಿಗೂ ವಂಚನೆ ಮಾಡದೆ ಬದುಕುವುದು ಇನ್ನೂ ಕಷ್ಟದ ಕೆಲಸ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

ತುಮಕೂರು: ಕೊನೆಯವರೆಗೆ ಒಳ್ಳೆಯ ಮನುಷ್ಯರಾಗಿ ಉಳಿಯುವುದು ಬಹಳ ಕಷ್ಟ. ಅದರಲ್ಲೂ ಯಾರಿಗೂ ವಂಚನೆ ಮಾಡದೆ ಬದುಕುವುದು ಇನ್ನೂ ಕಷ್ಟದ ಕೆಲಸ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.ಸಮತಾ ಬಳಗದ ವತಿಯಿಂದ ತುಮಕೂರು ನಗರದ ಐಎಂಎ ಭವನದಲ್ಲಿ ಹಮ್ಮಿಕೊಂಡಿದ್ದ ಜಿಎಂಎಸ್ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ತನ್ನ ಸಚ್ಚಾರಿತ್ರ್ಯವನ್ನು, ತನ್ನ ಪ್ರಾಮಾಣಿಕತೆಯನ್ನು, ತನ್ನ ಸರಳತೆಯನ್ನು, ತನ್ನ ಬದ್ದತೆಯನ್ನು, ತನ್ನ ಕಾಯಕ ನಿಷ್ಠೆಯನ್ನು ಯಾವುದನ್ನು ಬಿಟ್ಟುಕೊಡದೆ ಬದುಕುವುದು ಇದೆಯಲ್ಲ, ಇದೊಂದು ದೊಡ್ಡ ಬದುಕು. ಆ ರೀತಿ ಬದುಕಿದವರು ಜಿ.ಎಂ.ಶ್ರೀನಿವಾಸಯ್ಯ ಎಂದು ತಿಳಿಸಿದರು.

ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಪ್ರೊಫೆಸರ್ ಜಿ.ಎಂ.ಶ್ರೀನಿವಾಸಯ್ಯ ಅವರ ಬದುಕನ್ನು ನೋಡಿದರೆ ದೊಡ್ಡ ಆಲದಂತೆ. ಪ್ರೊ.ಜೆಎಂಎಸ್ ಜೊತೆಯಲ್ಲಿ ಬದುಕಿದ್ದೇನೆ. ಮುಕ್ತವಾದ ಬದುಕು ಅವರದ್ದು ಎಂದರು.ಪ್ರಾಸ್ತಾವಿಕ ಮಾತನಾಡಿದ ಚರಕ ಆಸ್ಪತ್ರೆಯ ಡಾ.ಬಸವರಾಜು, ಪ್ರಾಮಾಣಿಕವಾಗಿ, ಸರಳವಾಗಿ, ಈ ಸಮಾಜದ ಹಿತವನ್ನು ಕಾಪಾಡುವಂತಹ, ಎಲ್ಲಾ ಜನರ ಸಮಾನತೆಯನ್ನು ಬಯಸುವಂತಹ ಮನಸ್ಸುಗಳು ಕ್ಷೀಣಿಸುತ್ತಿರುವ ಈ ಕ್ಷಣದಲ್ಲಿ ಇರುವ ಬೆರಳೆಣಿಕೆಯ ಅಂತಹ ವ್ಯಕ್ತಿತ್ವಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹೆಚ್ಚು ಜನ ಇಂತಹ ದಾರಿಯಲ್ಲಿ ನಡೆಯಬೇಕಾಗುತ್ತದೆ. ಇಂತಹ ಜನಸಂಖ್ಯೆಯನ್ನು ಜಾಸ್ತಿ ಮಾಡಿಕೊಳ್ಳಬೇಕಾಗುತ್ತದೆ. ಜಿಎಂಎಸ್ ನಂಥ ಚೇತನಗಳು ದ್ವಿಗುಣಗೊಳ್ಳಬೇಕಾಗಿದೆ. ಅವರ ವ್ಯಕ್ತಿತ್ವ ಎಂತಹದೆಂದು ಎಲ್ಲರಿಗೂ ತಿಳಿದಿದೆ. ದೊರೈ, ಶ್ರೀನಿವಾಸಯ್ಯ ಮತ್ತು ರಾಮಚಂದ್ರ ಅವರು ಪುಸ್ತಕ ಮನೆ ಮಾಡಿಕೊಂಡು ಒಳ್ಳೆಯ ಪುಸ್ತಕಗಳನ್ನು ತರಸಿಕೊಂಡು ಮಾರಾಟ ಮಾಡುತ್ತಿದ್ದರು ಎಂದರು.

ಈ ಸಂದರ್ಭದಲ್ಲಿ ಎಸ್.ಎ.ಖಾನ್, ಸಾಹಿತಿ ನಾಗರಾಜಶೆಟ್ಟಿ, ಡಾ.ಅರುಂಧತಿ, ಡಾ.ರವಿಕುಮಾರ್ ನೀಹ, ಪತ್ರಕರ್ತ ಕುಚ್ಚಂಗಿ ಪ್ರಸನ್ನ, ನಟ ಎಸ್.ಹನುಮಂತೇಗೌಡ, ವೈ.ಕೆ.ಬಾಲಕೃಷ್ಣ, ಸುಪ್ರೀಂ ಸುಬ್ಬಣ್ಣ, ಸಿ.ಕೆ.ಉಮಾಪತಿ, ಗಂಗಲಕ್ಷ್ಮಿ, ಜಿಎಂಎಸ್ ಕುಟುಂಬದವರು ಮಾತನಾಡಿದರು. ಡಾ.ಬಸವರಾಜು ಸ್ವಾಗತಿಸಿ, ಸಮತಾ ಬಳಗದ ಹೆಚ್.ವಿ.ಮಂಜುನಾಥ್ ನಿರೂಪಿಸಿದರು.

Share this article