ಕೊಪ್ಪಳ: ರಾಯಣ್ಣ ಬ್ರಿಗೇಡ್ ಹಿಂದುಳಿದವರಿಗೆ ಆಶ್ರಯವಾಗುತ್ತಿತ್ತು. ಅದರ ಜನಪ್ರಿಯತೆ ಕಂಡು ಅದನ್ನು ತಡೆ ಹಿಡಿಯುವ ಪ್ರಯತ್ನ ಆಯಿತು. ಅದನ್ನು ನಿಲ್ಲಿಸಿದ್ದೇ ನಮ್ಮ ದೊಡ್ಡ ತಪ್ಪಾಗಿದೆ ಎಂದು ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ ವಿಷಾಧಿಸಿದರು.
ಅ. 20ರಂದು ಬಾಗಲಕೋಟೆಯಲ್ಲಿ ಹಮ್ಮಿಕೊಂಡಿರುವ ಸಮಾವೇಶದ ಕುರಿತು ಜಾಗೃತಿ ಮೂಡಿಸಲು ಕೊಪ್ಪಳ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಬಾಗಲಕೋಟೆಯಲ್ಲಿ ನಡೆಯುವ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದ ಅವರು, ನಾನು, ನಮ್ಮ ತಂದೆಯವರು ಅಧಿಕಾರ ಇದ್ದಾಗಲೆಲ್ಲ ಸಮಾಜಕ್ಕಾಗಿ ಶ್ರಮಿಸಿದ್ದೇವೆ. ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇವೆ. ನಾವು ಈಗ ಸಂಕಷ್ಟದಲ್ಲಿದ್ದೇವೆ. ನಿಮ್ಮ ಬೆಂಬಲ ನಮಗೆ ಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ರಾಯಣ್ಣ ಬ್ರಿಗೇಡ್ ಕಟ್ಟಿದಾಗ ದೊಡ್ಡ ಬೆಂಬಲವೇ ನಮಗೆ ಸಿಕ್ಕಿತ್ತು. ಈಶ್ವರಪ್ಪ ಅವರ ಸಂಘಟನೆಯನ್ನು ಸಮಾಜದ ಎಲ್ಲರೂ ಬೆಂಬಲಿಸಿದ್ದರು. ದಲಿತ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಿದ್ದರು. ಇದನ್ನು ಸಹಿಸದೇ ಬಿಜೆಪಿಯವರು ಅದನ್ನು ನಿಲ್ಲಿಸುವಂತೆ ಮಾಡಿದರು. ಒತ್ತಡಕ್ಕೆ ಒಳಗಾಗಿ ಅದನ್ನು ನಿಲ್ಲಿಸುವಂತೆ ಆಯಿತು ಎಂದರು.ಈಗ ಮತ್ತೊಮ್ಮೆ ಸಂಘಟನೆ ನಡೆಯುತ್ತಿದೆ. ಈ ಬಾರಿ ಏನು ಹೆಸರು ನೀಡಬೇಕು ಎನ್ನುವ ಕುರಿತು ಅಂತಿಮವಾಗಿ ತೀರ್ಮಾನ ಮಾಡಿಲ್ಲ. ಬಾಗಲಕೋಟೆಯಲ್ಲಿ ಅ. 20ರಂದು ನಡೆಯುವ ಸಮಾವೇಶದಲ್ಲಿ ಈ ಕುರಿತು ಅಂತಿಮವಾಗಿ ತೀರ್ಮಾನ ಮಾಡಲಾಗುತ್ತದೆ ಎಂದರು.
ಕಾಗಿನೆಲೆಗೆ ಈಶ್ವರಪ್ಪ ಅವರು ತಮ್ಮ ಅಧಿಕಾರ ಇದ್ದಾಗ ₹47 ಕೋಟಿ ಬಿಡುಗಡೆ ಮಾಡಿದ್ದರು. ನಮ್ಮ ತಂದೆಯವರು ಎಂಎಲ್‌ಎ ಟಿಕೆಟ್ ಬಿಟ್ಟುಕೊಟ್ಟಾಗ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿದ್ದರು. ಆದರೆ, ಅದಾದ ಮೇಲೆ ನಮಗೆ ಆದ ಅನ್ಯಾಯಕ್ಕೆ ಯಾರೂ ಸ್ಪಂದಿಸಲಿಲ್ಲ. ಹೀಗಾಗಿ, ಮತ್ತೆ ಸಂಘಟನೆ ಮಾಡುವ ಅಗತ್ಯವಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹ ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಬಗ್ಗೆಯೂ ನಮಗೆ ಅಪಾರ ಗೌರವವಿದೆ ಎಂದರು.
ಮುಖಂಡ ಹನುಮಂತಪ್ಪ ಹನುಮಾಪುರ ಮಾತನಾಡಿ, ಕೆ.ಎಸ್. ಈಶ್ವರಪ್ಪ ಅವರು ಬೆಳೆಯುತ್ತಾರೆ ಎಂದು ಅವರನ್ನ ತುಳಿದರು. ರಾಯಣ್ಣ ಬ್ರಿಗೇಡ್ ಸಂಘಟನೆಯನ್ನು ನಿಲ್ಲಿಸುವಂತೆ ಮಾಡಿದರು. ಸಿದ್ದರಾಮಯ್ಯ ಅವರಿಗೆ ಬಂದಿರುವ ಕಂಟಕದಿಂದ ಅವರು ಪಾರಾಗುತ್ತಾರೆ ಮತ್ತು ಇನ್ನು ಹತ್ತು ವರ್ಷಗಳ ಕಾಲ ಅವರು ಜನರ ಜತೆಗೆ ಇರುತ್ತಾರೆ ಎಂದರು. ಕಾಂತೇಶ ಅವರು 25 ಜಿಲ್ಲೆಗಳನ್ನು ಸುತ್ತಿ, ಸಂಘಟನೆ ಮಾಡಬೇಕು ಎಂದರು.ಮುಖಂಡರಾದ ಕುಬೇರ ಮಜ್ಜಿಗಿ, ರವೀಂದ್ರಗೌಡ ಬಿಸರಳ್ಳಿ, ಹನುಮಂತಪ್ಪ ಕೌದಿ, ದ್ಯಾಮಣ್ಣ ಕರಿಗಾರ ಇದ್ದರು.