- ವಿಧಾನ ಮಂಡಲ ಅನುಸೂಚಿತ ಜಾತಿ- ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಸೂಚನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಅನುಸೂಚಿತ ಜಾತಿ ಮತ್ತು ಪಂಗಡಗಳ ಜನಾಂಗದವರ ಅಭಿವೃದ್ಧಿಗಾಗಿ 2013ರ ಕಾಯ್ದೆ ಜಾರಿಗೊಳಿಸುವ ಮೂಲಕ ಅನುದಾನವನ್ನು ಪ್ರತ್ಯೇಕವಾಗಿ ಮೀಸಲಿರಿಸಲಾಗುತ್ತಿದೆ. ಮೀಸಲಿರಿಸಿದ ಅನುದಾನವನ್ನು ಈ ಜನಾಂಗದ ಅಭಿವೃದ್ದಿಗಾಗಿಯೇ ವೆಚ್ಚ ಮಾಡಬೇಕೆಂದು ಕಾಯಿದೆಯಲ್ಲಿದೆ. ಪರಿಶಿಷ್ಟರ ಅನುದಾನದ ಮೂಲಕ ಎಸ್‌ಸಿ, ಎಸ್‌ಟಿ ಜನರ ಜೀವನಮಟ್ಟ ಸುಧಾರಣೆ, ಶೈಕ್ಷಣಿಕ ಅಭಿವೃದ್ಧಿ, ಸಾಮಾಜಿಕ ಪಿಡುಗಗಳ ನಿವಾರಣೆ ಜೊತೆಗೆ ಅವರಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕೆಂದು ಸೂಚನೆ ನೀಡಿದರು.
ಟೆಂಡರ್‌ನಲ್ಲಿ ಪ್ಯಾಕೇಜ್ ಸಲ್ಲದು:ಎಲ್ಲ ಅನುಷ್ಠಾನ ಇಲಾಖೆಯಲ್ಲಿ ಕಾಮಗಾರಿ, ಸೇವಾ ಟೆಂಡರ್‌ಗಳನ್ನು ಕರೆಯುವಾಗ ₹1 ಕೋಟಿ ಒಳಗಿನ ಮೊತ್ತದ ಕಾಮಗಾರಿಗೆ ಮೀಸಲಾತಿಯನ್ನು ನೀಡುವುದು ಕಡ್ಡಾಯವಾಗಿದೆ. ಆದರೆ, ಕೆಲವು ಇಲಾಖೆಗಳಲ್ಲಿ ಮೀಸಲಾತಿ ನೀಡುವ ಬದಲಾಗಿ ಪ್ಯಾಕೇಜ್ ಮೂಲಕ ಹಲವು ಕಾಮಗಾರಿಗಳನ್ನು ಒಂದರಲ್ಲಿ ಸೇರಿಸಿ ಕರೆಯಲಾಗುತ್ತಿದೆ. ಆದರೆ, ಕಾಯ್ದೆ ಅನ್ವಯ ಇದು ತಪ್ಪಾಗಿದೆ. ಅಂತಹ ಎಂಜಿನಿಯರ್‌ಗಳ ಮೇಲೆ ಮೊಕದ್ದೊಮೆ ದಾಖಲಿಸಲಾಗುತ್ತದೆ ಎಂದರು.
ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ಜಾಗವು ಇರಬೇಕು. ಇಲ್ಲಿ ಎಲ್ಲ ಜಾತಿ, ಜನಾಂಗದವರಿಗೂ ಅವಕಾಶ ಇದ್ದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶವಸಂಸ್ಕಾರಕ್ಕೆ ಜಾಗ ನೀಡದಿದ್ದಲ್ಲಿ ಸರ್ಕಾರಿ ಜಾಗ ಅಥವಾ ಖಾಸಗಿ ಜಾಗವನ್ನು ಖರೀದಿಸಿ ಸ್ಮಶಾನಕ್ಕೆ ಮೀಸಲಿರಿಸಲು ಸೂಚನೆ ನೀಡಿದರು.
ಸರ್ಕಾರಿ ಶಾಲೆಗಳ ಶಿಕ್ಷಣಕ್ಕೆ ಒತ್ತು:
ಯಾವುದೇ ಖಾಸಗಿ ಶಾಲೆ, ಕಾಲೇಜು ಆಗಿರಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಪ್ರವೇಶದ ವೇಳೆ ಶುಲ್ಕ ಕಟ್ಟಿಲ್ಲ ಎಂದರು. ಆಗ ಶಾಲಾ, ಕಾಲೇಜಿನಿಂದ ಹೊರಗಿಡಬಾರದು ಮತ್ತು ಪ್ರವೇಶ ನಿರಾಕರಿಸುವಂತಿಲ್ಲ. ಸರ್ಕಾರದಿಂದ ಶುಲ್ಕ ಮರುಪಾವತಿ ಮಾಡಲಾಗುತ್ತದೆ. ಇಂತಹ ಪ್ರಕರಣಗಳು ಕಂಡುಬಂದಾಗ ಮುಂದಿನ ದಿನಗಳಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನದ ಮೂಲಕ ಪ್ರಕರಣಗಳನ್ನು ನೇರವಾಗಿ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಶಾಲಾ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಇದರ ಬಗ್ಗೆ ಗಮನಿಸಲು ಸೂಚನೆ ನೀಡಿದರು.
ಯಾವುದೇ ವಸತಿ ಶಾಲೆಯಾಗಲಿ, ಹಾಸ್ಟೆಲ್ ಆಗಲಿ ಮೆಟ್ರಿಕ್ ಪೂರ್ವ ಹಾಗೂ ನಂತರದ ಹಾಸ್ಟೆಲ್‌ಗಳಲ್ಲಿ ಮಹಿಳಾ ವಾರ್ಡನ್ ಕಡ್ಡಾಯವಾಗಿ ಇರಬೇಕು. ಬಾಲಕಿಯರೇ ಇರುವ ಯಾವ ವಿದ್ಯಾರ್ಥಿ ನಿಲಯದಲ್ಲಿ ಮಹಿಳಾ ವಾರ್ಡನ್ ಬದಲಾಗಿ ಪುರುಷ ವಾರ್ಡನ್ ಇದ್ದಲ್ಲಿ ಅಂತಹ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡಲಾಗುವ ಆಹಾರದ ಗುಣಮಟ್ಟ ಕಡಿಮೆ ಇರುತ್ತದೆ ಎಂಬ ದೂರುಗಳಿವೆ. ಅಂಗನವಾಡಿಗೆ ಬರುವ ಮಕ್ಕಳೇ ಬಡವರ ಮಕ್ಕಳಾಗಿದ್ದು, ಇವರ ಪೌಷ್ಟಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದರು. ಆಗ ಸಮಿತಿ ಸದಸ್ಯರಾದ ಹೇಮಲತಾ ನಾಯಕ್ ಮಾತನಾಡಿ, ಮಕ್ಕಳಿಗೆ ನೀಡಲಾಗುವ ಮೊಟ್ಟೆ ಹಾಗೂ ಇನ್ನಿತರೆ ಆಹಾರದಲ್ಲಿ ಗುಣಮಟ್ಟದ ಆಹಾರ ಪದಾರ್ಥ ಬಳಕೆ ಮಾಡದ ಬಗ್ಗೆ ಸಾಕಷ್ಟು ದೂರುಗಳಿದ್ದು, ಪರಿಶೀಲನೆ ಮಾಡಲು ತಿಳಿಸಿದರು.
ಪರಿಶಿಷ್ಟರ ಮೇಲಾಗುವ ದೌರ್ಜನ್ಯವನ್ನು ತಡೆಗಟ್ಟಲು ದಾಖಲಾಗುವ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಯಾಗುವ ಪ್ರಮಾಣ ಬಹಳ ಕಡಿಮೆ ಇದೆ. ಅಭಿಯೋಜನೆಗೆ ಬೇಕಾದ ಸಾಕ್ಷ್ಯಾಧಾರಗಳ ಬಗ್ಗೆ ಪರಿಶೀಲನೆ ನಡೆಸಿ, ದೌರ್ಜನ್ಯ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.
ಪರಿಶಿಷ್ಟರ ಯೋಜನೆಗಳ ಪರಿಶೀಲನೆಗೆ ಸೂಚನೆ:ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಜನರ ಅಭಿವೃದ್ಧಿಗೆ ಇರುವ ಎಲ್ಲ ಇಲಾಖೆಗಳ ಯೋಜನೆಗಳ ಕುರಿತು ಅವಲೋಕನ ಮಾಡಬೇಕು. ಆದರೆ, ನೋಡಬೇಕಾದ ಇಲಾಖೆ ಅಧಿಕಾರಿಗಳು ಹೆಚ್ಚು ಗಮನಿಸಿದಂತಿಲ್ಲ. ಎಲ್ಲ ಇಲಾಖೆಗಳಲ್ಲಿ ಅನುಷ್ಠಾನ ಮಾಡುವ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳ ಪರಿಶೀಲನೆ ನಡೆಸಿ ಅವರ ಅಭಿವೃದ್ಧಿ ಯಾವ ರೀತಿ ಆಗುತ್ತಿದೆ, ಈ ಜನರ ಕಲ್ಯಾಣಕ್ಕಾಗಿ ಯಾವ ತರಹದಲ್ಲಿ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ವರದಿಯನ್ನು ದತ್ತಾಂಶದ ಸಮೇತ ಸಂಗ್ರಹಿಸಬೇಕಾದ ಹೊಣೆಗಾರಿಕೆ ಇಲಾಖೆಗಳ ಮೇಲಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದರು.
ಸಭೆಯಲ್ಲಿ ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಶಾಸಕ ವೀರೇಂದ್ರ ಪಪ್ಪಿ, ಕೃಷ್ಣ ನಾಯ್ಕ, ರಾಜೇಂದ್ರ ರಾಜಣ್ಣ, ದುರ್ಯೋಧನ ಐಹೊಳೆ, ವಿಧಾನ ಮಂಡಲದ ಸಮಿತಿ ಅಧೀನ ಕಾರ್ಯದರ್ಶಿ ಪಿ.ಸೀನ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.- - -
ಬಾಕ್ಸ್ * ದೇವದಾಸಿ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಸೂಚನೆ ದೇವದಾಸಿ ಪದ್ಧತಿ ಅನಿಷ್ಠ ಸಾಮಾಜಿಕ ಪಿಡುಗಾಗಿದೆ. ಇದು ಸಮಾಜದಿಂದ ನಿರ್ಮೂಲನೆ ಆಗಬೇಕಾಗಿದೆ. ಇಂತಹ ಪದ್ಧತಿ ಎಂದಿಗೂ ಆಚರಣೆಯಲ್ಲಿ ಇರಬಾರದು. ಕೆಲ ತಳಸಮುದಾಯದಲ್ಲಿ ಇಂದಿಗೂ ಮುತ್ತುಕಟ್ಟುವ ಪದ್ಧತಿ ಜಾರಿಯಲ್ಲಿದೆ ಎಂಬ ಮಾಹಿತಿ ಇದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಈ ಬಗ್ಗೆ ಮಹಿಳೆಯರು, ಸಾರ್ವಜನಿಕರಲ್ಲಿ ಕಟ್ಟುನಿಟ್ಟಿನ ಜಾಗೃತಿ ಮೂಡಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಈ ಅನಿಷ್ಠ ಪದ್ಧತಿ ಸಮಾಜದಿಂದಲೇ ನಿರ್ಮೂಲನೆಯಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರು ಹೇಳಿದರು. ಆಗ ಈ ಪದ್ಧತಿ ನಿರ್ಮೂಲನೆಗೆ ಜಿಲ್ಲಾಡಳಿತದಿಂದ ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಭರವಸೆ ನೀಡಿದರು.- - - -18ಕೆಡಿವಿಜಿ36ಃ:
ದಾವಣಗೆರೆಯಲ್ಲಿ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.