ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಲಮಟ್ಟಿಗೆ ಬಾಗಿನ ಅರ್ಪಣೆಗೆ ಬಂದಿದ್ದ ವೇಳೆ ರೈತರಿಗೆ ಹಾಗೂ ಸಂತ್ರಸ್ತರಿಗೆ ಪೊಳ್ಳು ಭರವಸೆಗಳನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರವಲ್ಲ, ಕರ್ನಾಟಕದ ಕಾಂಗ್ರೆಸ್ ನಾಟಕ ಕಂಪನಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಲೇವಡಿ ಮಾಡಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷ್ಣಾ ಭಾಗಕ್ಕೆ ನಿರ್ಲಕ್ಷ್ಯ ಮಾಡಿರುವ ಕಾಂಗ್ರೆಸ್ ಸರ್ಕಾರ, ಬಾಗಿನಕ್ಕೂ ಬರುವ ಎರಡು ದಿನ ಮೊದಲು ಬೆಂಗಳೂರಿನಲ್ಲಿ ಮೀಟಿಂಗ್ ಮಾಡಿದಂತೆ ಮಾಡಿ ಈ ಭಾಗದ ಜನರ ಮನವೊಲಿಸಲು ನಾಟಕವಾಡಿದ್ದಾರೆ. ಆಲಮಟ್ಟಿಗೆ ಬಂದಾಗ ಸಿಎಂ ಆದಿಯಾಗಿ ಯಾರೊಬ್ಬರು ರೈತರಿಗೆ ಭೇಟಿಯಾಗಿಲ್ಲ, ಅವರೊಂದಿಗೆ ಮಾತನಾಡಿಲ್ಲ. ಪೊಳ್ಳು ಭರವಸೆಯಿಂದ ರೈತರಿಗೆ ಅವಮಾನ ಹಾಗೂ ಕೆಲ ವಕೀಲರು ರೈತರ ತಲೆ ಕೆಡಿಸುತ್ತಿದ್ದಾರೆ ಎಂದು ಹೇಳಿ ವಕೀಲರಿಗೆ ಅವಮಾನ ಮಾಡಿದ್ದಾರೆ. ಈ ಕೂಡಲೇ ಸಿಎಂ, ಡಿಸಿಎಂ ರೈತರಿಗೆ ಹಾಗೂ ವಕೀಲರಿಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಇನ್ನು ಗಣೇಶನ ಮೆರವಣಿಗೆಯಲ್ಲಿ ಲಾಠಿ ಚಾರ್ಜ್, 2ಎ ಮೀಸಲಾತಿ ಕೇಳಿದ ಪಂಚಮಸಾಲಿಗರ ಮೇಲೆ ಲಾಠಿ ಚಾರ್ಜ್, ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್, ಎಸ್ಸಿ-ಎಸ್ಟಿ ಹಣ ದುರುಪಯೋಗ, ಹೀಗೆ ಎಲ್ಲ ರಂಗದಲ್ಲೂ ಜನರಿಗೆ ಹಿಂಸೆ ಮಾಡುತ್ತಿದ್ದಾರೆ. ಜಿಪಂ, ತಾಪಂ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡುತ್ತೇವೆ ಎಂದು ಹೇಳಿ ಮತ್ತೆ 100 ವರ್ಷ ಹಿಂದೆ ಹೋಗುತ್ತಿದ್ದೀರಿ. ಜಿಲ್ಲೆಯಲ್ಲಿ ಈಗಾಗಲೇ ಎರಡು ಖಾಸಗಿ ಕಾಲೇಜುಗಳು ಇರುವುದರಿಂದ ಪಿಪಿಪಿ ಮಾದರಿ ಮೆಡಿಕಲ್ ಕಾಲೇಜು ಮಾಡದೆ ಸರ್ಕಾರಿ ಮೆಡಿಕಲ್ ಕಾಲೇಜು ಮಾಡಬೇಕು. ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಹೋರಾಡುತ್ತಿರುವ ಸಮಿತಿಗೆ ನಮ್ಮ ಬೆಂಬಲ ಇದೆ ಎಂದರು.ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಕೃಷ್ಣಾ ಕೊಳ್ಳದ ಬಗ್ಗೆ ಕಾಂಗ್ರೆಸ್ ನವರು ಕೇವಲ ಭರವಸೆಗಳನ್ನೇ ಕೊಡುತ್ತಿದ್ದಾರೆ. ಯುಕೆಪಿ ಯೋಜನೆಗೆ ಸಂಬಂಧಿಸಿದಂತೆ ಕಳೆದ ಎರಡು ಬಜೆಟ್‌ನಲ್ಲಿ ಸರ್ಕಾರ ಎಷ್ಟು ಹಣ ಮೀಸಲಿಟ್ಟಿದ್ದಾರೆ ಎಂಬುದನ್ನು ಘೋಷಣೆ ಮಾಡಲಿ ಎಂದರು. ಶಾಂತಿದೂತರಾಗಿರುವ ಮಹಮ್ಮದ ಪೈಗಂಬರ್ ಕಾರ್ಯಕ್ರಮದಲ್ಲಿ ಮುಸ್ಲಿಂ ಯುವಕರು ಕೋಮುವಾದ ಸೃಷ್ಟಿಸುವ ಕೆಲಸ ಮಾಡಬಾರದು. ಕಾಂಗ್ರೆಸ್ ಸರ್ಕಾರ ಕೇವಲ ಒಂದು ವರ್ಗಕ್ಕೆ ಓಲೈಕೆ ಮಾಡುತ್ತಿದ್ದು, ಇದರಿಂದ ರಾಜ್ಯದ ಜನರು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಇನ್ನು ಸಿಎಂ, ಡಿಸಿಎಂ ಹಾಗೂ ಖರ್ಗೆ ಅವರು ರಾಷ್ಟ್ರಪತಿಗಳಿಗೆ ಗೌರವ ಕೊಡುವುದನ್ನು ಕಲಿಯಬೇಕು ಎಂದರು.
ನಗರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದರು. ಇಂದೋರ್ ಗ್ಯಾಂಗಸ್ಟರ್ ಸಲ್ಮಾನ್ ಲಾಲಾ ಭಾವಚಿತ್ರ ಮೆರವಣಿಗೆ ಮಾಡಿದರು. 15 ಮಿನಿಟ್ ಪೊಲೀಸ್ ಹಠಾವೋ ಎಂದು ಪ್ರಚೋದನಾಕಾರಿ ಹಾಡು ಹಾಕಿದರು. ಆದರೆ ಇದಕ್ಕೆಲ್ಲ ಕೇವಲ ನಾಮಕಾವಾಸ್ತೆ ಎಂಬಂತೆ ಒಂದು ಸಾಧಾರಣ ಕೇಸ್ ದಾಖಲು ಮಾಡಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಈರಣ್ಣ ರಾವೂರ, ಸಂಜೀವ ಐಹೊಳ್ಳಿ, ವಿಜಯ ಜೋಶಿ ಉಪಸ್ಥಿತರಿದ್ದರು.