ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಸಾರ್ವಜನಿಕ ಆಸ್ಪತ್ರೆಯ ಹಿರಿಯ ಫಾರ್ಮಾಸಿಸ್ಟ್ ಆಗಿ ಎಂ.ವೇದಮೂರ್ತಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ತಾಲೂಕಿನ ಜನತೆಗೆ ಇನ್ನೂ ಅಗತ್ಯವಿದ್ದು ವೇದಮೂರ್ತಿಯವರನ್ನು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗುವುದು ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು.ಪಟ್ಟಣದ ಶತಮಾನೋತ್ಸವ ಭವನದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆ ಹಿರಿಯ ಫಾರ್ಮಾಸಿಸ್ಟ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ವೇದಮೂರ್ತಿಗೆ ತಾಲೂಕಿನ ಅಭಿಮಾನಿಗಳು ಹಾಗೂ ಸಂಘ ಸಂಸ್ಥೆಗಳು ಆಯೋಜಿಸಿದ್ದ ಪೌರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ವೇದಮೂರ್ತಿ ಸಾರ್ವಜನಿಕ ಆಸ್ಪತ್ರೆಗೆ ಬರುವ ಜನರಿಗೆ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆ ನೀಡಿದ್ದಾರೆ. ಸುಮಾರು ೩೫ ವರ್ಷಗಳ ಕಾಲ ಒಂದೇ ಕಡೆ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಒಂದು ಕಳಂಕವಿಲ್ಲದೆ ತಮ್ಮ ಸೇವಾವಧಿಯ ಪೂರ್ತಿ ಜೀವನ ಆರೋಗ್ಯ ಕ್ಷೇತ್ರಕ್ಕೆ ಮುಡುಪಿಟ್ಟಿದ್ದಾರೆ. ನನ್ನ ತಂದೆ-ತಾಯಿ ಆರೋಗ್ಯದ ಕುರಿತು ಅವರು ಕಾಳಜಿ ವಹಿಸಿದ್ದರು ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್ ಮಾತನಾಡಿ, ಇಂದು ಎಲ್ಲೆಡೆ ಜಾತಿ, ರಾಜಕಾರಣ ಎಂಬುದು ಎಲ್ಲೆ ಮೀರಿದೆ. ಇಂತಹ ಸಂದರ್ಭದಲ್ಲಿ ಒಬ್ಬ ಸರ್ಕಾರಿ ನೌಕರನಾಗಿ ಸಾರ್ವಜನಿಕ ಆಸ್ಪತ್ರೆಯ ಔಷಧಾಲಯ ವಿಭಾಗದಲ್ಲಿ ವೇದಮೂರ್ತಿ ಸತತ ೩೫ ವರ್ಷಗಳ ಸೇವೆ ಸಲ್ಲಿಸಿದ್ದಾರೆ ಎಂದರೆ ಅದಕ್ಕೆ ಅವರ ಪ್ರಾಮಾಣಿಕತೆ ಮತ್ತು ತಾಲೂಕಿನ ಜನತೆ ಪಕ್ಷಾತೀತವಾಗಿ. ಜಾತ್ಯತೀತವಾಗಿ ಅವರ ಮೇಲೆ ಇರುವ ಪ್ರೀತಿ ಗೌರವಕ್ಕೆ ಸಾಕ್ಷಿಯಾಗಿದೆ ಎಂದರು.ಗೌಡಗೆರೆಯ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಎಷ್ಟು ಸಮಸ್ಯೆ ಇದ್ದರೂ ಅದನ್ನು ವೇದಮೂರ್ತಿ ಅವರು ನಗುಮುಖದಲ್ಲೇ ಪರಿಹಾರ ಮಾಡಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ಬರುವವರಿಗೆ ಅವರು ತಮ್ಮ ಮಾತಿನಿಂದಲೆ ಧೈರ್ಯ ತುಂಬುವ ಜತೆಗೆ ರೋಗಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿ ಮತ್ತೆ ಅವರ ಆರೋಗ್ಯ ವಿಚಾರಿಸಲು ಬರುತ್ತಿದ್ದರು. ಇವರ ಈ ಗುಣ ಅವರನ್ನು ಆಸ್ಪತ್ರೆಯಿಂದ ಬೇರೆಡೆ ವರ್ಗಾವಣೆ ಮಾಡದಂತೆ ರಕ್ಷಾ ಕವಚದ ರೀತಿ ತಡೆದಿತ್ತು ಎಂದು ಬಣ್ಣಿಸಿದರು.
ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ವೇದಮೂರ್ತಿ, ನಾನು ನನ್ನ ಸೇವೆಯನ್ನು ನಿಷ್ಠೆ ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ನನ್ನ ಸೇವೆಯಲ್ಲಿ ಕೆಲ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದೇನೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್. ಆರ್. ಪ್ರಮೋದ್, ಸಮಾಜ ಸೇವಕ ರುದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ. ಸುಧೀಂದ್ರ ಇತರರಿದ್ದರು.