ಕನ್ನಡಪ್ರಭ ವಾರ್ತೆ ಕಲಬುರಗಿ
ಖರ್ಗೆ ಅಳಿಯ ರಾಧಾಕೃಷ್ಣ ಕಣದಲ್ಲಿರುವ ಕಲಬುರಗಿ ಮೀಸಲು ಲೋಕಸಭೆ ಅಖಾಡಕ್ಕೆ ದೇಶದ ಪ್ರಮುಖ ಕಾಂಗ್ರೆಸ್ ನಾಯಕರೆಲ್ಲರೂ ಪ್ರಚಾರದಲ್ಲಿ ತೊಡಗಿದ್ದಾರೆ.ಕಳೆದ ವಾರವಷ್ಟೇ ರಾಜ್ಯದ ಸಿಎಂ, ಡಿಸಿಎಂ, ಇಲ್ಲಿಗೆ ಬಂದು ಪ್ರಚಾರ ಮಾಡಿ ಹೋದ ಬೆನ್ನಲ್ಲೇ ಸೋಮವಾರ ಇಲ್ಲಿಗೆ ಎಐಸಿಸಿ ಅಧ್ಯಕ್ಷ ಡಾ. ಖರ್ಗೆ, ಪ್ರ. ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಸುರ್ಜೇವಾಲಾ ಆಗಮಿಸಿ ಅಬ್ಬರಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೆಲಂಗಾಣ ಮುಖ್ಯಮಂತ್ರಿ ಅನುಮುಲ ರೇವಂತರೆಡ್ಡಿ, ಡಾ.ಶರಣಪ್ರಕಾಶ ಪಾಟೀಲ, ರಣಜೀತ ಸಿಂಗ್ ಸುರ್ಜೇವಾಲಾ ಎಲ್ಲರು ಸೇಡಂ ಪಟ್ಟಣದಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಪ್ರಧಾನಮಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷವನ್ನು ಹಾಗೂ ನಾಯಕರನ್ನು ಬೈಯುವುದೆ ಕೆಲಸ ಮಾಡಿಕೊಂಡಿದ್ದಾರೆ. ಅವರು ಬೈದಷ್ಟು ನಮಗೆ ಒಳ್ಳೆಯದಾಗುತ್ತದೆ ಎಂದರೆ, ಪ್ರಿಯಾಂಕಾ ಗಾಂಧಿಯವರು ದೇಶದಲ್ಲಿ ಸತ್ಯಮೇವ ಜಯತೆ ಎಂದರೂ ಕಳೆದ 10 ವರ್ಷದಿಂದ ಸುಳ್ಳೆ ಕಾರುಬಾರು ಮಾಡುತ್ತಿದೆ ಎಂದು ಮೋದಿಯವರ ವಿರುದ್ಧ ವಾಗ್ದಾಳಿ ಮಾಡಿ ಗಮನ ಸೆಳೆದರು.
ನಿಂದಿಸೋ ಬದಲು ರಾಜ್ಯಕ್ಕೇನು ಮಾಡಿದ್ದೀರಿ ಹೇಳಿ ಮೋದಿಯವರೆ:ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಹಾಗೂ ನನಗೆ ಬೈಯುತ್ತಲೇ ಇರುತ್ತಾರೆ. ನಮಗೆ ಬೈಯುವ ಬದಲು ನಮ್ಮ ರಾಜ್ಯಕ್ಕೆ ಏನು ಮಾಡಿದ್ದಾರೆ ಎಂದು ಮೋದಿ ವಿವರಿಸಲಿ ಎಂದು ಖರ್ಗೆ ಆಗ್ರಹಿಸಿದರು.
ಆರ್ಟಿಕಲ್ 371 ಜೆ ಜಾರಿಗೆ ತರಲು 330 ಸದಸ್ಯರ ಬೆಂಬಲ ಬೇಕಾಗಿತ್ತು. ನಾನು ಎಲ್ಲ ಸದಸ್ಯರ ಮನೆಗೆ ವೈಯಕ್ತಿಕ ಭೇಟಿ ನೀಡಿ ಅವರ ಬೆಂಬಲ ಕೋರಿದ್ದೆ. ಅವರೆಲ್ಲರ ಸಹಕಾರದಿಂದ ಅದು ಜಾರಿಯಾಗಿತ್ತು. ಈ ಪ್ರಮುಖ ಯೋಜನೆಯ ಜೊತೆಗೆ ಕೇಂದ್ರಿಯ ವಿಶ್ವವಿದ್ಯಾಲಯ, ಇಎಸ್ ಐಸಿ, ಜವಳಿ ಪಾರ್ಕ್, ರೇಲ್ವೆ ಕೋಚ್ ಫ್ಯಾಕ್ಟರಿ ಮುಂತಾದ ಯೋಜನೆಗಳು ನಮ್ಮ ಕಾಲದಲ್ಲಿ ಆಗಿದ್ದವು. ಇಂತಹ ಯಾವುದಾದರೂ ಯೋಜನೆಯನ್ನು ಮೋದಿ ನಮ್ಮ ಜಿಲ್ಲೆಗೆ ಕೊಟ್ಟಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಿಸಿದಿ ಖರ್ಗೆ, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ರಾಹುಲ್ ಗಾಂಧಿ ದೇಶದ ಪೂರ್ವ ಪಶ್ಷಿಮ ಹಾಗೂ ಉತ್ತರ ದಕ್ಷಿಣದವರೆಗೆ ಪಾದಯಾತ್ರೆ ಮಾಡಿ ಜನರ ಕಷ್ಟ ಅರಿತಿದ್ದಾರೆ. 50 ವರ್ಷದಲ್ಲೇ ಕಾಂಗ್ರೆಸ್ ಏನು ಮಾಡಿದೆ ಎಂದು ಮೋದಿ ಕೇಳುತ್ತಾರೆ, ಸ್ವತಂತ್ರ ನಂತರ ನೆಹರು ಅವರು ಪ್ರಜಾತಂತ್ರ ವ್ಯವಸ್ಥೆ ಯನ್ನು ಉಳಿಸದಿದ್ದರೆ ಹಾಗೂ ಅಂಬೇಡ್ಕರ್ ಸಂವಿಧಾನ ತರದಿದ್ದರೆ ನೀವು ಪ್ರಧಾನಿಯಾಗುತ್ತಿರಲಿಲ್ಲ ಹಾಗೂ ಅಮಿತ್ ಶಾ ಗೃಹ ಸಚಿವನಾಗುತ್ತಿರಲಿಲ್ಲ ಎಂದು ಟಾಂಗ್ ನೀಡಿದರು.
"ನಾರಿ ನ್ಯಾಯ, ಯುವನ್ಯಾಯ, ರೈತನ್ಯಾಯ, ಶ್ರಮಿಕ್ ನ್ಯಾಯ, ಜಾತಿ ನ್ಯಾಯ ಎನ್ನುವ ನ್ಯಾಯಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿದ್ದು, ನಮ್ಮ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಮೋದಿ ಸುಳ್ಳಿನ ಸರದಾರ. ನಮ್ಮ ಪ್ರಣಾಳಿಕೆಯನ್ನು ಟೀಕಿಸಿ ಕಾಂಗ್ರೆಸ್ ಮಂಗಲಸೂತ್ರ ಕಿತ್ತುಕೊಳ್ಳುತ್ತದೆ ಹಾಗೂ ಸಂಪತ್ತನ್ನು ಸಮಾನವಾಗಿ ಹಂಚುತ್ತದೆ ಎಂದು ಸುಳ್ಳು ಹೇಳುತ್ತಿದ್ದು ಅದಕ್ಕೆ ಗಮನ ನೀಡದೆ ಕಾಂಗ್ರೆಸ್ ಕೈ ಬಲಪಡಿಸುವಂತ ಕೋರಿದರು.ಮೋದಿ ಆಡಳಿತದಲ್ಲಿ ಸುಳ್ಳಿನ ಕಾರುಬಾರು: ‘ಎಲ್ಲರಿಗೂ ನನ್ನ ನಮಸ್ಕಾರ’ ಎಂದು ಕನ್ನಡದಲ್ಲೇ ಮಾತು ಪ್ರಾರಂಭಿಸಿದ ಪ್ರಿಯಾಂಕಾ ಗಾಂಧಿ ಅವರು ತಾವು ಸಭೆಗೆ ತಡವಾಗಿ ಬಂದಿರುವುದಕ್ಕೆ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಯಿಸಿದ್ದಕ್ಕೆ ಕ್ಷಮೆ ಕೇಳಿದರು.
ಇದು ಬಸವಣ್ಣನವರ ಹಾಗೂ ಖಾಜಾ ಬಂದೇವನಾಜರ ಪ್ರವಿತ್ರ ಭೂಮಿ ಇದ್ದು. ಸತ್ಯ ಹಾಗೂ ಕ್ರಾಂತಿ ಮತ್ತು ಖರ್ಗೆ ಅವರ ಕರ್ಮಭೂಮಿಯಾಗಿದೆ ಎಂದರು.ನಮ್ಮ ದೇಶ ಸತ್ಯಮೇವ ಜಯತೆ ಎನ್ನುವ ಮಾತನ್ನು ಅಕ್ಷರಶಃ ಪಾಲಿಸುವ ದೇಶವಾಗಿದೆ. ರಾಜಕೀಯ ಕೂಡಾ ಸತ್ಯದ ದಾರಿಯಲ್ಲೇ ನಡೆದಿದೆ. ಕಾಂಗ್ರೆಸ್ ಪಕ್ಷ ಸತ್ಯದ ರಾಜಕೀಯದ ಹಾದಿಯಲ್ಲೇ ನಡೆದಿದೆ. ಆದರೆ ಕಳೆದ ಹತ್ತುವರ್ಷಗಳಿಂದ ರಾಜಕೀಯದ ಹಾದಿ ಬದಲಾಗಿದೆ. ಇಲ್ಲಿ ಸತ್ಯಕ್ಕೆ ಜಾಗವಿಲ್ಲದಾಗಿದೆ. ಸುಳ್ಳೇ ಕಾರುಬಾರು ಮಾಡುತ್ತಿದೆ ಎಂದು ತಿವಿದರು.
ಕಳೆದ ಐದು ವರ್ಷದ ಅವಧಿಯಲ್ಲಿ ಇಲ್ಲಿನ ಸಂಸದ ಒಂದು ರೈಲು ಓಡಿಸಿದ್ದು ಬಿಟ್ಟರೇ ಬೇರೆ ಏನು ಮಾಡಿಲ್ಲ ಎಂದು ಆರೋಪಿಸಿದ ಪ್ರಿಯಾಂಕಾ ಗಾಂಧಿ, ಕುಡಿಯುವ ನೀರಿಗೂ ಕೂಡಾ ಕಷ್ಟಪಡುವ ವಾತಾವರಣ ನಿರ್ಮಾಣವಾಗಿದೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಶಿಕ್ಷಣ ಪಡೆದವರಿಗೆ ಉದ್ಯೋಗ ವಿಲ್ಲದೇ ದೂರದ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ದೇಶದ ಯವಕರು ಸೇನೆಯಲ್ಲಿ ಸೇವೆ ಸಲ್ಲಿಸಲು ಉತ್ಸುಕರಾಗಿದ್ದರು. ಆದರೆ, ಅಗ್ನಿ ವೀರ್ ಯೋಜನೆ ಜಾರಿಗೆ ತಂದು ಸೈನ್ಯಕ್ಕೆ ಸೇರುವ ಯುವಕರಿಗೆ ಯಾವುದೇ ಭರವಸೆ ನೀಡಿಲ್ಲವೆಂದರು.ನಿಮ್ಝ್, ರೇಲ್ವೆ ವಲಯದಂತ ಪ್ರಮುಖ ಯೋಜನೆಗಳು ಜಿಲ್ಲೆಗೆ ಮಂಜೂರಾಗಿದ್ದವು ಆದರೆ ಕೇಂದ್ರ ಸರ್ಕಾರ ಇದು ಖರ್ಗೆ ಜಿಲ್ಲೆ ಎಂದು ಎಲ್ಲ ಯೋಜನೆಗಳನ್ನು ವಾಪಸ್ ಪಡೆದಿದೆ ಎಂದರು.
ರೈತರ ಸಾಲಮನ್ನಾ ಮಾಡುವ ಉದ್ದೇಶ ಹೊಂದಲಾಗಿದೆ. ರೈತರ ಸಾಲ ಮನ್ನಾಮಾಡಲು ಹಣ ವಿಲ್ಲ ಎಂದ ಮೋದಿ ಬಂಡವಾಳಶಾಯಿಗಳ 16 ಲಕ್ಷಕೋಟಿ ಸಾಲ ಮನ್ನಾ ಮಾಡಿದ್ದಾರೆ. ಅವರು ಬಹಳ ದೊಡ್ಡ ಭರವಸೆ ನೀಡಿದ್ದರು. ಅವುಗಳಲ್ಲಿ ತೊಗರಿ ಹಬ್ ಮಾಡುವುದು ಕೂಡಾ ಸೇರಿತ್ತು. ಎಂ ಎಸ್ ಪಿ ನಿಗದಿ ಮಾಡುವುದಾಗಿ ಹೇಳಿದ್ದರು. ಯಾವುದು ಮಾಡಲಿಲ್ಲವೆಂದರು.ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ಮುಟ್ಟುತ್ತಿರುವ ಬಗ್ಗೆ ಸಭಿಕರಿಗೆ ಕೇಳಿ ಖಾತ್ರಿ ಪಡೆಸಿಕೊಂಡ ಪ್ರಿಯಾಂಕಾ, ಕಾಂಗ್ರೆಸ್ ಸರ್ಕಾರ ಬಡವರ ಪರ, ಬಿಜೆಪಿ ಶ್ರೀಮಂತರ ಪಕ್ಷವಾಗಿದೆ ಎಂದರು.
ಮೀಡಿಯಾದವರ ಮೌನ ಯಾಕೋ ಗೊತ್ತಿಲ್ಲ: ಎರಡೆರಡು ಸಿಎಂಗಳನ್ನು ಜೈಲಿಗೆ ತಳ್ಳಲಾಗಿದೆ. ಆದರೂ ಕೂಡಾ ಮಿಡಿಯಾಗಳು ಸುಮ್ಮನಿವೆ. ಕಾರಣ ಬಹುತೇಕ ಮೀಡಿಯಾಗಳು ಶ್ರೀಮಂತರ ಆಧೀನದಲ್ಲಿವೆ. ರೇವಂತರೆಡ್ಡಿ ಮನೆಗೆ ದಿಲ್ಲಿ ಪೊಲೀಸರು ಬಂದಿರುವ ಬಗ್ಗೆ ಯಾವ ಮೀಡಿಯಾಗಳು ಪ್ರಶ್ನಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.ಬಿಜೆಪಿಗೆ 400 ಸೀಟು ಈ ಸಲ ಸಿಕ್ಕರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಸಂವಿಧಾನದಿಂದ ಸಮಾಜದ ಎಲ್ಲ ವರ್ಗದವರಿಗೆ ಸಮಾನ ಅವಕಾಶ ಹಾಗೂ ಹಕ್ಕುಸಿಗುತ್ತದೆ. ಆದರೆ ಸಂವಿಧಾನ ಬದಲಾದರೆ ಎಲ್ಲ ಅವಕಾಶಗಳು ಕಳೆದು ಹೋಗಲಿವೆ ಎಂದರು.
ಪ್ರಜ್ವಲ್ ರೇವಣ್ಣ ಕೇಸ್ ಪ್ರಸ್ತಾಪಿಸಿ ಮೋದಿಗೆ ಟಾಂಗ್: ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಮೋದಿ ಸುಮ್ಮನೆ ಇದ್ದರು. ಮೋದಿ ಜತೆ ಇರುವ ವ್ಯಕ್ತಿ ಇಂದು ಕರ್ನಾಟಕದಲ್ಲಿ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅದೇ ವ್ಯಕ್ತಿಯ ಪರ ಮತಯಾಚಿಸಿದ್ದ ಮೋದಿ ಹಾಗೂ ಅಮಿತ್ ಶಾ ಉತ್ತರಿಸಿಲಿ. ಅದೇ ವ್ಯಕ್ತಿ ಯಾರಿಗೂ ಗೊತ್ತಾಗದಂತೆ ವಿದೇಶಕಕ್ಕೆ ಪರಾರಿಯಾದ. ಮಂಗಲಸೂತ್ರದ ಬಗ್ಗೆ ಮಾತನಾಡುವ ಮೋದಿ ಈಗ ಏನು ಹೇಳುತ್ತಾರೆ? ಈ ದೇಶದಲ್ಲಿ ಬಹಳಷ್ಟು ಪ್ರದಾನಿಗಳು ಆಗಿ ಹೋಗಿದ್ದಾರೆ. ಅವರೆಲ್ಲ ಸತ್ಯದ ಹಾದಿಯಲ್ಲಿ ನಡೆದಿದ್ದಾರೆ. ಆದರೆ ಮೋದಿ ಅವರು ಮಹಿಳೆಯರ ರಕ್ಷಣೆಗೆ ಏನು ಮಾಡಿದ್ದಾರೆ ಹೇಳಲಿ. ನೀವು ಪ್ರಶ್ನೆ ಮಾಡಿ, ನೀವು ಸುಮ್ಮನಿದ್ದರೆ ಧರ್ಮ ಹಾಗೂ ಜಾತಿಯ ಆಧಾರದ ಮೇಲೆ ಮೋದಿ ಮತ ಕೇಳಲು ಬರುತ್ತಾರೆ ಎಂದು ಎಚ್ಚರಿಸಿದರು.ಈ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಸಂವಿಧಾನ ದುರ್ಬಲಗೊಳಿಸುವ ಮಾತು ನಡೆಯುತ್ತಿದೆ. ವಿಚಾರ ಮಾಡಿ ಮತದಾನ ಮಾಡಿ. ನಿಮಗೆ ಟಿವಿಯಲ್ಲಿ ಏನು ತೋರಿಸಲಾಗುತ್ತಿದೆ ಅದುಸತ್ಯವಲ್ಲ. ಜನರು ಹೇಗೆ ಕಷ್ಟಪಡುತ್ತಿದ್ದಾರೆ ಎನ್ನುವ ಕುರಿತು ಮೋದಿಗೆ ಗೊತ್ತಿಲ್ಲ. ಈ ಸರ್ಕಾರವನ್ನು ತೊಲಗಿಸಿ ನಿಮಗೆ ಅನುಕೂಲವಾಗುವಂತ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದರು.
ದೆಹಲಿ ಪೊಲೀಸ್ ಛೂ ಬಿಟ್ಟಿರುವ ಮೋದಿ: ರೇವಂತ ರೆಡ್ಡಿ ಆಕ್ರೋಶತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾತನಾಡಿ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ನೀಡಿ ಮೋದಿ ಸರ್ಕಾರವನ್ನು ಕೆಳಗೆ ಇಳಿಸಲು ಸಹಕರಿಸಿ ಎಂದರು.
ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ವಿಳಂಬ ದೋರಣೆ ಅನುಸರಿಸಿದ್ದರಿಂದ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ದಿಲ್ಲಿಯಲ್ಲಿ ಪ್ರತಿಭಟನೆ ಮಾಡುವಂತೆ ಸನ್ನಿವೇಶ ನಿರ್ಮಾಣವಾಗಿತ್ತು. ನಂತರ ರಾಜ್ಯ ಸರ್ಕಾರ ಸುಪ್ರಿಂಕೋರ್ಟ್ ಮೊರೆ ಹೋಗಬೇಕಾಯಿತು ಎಂದರು.ಬಿಜೆಪಿ 400 ಸೀಟು ಗೆದ್ದಲ್ಲಿ ಎಸ್ ಸಿ, ಎಸ್ ಟಿ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರದ್ದುಗೊಳಿಸುತ್ತದೆ. ಹಾಗಾಗಿ, ನೀವೆಲ್ಲ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಬಿಜೆಪಿ ಹುನ್ನಾರ ವಿಫಲಗೊಳಿಸಿ ಎಂದು ರೇವಂತರೆಡ್ಡಿ ಮನವಿ ಮಾಡಿ ಕಳೆದ ಸಲ 28 ಬಿಜೆಪಿ ಸೀಟುಗಳನ್ನು ಗೆಲ್ಲಿಸಿದ್ದೀರಿ ಈ ಸಲ ಕಾಂಗ್ರೆಸ್ ನ 28 ಸೀಟು ಗೆಲ್ಲಿಸಿ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದಕ್ಕೆ ದೆಹಲಿ ಪೊಲೀಸರು ಹೈದರಾಬಾದ್ ನ ನನ್ನ ಮನೆಗೆ ನೋಟಿಸು ಕೊಡಲು ಬಂದಿದ್ದಾರಂತೆ. ಮೋದಿಯವರೇ ಇ.ಡಿ, ಐ.ಡಿ ಯನ್ನು ಕಳಿಸುತ್ತೀರಿ ಈಗ ದಿಲ್ಲಿ ಪೊಲೀಸರನ್ನು ಕಳಿಸಿದ್ದೀರಿ. ನಾನು ಇದಕ್ಕೆಲ್ಲ ಹೆದರುವುದಿಲ್ಲ ಎಂದು ರೇವಂತ್ ರೆಡ್ಡಿ ನಾನು ನಿಮ್ಮ ಪಕ್ಕದ ತೆಲಂಗಾಣದಲ್ಲಿ ಇರುತ್ತೇನೆ. ಯಾವುದೇ ಸಂದರ್ಭ ಎದುರಾದರೆ ನನಗೆ ಒಂದು ಕರೆ ನೀಡಿ ನಾನು ನಿಮ್ಮ ಸಹಾಯಕ್ಕೆ ಓಡೋಡಿ ಬರುತ್ತೇನೆ ಎಂದು ಕರ್ನಾಟಕದ ಜನರಿಗೆ ಅಭಯ ನೀಡಿದರು.ಬಡವರ ಪರ ಕಾಂಗ್ರೆಸ್ ಬದ್ಧತೆ: ಕೇಂದ್ರ ಸರ್ಕಾರ ಅಸಹಕಾರ ಮುಂದುವರೆಸಿದ್ದರಿಂದ ಅನ್ನಭಾಗ್ಯ ಯೋಜನೆ ಜಾರಿಗೆಗೊಳಿಸುವಲ್ಲಿ ತುಸು ತಡವಾಯಿತು. ಆದರೂ ಕೂಡಾ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆಯಾಗಿ ಫಲಾನುಭವಿಗಳಿಗೆ ಅಕ್ಕಿ ಖರೀದಿಗಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸಲು ಕ್ರಮಕೈಗೊಂಡಿತು. ಇದು ಬಡವರ ಪರವಾದ ನಮ್ಮ ಬದ್ಧತೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಿದೆ ಎಂದ ಪಾಟೀಲ್ ಪಕ್ಷದ ಅಭ್ಯರ್ಥಿಗೆ ನಿಮ್ಮ ಆಶೀರ್ವಾದ ನೀಡಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ 40 ಸಾವಿರಕ್ಕೂ ಅಧಿಕ ಮತಗಳಿಂದ ಆರಿಸಿ ಕಳಿಸಿದಿರಿ ಅದರಂತೆ ರಾಧಾಕೃಷ್ಣ ಅವರಿಗೂ ಮತಗಳ ಆಶೀರ್ವಾದ ಮಾಡಿ ಎಂದರು.ವೇದಿಕೆಯ ಮೇಲೆ ಎಐಸಿಸಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್, ನಾಸೀರ್ ಹುಸೇನದ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಯು.ಬಿ.ವೆಂಕಟೇಶ, ಮಾಜಿ ಶಾಸಕ ಕೈಲಾಸ ನಾಥ ಪಾಟೀಲ, ಸುಭಾಷ್ ರಾಠೋಡ, ಬಸವರಾಜ ಭಿಮಳ್ಳಿ, ಲತಾ ರಾಠೋಡ, ಸತೀಶ್ ರೆಡ್ಡಿ ರಂಜೋಳ, ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.