ಕನ್ನಡಪ್ರಭ ವಾರ್ತೆ ನಂಜನಗೂಡು
ಪೋಷಕರು ಮಕ್ಕಳಿಗೆ ವಿದ್ಯೆಯ ಜೊತೆಗೆ ನಮ್ಮ ಕಲೆ, ಸಾಹಿತ್ಯ, ನಾಟ್ಯ ಮುಂತಾದ ಕಲೆಗಳ ತರಬೇತಿ ಕೊಡಿಸುವ ಮೂಲಕ ನಾಡಿನ ಕಲೆ, ಸಾಹಿತ್ಯಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ಆಪ್ತಮಿತ್ರ ಖ್ಯಾತಿಯ ನಾಟ್ಯ ಕಲಾವಿದ ಶ್ರೀಧರ್ ಜೈನ್ ಹೇಳಿದರು.ನಗರದ ಜೆ.ಎಸ್.ಎಸ್. ಮಂಗಳ ಮಂಟಪದಲ್ಲಿ ನಟರಾಜ ನಾಟ್ಯಶಾಲೆ ಆಯೋಜಿಸಿದ್ದ ನಾಟ್ಯಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಟರಾಜ ನಾಟ್ಯ ಶಾಲೆಯ ರಮ್ಯಾ ರಾಘವೇಂದ್ರ ಅವರು 1 ರಿಂದ 16 ವರ್ಷ ವಯೋಮಾನದ ಮಕ್ಕಳಿಗೆ ಶಾಸ್ರೋಕ್ತವಾಗಿ ನಾಟ್ಯ ಕಲಿಸುತ್ತಿದ್ದಾರೆ. ಪೋಷಕರು 2-3 ತಿಂಗಳಿಗೆ ನಾಟ್ಯ ಶಾಲೆಯನ್ನು ಬದಲಿಸುವುದರಿಂದ ಪ್ರಯೋಜನ ಆಗುವುದಿಲ್ಲ. ಮಕ್ಕಳು ವೇದಿಕೆಯಲ್ಲಿ ನಾಟ್ಯ ಪ್ರದರ್ಶನ ನೀಡುವುದು ಸುಲಭವಲ್ಲ. ಮಕ್ಕಳು ಏನೇ ಮಾಡಿದರೂ ಚೆಂದ, ನಮ್ಮ ಭಾರತೀಯ ಕಲೆ, ನಾಟ್ಯಗಳನ್ನು ಕಲಿಸುವುದರಿಂದ ಮುಂದೆ ಅವರು ರಾಷ್ಟ್ರ ಮಟ್ಟದಲ್ಲಿ ನಮ್ಮ ಕಲೆಯನ್ನು ಉಳಿಸಿ ಬೆಳೆಸುವ ಸಂಪ್ರದಾಯ ಮುಂದುವರೆಯುತ್ತದೆ. ಕಲೆ ಏಲ್ಲರಿಗೂ ಒಲಿಯುವುದಿಲ್ಲ, ದೇವರ ಕೃಪೆಗೆ ಒಳಗಾದವರಿಗೆ ಕಲೆ ಒಲಿಯುತ್ತದೆ ಎಂದು ಹೇಳಿದರು.ನಿವೃತ್ತ ತಹಸೀಲ್ದಾರ್ ಡಾ.ವಿ. ರಂಗನಾಥ್ ಮಾತನಾಡಿ, ನಾಟ್ಯ ಕಲಾ ಪ್ರದರ್ಶನಕ್ಕೆ ಈ ಹಿಂದೆ ಹೆಚ್ಚು ಜನ ಸೇರುತ್ತಿರಲಿಲ್ಲ. ಜನರಿಗೆ ನಮ್ಮ ಪರಂಪರೆ, ಕಲೆ, ಸಾಹಿತ್ಯಗಳ ಬಗ್ಗೆ ಈಚೆಗೆ ಶ್ರದ್ಧೆ ಬೆಳೆಯುತ್ತಿದೆ. ಕಾರ್ಯಕ್ರಮ ವೀಕ್ಷಿಸಲು ಹೆಚ್ಚು ಪ್ರೇಕ್ಷಕರು ನೆರೆದಿದ್ದೀರಿ. ನಮ್ಮ ದೇಶ ಹತ್ತಾರು ಕಲೆಗಳನ್ನು ಗೌರವಿಸುವ ಸಂಸ್ಕೃತಿ ಹೊಂದಿದೆ. ಮಕ್ಕಳು ಶ್ರದ್ಧೆಯಿಂದ ನಿರಂತರ ಅಭ್ಯಾಸ ಮಾಡುವುದರಿಂದ ಕಲೆ ಒಲಿಯುತ್ತದೆ ಎಂದು ತಿಳಿಸಿದರು.
ನಿವೃತ್ತ ಯೋಧ ಎನ್. ನಂಜುಂಡರಾವ್ ಹಾಗೂ ಶಾಲಾ ಮಕ್ಕಳಿಗೆ ಊಟ ಸಾಗಿಸುವ ಮಹದೇವು ಅವರನ್ನು ಸನ್ಮಾನಿಸಲಾಯಿತು.ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಹೊರಳವಾಡಿ ಮಹೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ನಾಟ್ಯ ಶಿಕ್ಷಕಿ ರಮ್ಯಾ ರಾಘವೇಂದ್ರ, ಸತ್ಯನಾರಾಯಣ ಇದ್ದರು.