ಗೋಕಾಕ್ ಚಳವಳಿ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುಶೀಲಾ ಮಂಜುನಾಥ್
1980ರ ದಶಕದಲ್ಲಿ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಸ್ಥಾನ ಹಾಗೂ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ನಡೆದ ಐತಿಹಾಸಿಕ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ ಡಾ.ರಾಜ್ಕುಮಾರ್ ರವರು ಚಳವಳಿಗೆ ಹೊಸ ಶಕ್ತಿ ತುಂಬಿದರು ಎಂದು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುಶೀಲಾ ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತಾಲೂಕಿನ ಪೆರೇಸಂದ್ರ ಗ್ರಾಮದ ಪ್ರಕೃತಿ ಪದವಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಗೋಕಾಕ್ ಚಳವಳಿ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡುತ್ತಾ ಮಾತನಾಡಿದರು.1956ರಲ್ಲಿ ಭಾಷಾವಾರು ರಾಜ್ಯಗಳ ವಿಂಗಡಣೆ ಆಧಾರದಲ್ಲಿ ಮೈಸೂರು ರಾಜ್ಯ ಉದಯ ಆದರೂ ಕನ್ನಡಕ್ಕೆ ಅಗ್ರ ಸ್ಥಾನ ಮಾನ ಇರಲಿಲ್ಲ. 1964ರಲ್ಲಿ ಇಂದಿರಾ ಗಾಂಧಿಯವರು ತ್ರಿಭಾಷಾಸೂತ್ರವನ್ನು ಜಾರಿಗೊಳಿಸಿದರು, ಈ ಸೂತ್ರದಲ್ಲಿ ಮೊದಲ ಭಾಷೆ ಇಂಗ್ಲಿಷ್, ಎರಡನೇ ಭಾಷೆ ಹಿಂದಿ, ಮೂರನೇ ಭಾಷೆ ಸ್ಥಳೀಯ ಭಾಷೆ ಎಂದು. ಆದರೆ ಕರ್ನಾಟಕದಲ್ಲಿ ಸಂಸ್ಕೃತವೇ ಪ್ರಥಮ ಭಾಷೆ ಆಯಿತು. ಇಂಗ್ಲೀಷ್ ಎರಡನೇ ಸ್ಥಾನ,ಮೂರನೇ ಭಾಷೆ ಹಿಂದಿ ಆಯಿತು. ಕರ್ನಾಟಕದಲ್ಲಿ ಕನ್ನಡ ಇತರೆ ಭಾಷೆಗಳ ಗುಂಪಿಗೆ ಸೇರಿ ಹೋಯಿತು.
1981ರ ಜನವರಿ 27ರಲ್ಲಿ ವಿ. ಕೃ ಗೋಕಾಕ್ ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿಯೇ ಗೋಕಾಕ್ ವರದಿ. ಈ ಶಿಫಾರಸ್ಸಿನಲ್ಲಿ ಕರ್ನಾಟಕದಲ್ಲಿ ಪ್ರಥಮ ಭಾಷೆ ಕನ್ನಡವಾಗಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ, ಉದ್ಯೋಗದಲ್ಲಿ ಕನ್ನಡಕ್ಕೆ ಮೊದಲ ಪ್ರಾಧಾನ್ಯತೆ ಇರಬೇಕು. ವಿದ್ಯಾರ್ಥಿಗಳಿಗೆ 125 ಅಂಕ ನಿಗದಿಪಡಿಸಬೇಕು ಎಂಬುದು ಪ್ರಮುಖ ಅಂಶವಾಗಿತ್ತು. ಭಾಷಾ ಅಲ್ಪಸಂಖ್ಯಾತರ ವಿರೋಧದಿಂದಾಗಿ ಗೋಕಾಕ್ ಶಿಫಾರಸ್ಸಿನ ವರದಿ ಜಾರಿಗೆ ವಿಳಂಬವಾಯಿತು. ಮತ್ತೆ ಕನ್ನಡಪ್ರೇಮಿಗಳ ಆಕ್ರೋಷ ಭುಗಿಲೆದ್ದು ಗೋಕಾಕ್ ಚಳವಳಿ ಮತ್ತಷ್ಟು ಬಿರುಸಾಯಿತು. ಕನ್ನಡ ಸಾಹಿತಿಗಳಾದ ವಿ. ಕೃ ಗೋಕಾಕ್, ಶಂಬಾ ಜೋಶಿ, ಕುವೆಂಪು, ಶಿವರಾಮ ಕಾರಂತರು, ಚಂಪಾ, ಪಿ .ಲಂಕೇಶ್, ನಟರಾದ ಶಿವರಾಂ, ಜಿ. ನಾರಾಯಣ ಮುಂತಾದವರು ಚಳವಳಿಯಲ್ಲಿ ಧುಮುಕಿದರು, ಆದರೆ ಇದು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಾಣಲಿಲ್ಲ,
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀನಿವಾಸ್ ಮಾತನಾಡಿ, ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ಸಿಗುವಂತಾಗಬೇಕು. ಕನ್ನಡಿಗರ ವಿಶಾಲ ಮನಸ್ಥಿತಿಯು ಕನ್ನಡಿಗರನ್ನು ದುರ್ಬಲ ಸ್ಥಿತಿಗೆ ತಳ್ಳುವಂತಾಗಬಾರದು ಎಂದರು.
ಸಿಕೆಬಿ-1 ತಾಲೂಕಿನ ಪೆರೇಸಂದ್ರ ಗ್ರಾಮದ ಪ್ರಕೃತಿ ಕಾಲೇಜಿನಲ್ಲಿ ನಡೆದ ಗೋಕಾಕ್ ಚಳವಳಿ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಸುಶೀಲಾ ಮಂಜುನಾಥ್ ಮಾತನಾಡಿದರು.