ಅಧಿಕಾರದ ಗುಂಗಿನಲ್ಲಿ ನನ್ನ ಆರೋಗ್ಯದ ಮಾತನಾಡಿದ್ದು ಸರಿಯಲ್ಲ: ಬಸವರಾಜ ದಢೇಸೂಗುರು

KannadaprabhaNewsNetwork |  
Published : Feb 10, 2026, 02:30 AM IST
ಫೊಟೊ ವಿವರ-೦೯-ಕೆಆರ್‌ಟಿ-೧-ಕಾರಟಗಿ:  ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಬಸವರಾಜ ಧಡೆಸೂಗುರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಏಪ್ರಿಲ್, ಮೇ ಒಳಗೆ ಅಣೆಕಟ್ಟೆಯ ಎಲ್ಲ ೨೦ ಕ್ರಸ್ಟ್‌ಗೇಟ್‌ ಅಳವಡಿಸಿ, ರೈತರ ಹೊಲಗಳಿಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಪಾದಯಾತ್ರೆ ಮಾಡುವುದು ನಿಶ್ಚಿತ. ಈ ಭಾಗದ ಜನತೆಯ, ರೈತರ, ಕಾರ್ಯಕರ್ತರ, ಭಾವನೆ ಅರ್ಥೈಸಿಕೊಂಡು ಪಾದಯಾತ್ರೆ ನಡೆಸಲು ಮುಂದಾಗಿದ್ದೇವೆ ಎಂದು ಮಾಜಿ ಶಾಸಕ ಬಸವರಾಜ ದಢೇಸೂಗುರು ಹೇಳಿದರು.

ಕಾರಟಗಿ: ನನ್ನ ಕಾಲಿಗೆ ಜಂಗು ಹಿಡಿದಿದೆ, ತುಕ್ಕು ಹಿಡಿದಿದೆ ಎಂದು ನನ್ನ ವೈಯಕ್ತಿಕ ಆರೋಗ್ಯದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡುವುದು ಸರಿಯಲ್ಲ ಎಂದು ಮಾಜಿ ಶಾಸಕ ಬಸವರಾಜ ದಢೇಸೂಗುರು ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಆರೋಗ್ಯ ನನಗೆ ಮುಖ್ಯವಲ್ಲ. ನನಗೆ ಕ್ಷೇತ್ರದ, ಈ ಭಾಗದ ಜನತೆಯ ಹಿತ ಕಾಪಾಡಲು ಬಯಸುತ್ತಿದ್ದೇನೆ. ಅಧಿಕಾರದ ಗುಂಗಿನಲ್ಲಿ ಇನ್ನೊಬ್ಬರ ಆರೋಗ್ಯದ ಕುರಿತು ಮಾತನಾಡುವುದು ಮಂತ್ರಿ ಸ್ಥಾನಕ್ಕೆ ಶೋಭೆಯಲ್ಲ ಎಂಬುದನ್ನು ಅರಿತುಕೊಂಡು ಸಚಿವರು ಮಾತನಾಡಬೇಕು ಎಂದು ಹೇಳಿದ್ದಾರೆ.

ಅಧಿಕಾರಕ್ಕೆ ಬಂದು ಮೂರು ವರ್ಷ ಸಮೀಸುತ್ತಿದೆ, ಬರಿ ಸುಳ್ಳು ಭಾಷಣ, ಸುಳ್ಳು ಹೇಳಿಕೆ ಬಿಟ್ಟು ಅಂದುಕೊಂಡಿದ್ದು ಕಾರ್ಯರೂಪಕ್ಕೆ ತರಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಮಾಧ್ಯಮದಲ್ಲಿ ಮಾತ್ರ ಹೀರೋ. ಕೆಲಸದಲ್ಲಿ ಹಿರೋ ಅಲ್ಲ, ಬದುಕಿನಲ್ಲಿ ಜಿರೋ ಆಗಿದ್ದಾರೆ. ಕ್ರಸ್ಟ್‌ಗೇಟ್‌ ಕಾಮಗಾರಿ ಮುಗಿಸುವ ಯೋಚನೆ ಮಾಡದೆ ಬರಿ ಸುಳ್ಳು ಹೇಳುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಮೊದಲು ರೈತರ ಹಿತ ಕಾಪಾಡುವ ಕೆಲಸ ಮಾಡಿ ಎಂದು ಹೇಳಿದರು.

ಕ್ರಸ್ಟ್‌ಗೇಟ್‌ ಬದಲಾವಣೆ ನೆಪದಲ್ಲಿ ಕಾಲುವೆಗೆ ನೀರು ಹರಿಸದೆ ರೈತರನ್ನು ಸಂಕಷ್ಟಕ್ಕೆ ತಂದಿಟ್ಟಿದ್ದೀರಿ. ಕ್ರಸ್ಟ್‌ಗೇಟ್‌ ಅಳವಡಿಕೆ ಕಾರ್ಯ ಮುಗಿಯುತ್ತಿಲ್ಲ. ಮುಂದಿನ ಬೆಳೆ ಕೂಡ ರೈತರು ಬೆಳೆಯುವುದು ಗ್ಯಾರಂಟಿ ಇಲ್ಲ. ಹೀಗಾದರೆ ರೈತರ ಪಾಡೇನು ಎಂದು ಪ್ರಶ್ನಿಸಿದರು.

ಏಪ್ರಿಲ್, ಮೇ ಒಳಗೆ ಅಣೆಕಟ್ಟೆಯ ಎಲ್ಲ ೨೦ ಕ್ರಸ್ಟ್‌ಗೇಟ್‌ ಅಳವಡಿಸಿ, ರೈತರ ಹೊಲಗಳಿಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಪಾದಯಾತ್ರೆ ಮಾಡುವುದು ನಿಶ್ಚಿತ. ಈ ಭಾಗದ ಜನತೆಯ, ರೈತರ, ಕಾರ್ಯಕರ್ತರ, ಭಾವನೆ ಅರ್ಥೈಸಿಕೊಂಡು ಪಾದಯಾತ್ರೆ ನಡೆಸಲು ಮುಂದಾಗಿದ್ದೇವೆ ಎಂದರು.

ಮಂಡಳ ಅಧ್ಯಕ್ಷ ಮಂಜುನಾಥ ಮಸ್ಕಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಮಾಜಿ ಶಾಸಕರ ವೈಯಕ್ತಿಕ ವಿಷಯವನ್ನು ಮಾಧ್ಯಮದ ಮುಂದೆ ಮಾತನಾಡಿ, ತೇಜೋವಧೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನುಷ್ಯ ನಿರಂತರ ಧ್ಯಾನ, ತಪ ಮಾಡಲಿ: ಡಾ. ಚನ್ನವೀರ ಶ್ರೀಗಳು
ಆಧಾರ್ ಸೀಡಿಂಗ್ ಶೇ. 85.62ರಷ್ಟು ಸಾಧನೆ: ಸಚಿವ ಕೃಷ್ಣ ಭೈರೇಗೌಡ