ಕನ್ನಡಪ್ರಭ ವಾರ್ತೆ ಔರಾದ್
ಬೆಳಗ್ಗೆ ದೇವಸ್ಥಾನದಲ್ಲಿ ಶಾಸಕರ ನೇತೃತ್ವದಲ್ಲಿ ಹೋಮ, ಹವನ, ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಭಕ್ತಿ ಭಾವದಿಂದ ನೆರವೇರಿಸಲಾಯಿತು. ಬಳಿಕ ಮಾತಾ ಜಗದಂಬಾ ದೇವಿ, ಸಂತ ಸೇವಾಲಾಲ್ ಮಹಾರಾಜ ಹಾಗೂ ಸಂತ ರಾಮರಾವ ಮಹಾರಾಜರ ಧ್ವಜಾರೋಹಣ ನೆರವೇರಿಸಿ ಎರಡನೇ ದಿನದ ಜಾತ್ರೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಈ ವೇಳೆ ಪೌರಾದೇವಿಯ ಪೂಜ್ಯರಾದ ಬಾಬುಸಿಂಗ್ ಮಹಾರಾಜರು ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ನಂತರ ದೇವಸ್ಥಾನದ ಆವರಣದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 100 ಕಲಾ ತಂಡಗಳ ಕಲಾವಿದರು ಕೋಲಾಟ, ತಮಟೆ ವಾದನ, ಬಂಜಾರಾ ಸಂಗೀತ, ಬಂಜಾರಾ ನೃತ್ಯ, ಕೀರ್ತನೆ, ಭಜನೆ, ಜಾನಪದ ಸಂಗೀತ, ಶಿವ ಭಜನೆಯಂತಹ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನಗಳನ್ನು ನೀಡಿದರು. ಇದೇ ವೇಳೇ ಶಾಸಕರು ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚವ್ಹಾಣ್ ಮಾತನಾಡಿ, ಇಚ್ಛಾಪೂರ್ತಿ ಮಾತಾ ಜಗದಂಬೆ ದೇವಸ್ಥಾನದಲ್ಲಿ ಬೇಡಿಕೊಂಡಿದ್ದೆಲ್ಲವೂ ಈಡೇರುತ್ತದೆ. ಹೀಗಾಗಿ ಸಾಕಷ್ಟು ಭಕ್ತರು ಆಗಮಿಸಿ ಹರಕೆಗಳನ್ನು ಹೊತ್ತುಕೊಳ್ಳುತ್ತಾರೆ. ದೇವಿಯ ಮಹಿಮೆ ಅಪಾರ. ದೇವಿಯು ಎಲ್ಲರ ಕಷ್ಟಗಳನ್ನು ಪರಿಹರಿಸುತ್ತಾರೆಂದು ಮಾತಾ ಜಗದಂಬೆಯ ಮಹಿಮೆ ವಿವರಿಸಿದರು.
ಪೌರಾದೇವಿಯ ಪೂಜ್ಯ ಬಾಬುಸಿಂಗ್ ಮಹಾರಾಜರು ಆಶೀರ್ವಚನ ನೀಡಿದರು. ಮಾಜಿ ಶಾಸಕರಾದ ಗುಂಡಪ್ಪ ಬಿರಾದಾರ, ಸುಭಾಷ ಕಲ್ಲೂರ, ಪ್ರಕಾಶ ಖಂಡ್ರೆ ಹಾಗೂ ಹಿರಿಯ ಮುಖಂಡರಾದ ಬಾಬುರಾವ ಮದಕಟ್ಟಿ ಮಾತನಾಡಿದರು.
ಇಂದು ಕುಸ್ತಿ ಪಂದ್ಯಾವಳಿ: ಸೋಮವಾರ ಮಧ್ಯಾಹ್ನ 1 ಗಂಟೆಯಿಂದ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ನಾಡಿನ ವಿವಿಧೆಡೆಯಿಂದ ಕುಸ್ತಿಪಟುಗಳು ಆಗಮಿಸುತ್ತಾರೆ. ಶಾಸಕ ಪ್ರಭು ಚವ್ಹಾಣ್ ಅವರಿಂದ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.