- ಸಚಿವ, ಶಾಸಕರ ಲೂಟಿ ಬಗ್ಗೆ ದಾಖಲೆ ನೀಡುತ್ತೇನೆ, ಸುಳ್ಳಾಡಿದರೆ ಕಾನೂನು ಹೋರಾಟ: ಬಿಜೆಪಿ ಎಚ್.ಸಿ.ಜಯಮ್ಮ ಎಚ್ಚರಿಕೆ
- ಸ್ಮಾರ್ಟ್ ಸಿಟಿ ತನಿಖಾ ವರದಿ ಸಚಿವರು ಬಹಿರಂಗಪಡಿಸಲಿ । ಹಾಳುಗೆಡವಿದ್ದ ಹದಡಿ ಕೆರೆ ಏರಿ ಸರಿಪಡಿಸಿದ್ದು ನಾವಲ್ವೆ?- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಕುಂದುವಾಡ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಅನುದಾನ ಲೂಟಿ ಮಾಡಿದ್ದು ಯಾರು ಎಂಬ ಬಗ್ಗೆ ದಾಖಲೆ ಸಮೇತ ಆರೋಪ ಮಾಡಿ. ಇಲ್ಲದಿದ್ದರೆ ಲೂಟಿ ಮಾಡಿದ್ದು ನಿಮ್ಮದೇ ಸಚಿವರು, ಶಾಸಕರು ಎಂಬುದಕ್ಕೆ ನಾನು ದಾಖಲೆ ನೀಡುತ್ತೇನೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಮುಖಂಡರಾದ ಎಚ್.ಸಿ.ಜಯಮ್ಮ ಸವಾಲು ಎಸೆದಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ, ಮಾಜಿ ಮೇಯರ್ ಅನಿತಾಬಾಯಿ ಮಾಲತೇಶ್ ಆರೋಪಕ್ಕೆ ತಿರುಗೇಟು ನೀಡಿ ಮಾತನಾಡಿದರು. ಕುಂದುವಾಡ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ₹16 ಕೋಟಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿ, ನಿನ್ನೆ ಜಿಲೇಬಿ ಮಾಡಿ, ಹಂಚಿ ಪ್ರತಿಭಟಿಸಿದ್ದಾರೆ. ಈ ವೇಳೆ ಅನಿತಾಬಾಯಿ ದಾಖಲೆ ಇಲ್ಲದೇ ಆರೋಪ ಮಾಡಿದ್ದು, ಇದನ್ನು ನಾವು ಸಹಿಸುವುದಿಲ್ಲ. ಇದೇ ರೀತಿ ಸುಳ್ಳು ಆರೋಪ ಮಾಡಿದರೆ ಕಾನೂನು ಹೋರಾಟ ನಡೆಸಬೇಕಾದೀತು ಎಂದೂ ಎಚ್ಚರಿಸಿದರು.ಇಡೀ ಕುಂದುವಾಡ ಕೆರೆ ಸಮಗ್ರವಾಗಿ ಅಭಿವೃದ್ಧಿ ಹೊಂದಿರುವುದು ನಮ್ಮ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಂದ. ನಿಮ್ಮ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಿಂದಲ್ಲ. ಈ ಹಿಂದೆ ಎಸ್.ಎಸ್. ಮಲ್ಲಿಕಾರ್ಜುನ ಸಚಿವರಿದ್ದಾಗ ಕೆರೆ ಅಭಿವೃದ್ಧಿಗಾಗಿ ₹3.5 ಕೋಟಿ ಅನುದಾನ ಬಳಸಿದ ಬಗ್ಗೆ ದಾಖಲೆ ಇದೆ. ಅದರಲ್ಲಿ ಕೇವಲ ಹೂಳು ಎತ್ತಿದ್ದರೆ ಹೊರತು, ನಯಾ ಪೈಸೆ ಕಾಮಗಾರಿ ಕೈಗೊಳ್ಳಲಿಲ್ಲ. ರಾಷ್ಟ್ರೀಯ ಕೂಲಿಗಾಗಿ ಕಾಳು ಯೋಜನೆಯಡಿ ಸ್ವತಃ ರೈತರೇ ಸ್ವಯಂಪ್ರೇರಣೆಯಿಂದ ಟ್ರ್ಯಾಕ್ಟರ್ ನಲ್ಲಿ ಹೂಳು ಸಾಗಿಸಿದ್ದರು. ರೈತರು ಹೂಳೆತ್ತಿದರೆಂದರೆ ₹3.5 ಕೋಟಿ ಅನುದಾನ ಎಲ್ಲಿ ಹೋಯ್ತು? ಅನಿತಾಬಾಯಿ ಇದಕ್ಕೆ ಉತ್ತರಿಸಲಿ ಎಂದು ತಾಕೀತು ಮಾಡಿದರು.
ಸ್ಮಾರ್ಟ್ ಸಿಡಿಯಡಿ 16 ಕೋಟಿ ಅನುದಾನದಲ್ಲಿ ಪಾರದರ್ಶಕವಾಗಿ ಟೆಂಡರ್ ಕರೆದು, ಕುಂದುವಾಡ ಕೆರೆ ಅಭಿವೃದ್ಧಿಪಡಿಸಿದ್ದೇವೆ. ನಿಮ್ಮ ಸಚಿವರಂತೆ ಟೆಂಡರ್ ಕರೆಯದೇ ಹಣದ ಗಂಟನ್ನು ಮನೆಗೆ ಒಯ್ದಿಲ್ಲ. ನಿಮ್ಮ ಸಚಿವರ ಕಾಲದಲ್ಲಿ ಹದಡಿ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡಲಾಗಿದೆ. ಮಾತೆತ್ತಿದರೆ ಜರ್ಮನ್, ಜಪಾನ್ ತಂತ್ರಜ್ಞಾನ ಎನ್ನುವ ನಿಮ್ಮ ಸಚಿವರು, ಹದಡಿ ಕೆರೆ ಏರಿಯನ್ನು ಯಾವ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ್ದರು? ಯಾವ ಕಾರಣಕ್ಕಾಗಿ ಕೆರೆ ಏರಿ ಕುಸಿದಿತ್ತು? ನಿಮ್ಮ ಸಚಿವರು ಕುಸಿಯುವಂತೆ ಮಾಡಿದ್ದ ಕೆರೆ ಏರಿಯನ್ನು ₹2 ಕೋಟಿ ಅನುದಾನ ಬಳಸಿ, ಸರಿ ಮಾಡಿದ್ದೇನೆ. ಇದೇ ನಿಮ್ಮ ಸಚಿವರು, ನಮ್ಮ ನಾಯಕರಿಗೂ ಇರುವ ವ್ಯತ್ಯಾಸ ಎಂದು ಲೇವಡಿ ಮಾಡಿದರು.ಮಲ್ಲಿಕಾರ್ಜುನ್ ಸಚಿವರಾಗುತ್ತಿದ್ದಂತೆ ಮಾಡಿದ ಮೊದಲ ಕೆಲಸವೇ ಸ್ಮಾರ್ಟ್ ಸಿಟಿ ಯೋಜನೆಗಳ ತನಿಖೆ ಮಾಡಿಸಿದ್ದು. ಈಗಾಗಲೇ ತನಿಖೆ ವರದಿಯೂ ಸಚಿವರ ಕೈ ಸೇರಿದೆಯಲ್ಲ. ಆ ತನಿಖಾ ವರದಿಯಲ್ಲಿ ಏನಿದೆ ಎಂದು ಹೋಗಿ ಕೇಳಿ. ಬಿಜೆಪಿ ಅವಧಿ ಕಾಮಗಾರಿಗಳು ಸಮರ್ಪಕ ಜಾರಿ ಬಗ್ಗೆ ತನಿಖೆ ಮಾಡಿದವರೇ ವರದಿ ನೀಡಿದ್ದಾರೆ. ಇದು ನಿಮ್ಮ ಸಚಿವರಿಗಾಗಲೀ, ನಿಮಗಾಗಲೀ ಗೊತ್ತಿಲ್ಲವೆ ಎಂದು ಪ್ರಶ್ನಿಸಿದರು.
ತನಿಖಾ ವರದಿಯಲ್ಲಿ ಭ್ರಷ್ಟಾಚಾರ ಆಗಿಲ್ಲವೆಂಬ ವರದಿ ಬಂದಿದೆ. ಇಷ್ಟಾದರೂ ನಿಮ್ಮ ಸಚಿವರಿಗೆ ತೃಪ್ತಿ ಇಲ್ಲ. ನಿಮ್ಮದೇ ಸರ್ಕಾರ ಇದ್ದು, ಸಿಬಿಐ, ಸಿಐಡಿ, ಲೋಕಾಯುಕ್ತ ಯಾವುದೇ ತನಿಖಾ ಸಂಸ್ಥೆಗೆ ತನಿಖೆಗೆ ಕೊಡಿ ಎಂದು ಎಚ್.ಸಿ.ಜಯಮ್ಮ ಕಾಂಗ್ರೆಸ್‌ಗೆ ತಾಕೀತು ಮಾಡಿದರು.ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಾ ವಾಲಿ, ಭಾಗ್ಯ ಪಿಸಾಳೆ, ಶಶಿಕಲಾ, ಶ್ಯಾಮಲಾ, ಚೇತನಾಬಾಯಿ ಶಿವಕುಮಾರ, ವೀಣಾ, ಪಕ್ಷದ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಇತರರು ಇದ್ದರು.
- - - ಅನಿತಾಬಾಯಿ, ಪತಿ ಬೇನಾಮಿ ಸೈಟ್‌ಗಳು!ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಮಾಜಿ ಮೇಯರ್ ಅನಿತಾಬಾಯಿ ಪತಿ ದೂಡಾ ಅಧ್ಯಕ್ಷರಾಗಿದ್ದಾಗ ಎಷ್ಟು ಬೇನಾಮಿ ಸೈಟ್‌ಗಳನ್ನು ಮಾಡಿದ್ದೀರಿ, ಎಲ್ಲೆಲ್ಲಿ ನಿವೇಶನಗಳ ಹೊಂದಿದ್ದೀರಿ ಎಂಬುದನ್ನು ಬಹಿರಂಗಪಡಿಸಲಿ. ನಿಮ್ಮ ಪತಿ ದೂಡಾ ಅಧ್ಯಕ್ಷ ಆಗಿದ್ದಾಗ ಮಾಡಿಕೊಂಡ ಬೇನಾಮಿ ಸೈಟ್‌ಗಳ ದೊಡ್ಡ ಪಟ್ಟಿಯೇ ನಮ್ಮಲ್ಲಿ ಇದೆ- ಎಚ್.ಸಿ.ಜಯಮ್ಮ, ಮುಖಂಡರು, ಬಿಜೆಪಿ ಮಹಿಳಾ ಮೋರ್ಚಾ
- - - -2ಕೆಡಿವಿಜಿ2:ದಾವಣಗೆರೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರಾದ ಎಚ್.ಸಿ.ಜಯಮ್ಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.