ಚಿನ್ನಯ್ಯ ಫೋನ್ ಮಾಡಿದ್ದು ನಿಜ: ಪ್ರಕಾಶ್‌ರಾಜ್‌

KannadaprabhaNewsNetwork |  
Published : Jun 18, 2026, 01:45 AM IST
ಪ್ರಕಾಶ್‌ರಾಜ್‌ | Kannada Prabha

ಸಾರಾಂಶ

ಧರ್ಮಸ್ಥಳ ಗ್ರಾಮದಲ್ಲಿ ಸಾವು ಪ್ರಕರಣ ಸಂಬಂಧ ಚಿನ್ನಯ್ಯ ನನಗೆ ಮೊದಲು ಕರೆ ಮಾಡಿದ್ದು ನಿಜ. ಆತ ಎಸ್‌ಐಟಿಗೆ ಹೋಗುವಾಗ ನನ್ನನ್ನು ಭೇಟಿ ಮಾಡಬೇಕು ಎಂದು ಹೇಳಿದ, ಎಸ್ಐಟಿ ಮುಂದೆ ಹೋಗಲು ಭಯವಾಗುತ್ತಿದೆ ಎಂದ. ನಾನೇ ಧೈರ್ಯ ತುಂಬಿ ಕಳುಹಿಸಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಧರ್ಮಸ್ಥಳ ಗ್ರಾಮದಲ್ಲಿ ಸಾವು ಪ್ರಕರಣ ಸಂಬಂಧ ಚಿನ್ನಯ್ಯ ನನಗೆ ಮೊದಲು ಕರೆ ಮಾಡಿದ್ದು ನಿಜ. ಆತ ಎಸ್‌ಐಟಿಗೆ ಹೋಗುವಾಗ ನನ್ನನ್ನು ಭೇಟಿ ಮಾಡಬೇಕು ಎಂದು ಹೇಳಿದ, ಎಸ್ಐಟಿ ಮುಂದೆ ಹೋಗಲು ಭಯವಾಗುತ್ತಿದೆ ಎಂದ. ನಾನೇ ಧೈರ್ಯ ತುಂಬಿ ಕಳುಹಿಸಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಟ ಪ್ರಕಾಶ್ ರಾಜ್, ಆತನನ್ನು ಫೋನ್ ಮೂಲಕ ನನಗೆ ಪರಿಚಯಿಸಿದ್ದು ಗಿರೀಶ್ ಮಟ್ಟಣ್ಣವರ್, ಅವರೇ ಅವರ ಫೋನ್ ಮೂಲಕ ನನಗೆ ಕರೆ ಮಾಡಿ, ಇಲ್ಲೊಬ್ಬ ವ್ಯಕ್ತಿ ಮಂಡ್ಯ ಮೂಲದವನು. ಅದೇ ಮಾಸ್ಕ್ ಮ್ಯಾನ್ ಇದ್ದಾನೆ. ಆತ ನಿಮ್ಮ ಜೊತೆ ಮಾತನಾಡಬೇಕಂತೆ ಅಂತ ಹೇಳಿ ನನಗೆ ಕರೆ ಮಾಡಿ ಕೊಟ್ಟರು. ಆತ ಫೋನ್‌ನಲ್ಲಿ ನನ್ನ ಜೊತೆ ತಮಿಳಲ್ಲಿ ಮಾತನಾಡಿ, ಸರ್ ನಿಮ್ಮನ್ನು ಭೇಟಿ ಮಾಡಬೇಕು. ನಿಮ್ಮ ಜೊತೆ ಮಾತನಾಡಬೇಕು, ಧರ್ಮಸ್ಥಳದಲ್ಲಿ ಭಯಾನಕ ಘಟನೆಗಳು ನಡೆದಿವೆ. ಅವುಗಳನ್ನು ನಾನು ಹೇಳಬೇಕು ಅಂದ. ಅದಕ್ಕೆ ನಾನು ನೀನು ನೇರವಾಗಿ ಎಸ್‌ಐಟಿಗೆ ಹೋಗು, ಅಲ್ಲಿ ಮೊಹಂತಿಯಂಥ ಉತ್ತಮ ಪೊಲೀಸ್ ಅಧಿಕಾರಿಗಳಿದ್ದಾರೆ. ಅವರ ಜೊತೆ ಮಾತನಾಡು ಅಂತ ಹೇಳಿದೆ. ಆದರೆ, ಆತ ನನಗೆ ಭಯವಾಗುತ್ತಿದೆ ಎಂದು ಹೇಳಿದ. ಅದಕ್ಕೆ ನೀನು ನಿಜ ಹೇಳಿ, ಆರೋಪಿಗಳಿಗೆ ಶಿಕ್ಷೆಯಾದರೆ ಇಡೀ ರಾಜ್ಯವೇ ನಿನ್ನನ್ನು ಕೊಂಡಾಡುತ್ತೆ. ಭಯವೇಕೇ?, ಆಗ ನಾನೇ ನಿನ್ನನ್ನು ಬಂದು ಅಪ್ಪಿ ಮುದ್ದಾಡುತ್ತೇನೆ ಎಂದು ಹೇಳಿದೆ ಎಂದು ವಿವರಿಸಿದರು.

ನೀವು ಪರಿಚಯಿಸಿದ ವ್ಯಕ್ತಿ ಸರಿ ಇಲ್ಲ:

ಸ್ವಲ್ಪ ದಿನಗಳ ನಂತರ ನಾನು ಎಸ್‌ಐಟಿ ಮುಖ್ಯಸ್ಥ ಮೊಹಂತಿ ಅ‍ವರಿಗೆ ಕರೆ ಮಾಡಿ ವಿಚಾರಿಸಿದೆ. ಆಗ ಅವರು ಸರ್ ನೀವು ಪರಿಚಯಿಸಿದ ವ್ಯಕ್ತಿ ಸರಿ ಇಲ್ಲ. ಈಗ ತನ್ನ ಹೇಳಿಕೆಗಳನ್ನು ಆತ ತಿರುಚುತ್ತಿದ್ದಾನೆ. ಆತನನ್ನು ನಂಬಬೇಡಿ ಎಂದು ಹೇಳಿದರು. ನಂತರ ನಾನು ಆತನ ಕರೆ ಸ್ವೀಕರಿಸಿಲ್ಲ. ಆತನಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಧರ್ಮಸ್ಥಳ ಹೋರಾಟಕ್ಕೆ ನಾನು ಹೋಗೇ ಇಲ್ಲ. ಗಿರೀಶ್ ಮಟ್ಟಣ್ಣನವರ್, ಮಹೇಶ್ ತಿಮರೋಡಿ ಯಾರೂ ನನಗೆ ಗೊತ್ತಿಲ್ಲ ಎಂದರು.

200 ಕೋಟಿ ವಿಚಾರದಲ್ಲಿ ಕೆಲ ಮಾಧ್ಯಮಗಳು ನನ್ನ ತೇಜೋವಧೆ ಮಾಡಿದವು. ಇದೊಂದೇ ಪ್ರಕರಣವಲ್ಲ, ಬೆಟ್ಟಿಂಗ್ ಆ್ಯಪ್ ಕುರಿತು 100 ಕೋಟಿ ರು. ಆರೋಪ, ಸುಮ್ಮನೆ ಬೇರೆ ಪ್ರಕರಣಗಳಲ್ಲೂ ನನ್ನ ವಿರುದ್ಧ ಇ.ಡಿ. ತನಿಖೆ ಮಾಡಿಸಿದರು. ಆದರೆ, ನಾನು ಯಾವುದೇ ಕಾನೂನು ಉಲ್ಲಂಘಿಸಿ ಹಣ ಸಂಪಾದನೆ ಮಾಡಿಲ್ಲ, ಧರ್ಮಸ್ಥಳ ವಿರುದ್ಧ ಪಿತೂರಿ ಮಾಡಿಲ್ಲ ಎಂದರು.ಹಿಂದೂ ವಿರೋಧಿ ಹೇಗಾಗುತ್ತೆ?:

ಬಿಜೆಪಿ ಒಂದು ರಾಜಕೀಯ ಪಕ್ಷ, ಆ ಪಕ್ಷದ ಪ್ರಧಾನಿ ಆಡಳಿತದಲ್ಲಿದ್ದು, ಅವರನ್ನು, ಅವರ ಆಡಳಿತವನ್ನು ಪ್ರಶ್ನಿಸಿದರೆ ಅದು ಹಿಂದೂ ವಿರೋಧಿ ಹೇಗಾಗುತ್ತೆ? ನಾನು ನಿರಂತರ ವಿರೋಧಪಕ್ಷದವನು. ಅನ್ಯಾಯ ನಡೆಯುತ್ತಿದ್ದರೆ ಸುಮ್ಮನೆ ನೋಡಿಕೊಂಡು ಕೂರುವುದಿಲ್ಲ. ನಾನು ಒಬ್ಬನೇ ಪ್ರಶ್ನೆ ಮಾಡುವುದು ಸರಿಯಲ್ಲ. ನನ್ನ ಜೊತೆ ಎಲ್ಲರೂ ಬರಬೇಕು, ಧರ್ಮಸ್ಥಳ ಸಾವಿರಾರು ಭಕ್ತರು ಬರುವ ಸ್ಥಳ, ಅಲ್ಲಿ ಏನೋ ಅನ್ಯಾಯ ನಡೆಯುತ್ತಿದೆ ಎಂದರೆ ಅದನ್ನು ಪ್ರಶ್ನಿಸುವುದು ತಪ್ಪಾ? ಇದರಲ್ಲೂ ನನ್ನನ್ನು ಧರ್ಮಸ್ಥಳ ವಿರೋಧಿ ಎಂದು ಬಿಂಬಿಸಲಾಗಿದೆ. ಅಲ್ಲಿ ಕಳಂಕ ಇದೆ, ಅದನ್ನು ತೊಡೆದು ಹಾಕಿದರೆ ಧರ್ಮಸ್ಥಳ ಪರಿಶುದ್ಧವಾಗುತ್ತದೆ ಎಂದರು.

ಈ ವಿಷಯದಲ್ಲಿ ನನ್ನ ಹೆಂಡತಿ, ತಾಯಿಯನ್ನು ಎಳೆದುತರುತ್ತಾರೆ. ನಾನು ದೇವಾಲಯಗಳಿಗೆ ಹೋಗುವುದಿಲ್ಲ. ನನ್ನ ಹೆಂಡತಿ ಹೋದರೆ ಬೇಡ ಎನ್ನುವುದಿಲ್ಲ. ಜೊತೆಯಲ್ಲಿ ನಾನೂ ಹೋಗುತ್ತೇನೆ. ನಾನು ಅದು ಹೇಗೆ ಹಿಂದು ವಿರೋಧಿ ಆಗುತ್ತೇನೆ ಎಂದು ಪ್ರಶ್ನಿಸಿದರು.

-ಬಾಕ್ಸ್-

ಸಮೀರನೂ ಗೊತ್ತಿಲ್ಲ, ಮಟ್ಟಣ್ಣವರ್‌ ಕೂಡ ಗೊತ್ತಿಲ್ಲ

ನನಗೆ ಸಮೀರನೂ ಗೊತ್ತಿಲ್ಲ, ಮಟ್ಟಣ್ಣವರ್‌ ಗೊತ್ತಿಲ್ಲ. ನಾನು ಹೋರಾಟಕ್ಕೆ ಹೋಗುತ್ತಿಲ್ಲ. ಆದರೆ ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣದಲ್ಲಿ ಅನ್ಯಾಯವಾಗಿದೆ. ಅದರಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನನ್ನ ಹೋರಾಟ, ಈಗಾಗಲೇ ಚಿನ್ನಯ್ಯನ ಹೇಳಿಕೆ, ಆತ ಸರ್ಕಾರಕ್ಕೆ ನಷ್ಟ ಮಾಡಿರುವುದು ಎಲ್ಲವೂ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿದೆ. ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಜಾರ್ಜ್‌ಶೀಟ್‌ನಲ್ಲಿ ನನ್ನ ಹೆಸರು ಸೇರಿಸಲಾಗಿದೆ. ತೀರ್ಪು ಯಾರ ಕಡೆ ಬರುತ್ತದೆಯೋ ನೋಡೋಣ, ಬಂದಾಗ ಅದು ಧನಾತ್ಮಕವಾಗಿದ್ದರೆ ಒಳ್ಳೆಯದು, ಋಣಾತ್ಮಕವಾಗಿದ್ದರೆ, ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಪ್ರಕಾಶ್ ರಾಜ್ ಹೇಳಿದರು.

ಮಾರಿಕೊಂಡ ಮಾಧ್ಯಮಗಳಂದ್ರೆ ನೀವಲ್ಲ-ಸ್ಪಷ್ಟನೆ:

ಮಾರಿಕೊಂಡ ಮಾಧ್ಯಮಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುವ ಮೂಲಕ ಮಾಧ್ಯಮಗೋಷ್ಠಿಗೆ ಆಹ್ವಾನ ಮಾಡಿದ ರೀತಿಯನ್ನು ನಗರದ ಪತ್ರಕರ್ತರು ಆಕ್ಷೇಪಿಸಿದರು. ಆದರೆ ನಾನು ಮಾರಿಕೊಂಡ ಮಾಧ್ಯಮಗಳಿಗೆ ಹೇಳಿದ್ದು, 200 ಕೋಟಿ ರುಪಾಯಿ ಕೊಟ್ಟು ನಾನು ಚಿನ್ನಯ್ಯನನ್ನು ಎತ್ತಿಕಟ್ಟಿದ್ದೇನೆ ಎಂದು ಸುಳ್ಳು ಆರೋಪ ಮಾಡಿರುವ ಮಾಧ್ಯಮಗಳಿಗೆ ಎಂದು ಪ್ರಕಾಶ್ ರಾಜ್ ಹೇಳಿದರು. ಅದನ್ನು ಪ್ರಸಾರ ಮಾಡಿದ ಮಾಧ್ಯಮಗಳಿಗೆ ಇದು ಅನ್ವಯವಾಗುತ್ತದೆ. ನೀವು ಅದರ ಬಗ್ಗೆ ಯೋಚನೆ ಮಾಡಬೇಡಿ, ಅದು ನಿಮ್ಮ ಬಗ್ಗೆ ಹೇಳಿದ್ದಲ್ಲ. ಯಾರು ಮಾರಿಕೊಂಡಿದ್ದಾರೋ ಅವರಿಗೆ ಗೊತ್ತು. ನಿಮಗೂ ಗೊತ್ತು. ಸುಮ್ಮನೆ ಅವರ ಹೆಸರು ಹೇಳಿ ನಾನೇಕೆ ಅವರ ಜೀವನ ಹಾಳುಮಾಡಲಿ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಷ್ಟು ಸಮಯವಿಲ್ಲ. ಈ ರೀತಿಯಾದರೆ, ನನ್ನ ಇಡೀ ಜೀವನ ಬರೀ ಕೋರ್ಟ್‌ನಲ್ಲೇ ಕಳೆಯಬೇಕಾಗುತ್ತದೆ ಎಂದರು.

ಆರೆಸ್ಸೆಸ್‌ ನೋಂದಣಿ ಕುರಿತು ಹೇಳಿಕೆ:

ದೇಶದಲ್ಲಿ ಪ್ರತಿಯೊಂದು ಸಂಘಟನೆಗಳೂ ಸಂವಿಧಾನದಡಿ ನೋಂದಣಿಯಾಗಬೇಕು ಎಂದಾಗ ಆರೆಸ್ಸೆಸ್‌ ನೋಂದಣಿಯಾಗಬೇಕು ಎಂಬುದರಲ್ಲಿ ತಪ್ಪಿಲ್ಲ. ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯೂ ಸರ್ಕಾರದ ರಿಜಿಸ್ಟ್ರಾರ್ ಬಳಿ ನೋಂದಣಿ ಮಾಡಿಕೊಳ್ಳುತ್ತೇವೆ. ಅದರಲ್ಲಿ ಆರೆಸ್ಸೆಸ್‌ಗೆ ಪ್ರತ್ಯೇಕ ಕಾನೂನು ಇಲ್ಲ. ಆದ್ದರಿಂದ ರಾಜ್ಯ ಸರ್ಕಾರದ ನಡೆ ಸರಿ ಇದೆ ಎಂದು ಪ್ರಕಾಶ್ ರಾಜ್ ಹೇಳಿದರು.

ಬಿಡದಿ ರೈತರ ಹೋರಾಟಕ್ಕೆ ಅಗತ್ಯ ಬಿದ್ದರೆ ಹೋಗುತ್ತೇನೆ. ಅಲ್ಲಿ ಏನು ನಡೆಯುತ್ತಿದೆ ಎಂದು ಪರಿಶೀಲಿಸಿ ನಂತರ ತೆರಳುತ್ತೇನೆ. ನನ್ನನ್ನು ಎಲ್ಲರೂ ಕರೆಯುತ್ತಾರೆ, ನಾನೊಬ್ಬ ಸಮಾಜಸೇವಕ, ದೇವನಹಳ್ಳಿ ಬಳಿ ರೈತರ ಹೋರಾಟಕ್ಕೆ ಹೋಗಿ ಸಿದ್ದರಾಮಯ್ಯರ ಬಳಿ ಕುಳಿತು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಿದೆ ಎಂದರು.

ವೀರೇಂದ್ರ ಹೆಗಡೆ ಭೇಟಿ:

ಧರ್ಮಸ್ಥಳದ ವೀರೇಂದ್ರ ಹೆಗಡೆ ಹಾಗೂ ನಾನು ಭೇಟಿ ಮಾಡಿದ್ದೇವೆ. ಅವರು ನನ್ನ ನಾಟಕಗಳು, ಸಿನಿಮಾ ನೋಡಿ ಪ್ರೋತ್ಸಾಹಿಸಿದ್ದಾರೆ, ಮೆಚ್ಚಿಕೊಂಡಿದ್ದಾರೆ. ನಾನು ಹಿಂದೂ ಧರ್ಮ ವಿರೋಧಿ ಅಲ್ಲ ಎಂದರು.ಚಿನ್ನಯ್ಯನ ಅರ್ಜಿಯಲ್ಲಿ ಉಲ್ಲೇಖಿಸಿರುವ ಎಲ್ಲರ ಮೇಲೂ ತನಿಖೆ ಆಗಲಿ:

ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಆರೋಪಿ ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್‌ ಅರ್ಜಿಯಲ್ಲಿ ಉಲ್ಲೇಖಿಸಿದ ಎಲ್ಲ ವ್ಯಕ್ತಿಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ವ್ಯಾಪ್ತಿಗೆ ಒಳಪಡಿಸಬೇಕು. ಎಸ್‌ಐಟಿ ಮಧ್ಯಂತರ ವರದಿಯನ್ನು ಸಲ್ಲಿಸಬೇಕು ಎಂದು ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಆಗ್ರಹಿಸಿದೆ.ಬುಧವಾರ ಈ ಕುರಿತು ನಗರದ ಖಾಸಗಿ ಹೋಟೆಲ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಮಿತಿಯ ಚಕ್ರವರ್ತಿ ಸೂಲಿಬೆಲೆ, ವಸಂತ ಗಿಳಿಯಾರ್ ಹಾಗೂ ವಿಕಾಸ್ ಪುತ್ತೂರು ಒತ್ತಾಯಿಸಿದರು.ಧರ್ಮಸ್ಥಳ ವಿರುದ್ಧ ನಡೆಯುತ್ತಿದ್ದ ಷಡ್ಯಂತ್ರದ ಕುರಿತು ಮೊದಲೇ ಹೇಳಿದ್ದೆವು. ಅದು ಈಗ ನಿಜವಾಗಿದೆ. ದೂರುದಾರ ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್‌ ಅರ್ಜಿಯಲ್ಲಿ ಹಲವು ಸಂಗತಿಗಳು ಬಹಿರಂಗವಾಗಿವೆ. ನಟ ಪ್ರಕಾಶ್ ರಾಜ್ ಅವರ ಹೆಸರೂ ಅದರಲ್ಲಿ ಉಲ್ಲೇಖವಾಗಿದೆ. ಇಂದು ಸ್ವತಃ ಪ್ರಕಾಶ್ ರಾಜ್ ಅವರೇ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದು ನಿಜವೆಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ತಕ್ಷಣ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.ನಿರ್ದೇಶನ ನೀಡುತ್ತಿದ್ದವರು ಯಾರು?: ಎಸ್‌ಐಟಿ ತನಿಖೆ ವೇಳೆ ಆರೋಪಿ ಚಿನ್ನಯ್ಯ ಮುಖಕ್ಕೆ ಮಾಸ್ಕ್‌ ಧರಿಸಿದ್ದ. ಆ ಮಾಸ್ಕ್‌ ಎಸ್‌ಐಟಿ ಹಾಕಿರಲಿಲ್ಲ. ಹೊರಗಿನಿಂದ ನಿರ್ದೇಶನ ನೀಡುತ್ತಿದ್ದವರು, ತಾನು ಶವಗಳನ್ನು ಹೂತಿದ್ದೇನೆ ಎಂದು ಹೇಳಿದ ಸ್ಥಳಗಳನ್ನು ತೋರಿಸುವಾಗಲೂ ಚಿನ್ನಯ್ಯ ಕಿವಿಯಲ್ಲಿ ಇಯರ್‌ಫೋನ್ ಧರಿಸಿದ್ದ. ಆತನಿಗೆ ಇಯರ್ ಫೋನ್‌ ಮೂಲಕ ನಿರ್ದೇಶನ ನೀಡುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ. ನಿರ್ದೇಶನ ನೀಡುತ್ತಿದ್ದವರು ಯಾರು ಎಂಬುದನ್ನು ಪತ್ತೆ ಮಾಡಬೇಕೆಂದು ಒತ್ತಾಯಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಭಾರ ಕುಲಪತಿ ಪ್ರೊ.ಶಿವಚಿತ್ತಪ್ಪರನ್ನು ವಜಾಗೊಳಿಸಿ: ಗೌರ್ನರ್ ಗೆ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮನವಿ
ಟ್ಯಾಂಕರ್ ಡಿಕ್ಕಿ ಹೊಡೆದು ವೃದ್ಧೆ ಸ್ಥಳದಲ್ಲೇ ಸಾವು