ಕನ್ನಡಪ್ರಭ ವಾರ್ತೆ ಯಳಂದೂರುತಾಲೂಕಿನ ಪ್ರಸಿದ್ಧ ಪೌರಾಣಿಕ ಕ್ಷೇತ್ರವಾಗಿರುವ ಬಿಳಿಗಿರಿ ರಂಗನಬೆಟ್ಟದಲ್ಲಿರುವ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಜೆ.ಶ್ರೀನಿವಾಸ್‌ರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.ಈ ಸಂಬಂಧ ಬುಧವಾರ ಪಟ್ಟಣದ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ಕುಮಾರ್ ನೇತೃತ್ವದಲ್ಲಿ ನಡೆದ ಸಮಿತಿಯ ಮೊದಲ ಸಭೆಯಲ್ಲಿ ಜೆ.ಶ್ರೀನಿವಾಸ್‌ರನ್ನು ಎಲ್ಲರೂ ಒಮ್ಮತದಿಂದ ಅಧ್ಯಕ್ಷ ಗಾದಿಗೆ ಆಯ್ಕೆ ಮಾಡಿದರು. ಒಟ್ಟು ಈ ಸಮಿತಿಯಲ್ಲಿ ೯ ಮಂದಿ ಸದಸ್ಯರು ಇದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೆ.ಶ್ರೀನಿವಾಸ್ ಮಾತನಾಡಿ, ಬಿಳಿಗಿರಿರಂಗನಬೆಟ್ಟದ ದೇವಸ್ಥಾನಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಈ ದೇಗುಲ ಅತ್ಯಂತ ಪುರಾತನ ದೇಗುಲವಾಗಿದ್ದು ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲದೆ ವರ್ಷದಲ್ಲಿ ಎರಡು ಬಾರಿ ಇಲ್ಲಿ ರಥೋತ್ಸವ ನಡೆಯುತ್ತದೆ. ಅಲ್ಲದೆ ಗಂಗಾಧರೇಶ್ವರನ ದೇಗುಲದಲ್ಲೂ ತೇರು ನಡೆಯುತ್ತದೆ. ದೇಶ ವಿದೇಶಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ. ಇಲ್ಲಿಗೆ ಈಚೆಗೆ ಬರುವ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಭಕ್ತರಿಗೆ ಮೂಲ ಸವಲತ್ತುಗಳನ್ನು ನೀಡಲು ಇನ್ನಷ್ಟು ನೂತನ ಸವಲತ್ತುಗಳನ್ನು ನೀಡಲು ನಾನು ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ದೇಗುಲದ ಅಭಿವೃದ್ಧಿಗೆ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ ನಾನು ಬದ್ಧನಾಗಿ ಕರ್ತವ್ಯ ನಿರ್ವಹಿಸುತ್ತೇನೆ.