ಹೇಟ್ ಸ್ಪೀಚ್ ಮಾಡಿಲ್ಲ, ಅದು ಸ್ಪೀಚ್ ಆಫ್ ಲವ್: ಸೂಲಿಬೆಲೆ

KannadaprabhaNewsNetwork | Published : Mar 12, 2025 12:48 AM

ಸಾರಾಂಶ

ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆ ಕಾರ್ಯಕ್ರಮದಲ್ಲಿ ತಮ್ಮ ಹೇಳಿಕೆಯ ಕುರಿತು ಸ್ಪಷ್ಟೀಕರಣ ನೀಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು, ನಾನು ಹೇಳಿದ್ದು ಸಂಘರ್ಷದ ಮಾತು ಅಲ್ಲವೇ ಅಲ್ಲ. ನಾನು ಮಾಡಿದ್ದು ಹೇಟ್ ಸ್ಪೀಚ್ ಅಲ್ಲ, ಇದು ಸ್ಪೀಚ್ ಆಫ್ ಲವ್ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಲವ್ ಜಿಹಾದ್ ಆಗ್ತಿದೆ ಅಂತ ಹೇಳಿದರೆ, ಯುವತಿ ಪ್ರೀತಿಯಿಂದ ಹೋಗೋದು, ಸಂಘರ್ಷ ಮಾಡಬಾರದು ಎಂದು ಇಷ್ಟೂ ದಿನ ಹೇಳುತ್ತಿದ್ದರು. ಈಗ ನಮ್ಮ ಹುಡುಗರೂ ಅದೇ ಥರ ಬೇರೆ ಯುವತಿಯರನ್ನು ಪ್ರೀತಿ ಮಾಡಿದರೆ ಸಂಘರ್ಷ ಯಾಕೆ ಆಗುತ್ತೆ ಎಂದು ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದಾರೆ.

ಹುಡುಗಿ ಸಿಗದ ಹಿಂದೂ ಯುವಕರು ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ವಿವಾಹವಾಗಿ ಎಂಬ ತಮ್ಮ ಹೇಳಿಕೆಯ ಕುರಿತು ಚಕ್ರವರ್ತಿ ಸೂಲಿಬೆಲೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆ ಕಾರ್ಯಕ್ರಮದಲ್ಲಿ ತಮ್ಮ ಹೇಳಿಕೆಯ ಕುರಿತು ಸ್ಪಷ್ಟೀಕರಣ ನೀಡಿದ ಅವರು, ನಾನು ಹೇಳಿದ್ದು ಸಂಘರ್ಷದ ಮಾತು ಅಲ್ಲವೇ ಅಲ್ಲ. ನಾನು ಮಾಡಿದ್ದು ಹೇಟ್ ಸ್ಪೀಚ್ ಅಲ್ಲ, ಇದು ಸ್ಪೀಚ್ ಆಫ್ ಲವ್ ಎಂದಿದ್ದಾರೆ.

ಘರ್ ವಾಪ್ಸಿ ಕುರಿತಾದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಳೆದ 60-70 ವರ್ಷಗಳಿಂದ ಮತಾಂತರ ನಡೀತಿದೆ ಅಂತ ನಾವು ಹೇಳ್ತಿದ್ವಿ. ನಮ್ಮನೆ ಪಕ್ಕದಲ್ಲಿದ್ದವರು ವಾಪಸ್ ಸ್ವಧರ್ಮಕ್ಕೆ ಬರಬೇಕಾದರೆ ಯಾರನ್ನ ಸಂಪರ್ಕಿಸಬೇಕು ಅಂತ ಗೊತ್ತಿರಲ್ಲ. ವಾಪಸ್ ಬರಬೇಕು ಅಂತಾದರೆ ಇಂಥ ಸೆಂಟರ್‌ಗಳಿವೆ ಅಂತ ಹೇಳಬೇಕಿದೆ. ಇದರ ನಡುವೆ ನನ್ನ ಅಪೇಕ್ಷೆ ಏನೆಂದರೆ, ಎಲ್ಲ ಸಾಧುಗಳು ತಮ್ಮ ತಮ್ಮ ಸಮಾಜದವರನ್ನು ಒಪ್ಪಿಸಿ ಯಾರು ಘರ್ ವಾಪ್ಸಿ ಆಗುತ್ತಾರೋ ಅವರನ್ನು ತಮ್ಮ ತಮ್ಮ ಸಮಾಜಕ್ಕೆ ಸ್ವೀಕರಿಸುತ್ತೇವೆ ಅಂತ ಹೇಳಿದರೆ, ಜನರು ಆರಿಸಿಕೊಂಡು ಇಂತಹ ಸಮಾಜಕ್ಕೆ ಬರುತ್ತೇವೆ ಅಂದರೆ ಎಲ್ಲ ಸಮಸ್ಯೆ ನಿವಾರಣೆ ಆಗಲಿದೆ. ಹಿಂದೂ ಸಮಾಜದ ಎಲ್ಲರೂ ಸೇರಿಕೊಂಡು ಏಕೆ ಈ ರೀತಿ ಮಾಡಬಾರದು ಎಂದರು.

ಯಾರಾದರೂ ಹಿಂದು ಹುಡುಗಿ ಪ್ರೀತಿಸಿ ಅನ್ಯ ಧರ್ಮೀಯರನ್ನು ವಿವಾಹವಾದರೆ ನಮ್ಮ ವಿರೋಧ ಇಲ್ಲ. ಆದರೆ ಪ್ರೀತಿಸುವಂತೆ ಮಾಡಿದರೆ, ಮೋಸ ಮಾಡಿದರೆ ಹೋರಾಟ ಇದ್ದೇ ಇರುತ್ತದೆ ಎಂದು ಹೇಳಿದ ಚಕ್ರವರ್ತಿ ಸೂಲಿಬೆಲೆ, ಅದೇ ರೀತಿ ಹಿಂದು ಯುವಕರು ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆ ಆದಾಗ ನಾವು ಎದುರಿಗೆ ನಿಲ್ತೀವಿ, ಹೊಸ ಹೋರಾಟಕ್ಕೆ ನಾಂದಿ ಹಾಡ್ತೀವಿ ಎಂದರು.

ಮುಸ್ಲಿಂರ ವಿರುದ್ಧ ದ್ವೇಷ: ಮುನೀರ್ ಕಾಟಿಪಳ್ಳ:

ಸೂಲಿಬೆಲೆ ಅವರ ಹೇಳಿಕೆ ಬಗ್ಗೆ ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ಚಕ್ರವರ್ತಿ ಸೂಲಿಬೆಲೆ ಭಾಷಣವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮುಸ್ಲಿಮರ ವಿರುದ್ಧ ದ್ವೇಷ ಹುಟ್ಟಿಸಲು ಸೂಲಿಬೆಲೆ ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಯಾರು ಯಾರನ್ನು ಬೇಕಾದರೂ ಮದುವೆಯಾಗಬಹುದು. ಮುಸ್ಲಿಂ ಹೆಣ್ಣುಮಕ್ಕಳನ್ನು ಹಿಂದೂಗಳು, ಹಿಂದೂ ಹೆಣ್ಣು ಮಕ್ಕಳನ್ನು ಮುಸ್ಲಿಮರು ಪರಸ್ಪರ ಒಪ್ಪಿಗೆ ಇದ್ದರೆ ಮದುವೆಯಾಗಲು ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದ್ದಾರೆ.

Share this article