ಕೊಪ್ಪಳ: ರಾಜ್ಯದ ಜನರಿಗೆ ಅನ್ಯಾಯವಾದರೆ ಯಾವ ಹೋರಾಟಕ್ಕಾದರೂ ಶತಸಿದ್ಧ ಎಂದು ವೀರ ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಅಮೃತ ಪಾಟೀಲ್ ಹೇಳಿದರು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ವೀರ ಕನ್ನಡಿಗರ ಸೇನೆಯ ಜಿಲ್ಲಾ ಘಟಕದ ಉದ್ಘಾಟನೆ ಸಮಾರಂಭ ನೆರವೇರಿಸಿ ಮಾತನಾಡಿದ ಅವರು,
ಗಡಿ ವಿಷಯಗಳಲ್ಲಿ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದಲ್ಲಿ ಕನ್ನಡಿಗರ ಮೇಲೆ, ಕನ್ನಡ ಭಾಷೆಯ ಮೇಲೆ ಅಗೌರವ ತೋರುತ್ತಿದ್ದಾರೆ. ಇಂಥವರ ವಿರುದ್ಧ ನಮ್ಮ ಸಂಘಟನೆ ಹೋರಾಟ ಮಾಡುತ್ತದೆ ಎಂದ ಅವರು, 371 ಜೆ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜತೆಗೆ ಜನರ ನೋವು-ಸಂಕಟಗಳಿಗೆ ಧ್ವನಿಯಾಗಿ ಹೋರಾಡಲಿದೆ ಎಂದರು.ಪ್ರಾಸ್ತಾವಿಕ ಮಾತನಾಡಿದ ಸಾಹಿತಿ ಜಿ.ಎಸ್. ಗೋನಾಳ್, ಕನ್ನಡ ನಾಡು, ನುಡಿ, ಭಾಷೆಯ ಶ್ರೀಮಂತಿಕೆಯ ಜತೆಗೆ ಜನರ ನೋವು, ಸಂಕಟಗಳಿಗೆ ವೀರ ಕನ್ನಡಿಗ ಸೇನೆ ಧ್ವನಿಯಾಗಬೇಕಿದೆ ಎಂದ ಅವರು, ನೆಲ, ಜಲ ಮತ್ತು ಕನ್ನಡ ಭಾಷೆ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಡುವ ಅನಿವಾರ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸಂಘಟನೆ ಕನ್ನಡಕ್ಕಾಗಿ ಸದಾ ಹೋರಾಡಲಿ ಎಂದು ಆಶಿಸಿದರು.
ಹಿರಿಯ ಸಂಘಟಕ ಗಾಳೆಪ್ಪ ಕಡೆಮನಿ ಮಾತನಾಡಿ, ಸಂಘಟನೆಗಳು ಜೀವಂತವಾಗಿರಲು ಸದಾ ಸಾರ್ವಜನಿಕರ ಸೇವೆಗೆ ಅಣಿಯಾಗಬೇಕೆಂದು ಸಲಹೆ ನೀಡಿದರು.ಡಾ. ಸುಬ್ಬಣ್ಣ ಕರಕನಹಳ್ಳಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಂಘಟನೆಯು ಸಂಘಟಿತರಾಗಬೇಕು. ಈ ಕಾರಣಕ್ಕಾಗಿ ನಿತ್ಯ, ನಿರಂತರವಾಗಿ ಶ್ರಮವಹಿಸಿ ಸಂಘಟಕರು ದುಡಿಯಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್ ಎಸ್., ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡವೇ ನಿತ್ಯ, ಸತ್ಯ. ಕನ್ನಡಕ್ಕಾಗಿ, ಕನ್ನಡಿಗರ ಪರವಾಗಿ ಸಂಘಟನೆ ಹಗಲಿರುಳು ಶ್ರಮಿಸಲಿದೆ ಎಂದರು.ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆಗೈದರನ್ನು ಸನ್ಮಾನಿಸಲಾಯಿತು. ರಾಜ್ಯ ಉಪಾಧ್ಯಕ್ಷ ರವಿ ಒಂಟಿ, ಜಿಲ್ಲಾ ಘಟಕದ ಉಪಾಧ್ಯಕ್ಷ ದ್ಯಾಮಣ್ಣ ಗುಡ್ಲಾನೂರ, ಗೌರವಾಧ್ಯಕ್ಷ ಗವಿಸಿದ್ದಪ್ಪ ದದೆಗಲ್ ಉಪಸ್ಥಿತರಿದ್ದರು..