ರಾಘು ಕಾಕರಮಠ
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಆಂದ್ಲೆಯ ಶ್ರೀ ಜಗದೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭೇಟಿ ನೀಡಲಿದ್ದು, ಸಂಕಷ್ಟಹರಣ ಹಾಗೂ ಇಷ್ಟಾರ್ಥಸಿದ್ಧಿ ಕಾಳರಾತ್ರಿ ಎಳ್ಳು ಅಮಾವಾಸ್ಯೆ ಮಾಲೆ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿಯಾಗುವ ಕನಸನ್ನು ನನಸು ಮಾಡಿಕೊಳ್ಳಲು ಜಗದೇಶ್ವರಿಯ ವಿಶೇಷ ದಿನವಾದ ಎಳ್ಳು ಅಮಾವಾಸ್ಯೆಯಂದು ವಿಶೇಷ ಕಾಳರಾತ್ರಿ ಅಮಾವಾಸ್ಯೆ ಮಾಲೆ ಪೂಜೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಈ ದೇವಸ್ಥಾನದಲ್ಲಿ ಆರು ವರ್ಷಗಳಿಂದ ಪ್ರತಿ ಅಮಾವಾಸ್ಯೆಯಂದು ಡಿಕೆಶಿ ಹೆಸರಿನಲ್ಲಿ ಪೂಜೆ ಮಾಡಲಾಗುತ್ತಿದೆ. ಡಿಕೆಶಿಯವರು ತಮ್ಮ ಪ್ರತಿಯೊಂದು ರಾಜಕೀಯ ನಡೆಗೂ ದೇವಿಯ ಆಶೀರ್ವಾದ ಬೇಡುತ್ತಾರೆ. ಸನ್ನಿಧಾನದ ಅರ್ಚಕ ಗಣೇಶ ನಾಯ್ಕ ಮೂಲಕ ದೂರವಾಣಿಯಲ್ಲಿಯೇ ಸಮಸ್ಯೆ ತಿಳಿಸಿ, ಪರಿಹಾರ ಕಂಡುಕೊಳ್ಳುತ್ತಿದ್ದಾರೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. 2019ರಲ್ಲಿ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ 50 ದಿನ ಜೈಲುವಾಸ ಕಂಡಿದ್ದ ವೇಳೆ ಡಿಕೆಶಿಯವರ ತಾಯಿ ಮತ್ತು ಪತ್ನಿ ಈ ದೇವಸ್ಥಾನಕ್ಕೆ ಆಗಮಿಸಿ ದರ್ಶನಪೂಜೆ ಮಾಡಿಸಿ ಜಾಮೀನಿಗೆ ಪ್ರಾರ್ಥಿಸಿದ್ದರು. ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಹಿಂಗಾರ ದರ್ಶನ ಪಡೆದು, ಜಾಮೀನಿಗೆ ಪ್ರಾರ್ಥಿಸಿದ್ದರು. ಆ ವೇಳೆ, ದರ್ಶನ ಪಾತ್ರಿ ಗಣೇಶ ನಾಯ್ಕ ಅವರು ಸರಿಯಾಗಿ 9 ದಿನದಲ್ಲಿ ಶಿವಕುಮಾರಗೆ ಜಾಮೀನು ಸಿಗುತ್ತದೆ ಎಂದು ಹೇಳಿದ್ದರಂತೆ. ಅದರಂತೆ 9 ದಿನದ ಒಳಗಾಗಿಯೇ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ದೇವಸ್ಥಾನಕ್ಕೆ ಹರಕೆ ಅರ್ಪಿಸಿ, ಸಂಕಷ್ಟಹರಣ ಮಾಲೆ ಪೂಜೆಯೊಂದಿಗೆ ಹಿಂಗಾರ ದರ್ಶನದಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಪರಿಹಾರ ಕೇಳಿಕೊಂಡಿದ್ದರು.ತಾಲೂಕಿನ ಮೊಗಟಾ ಗ್ರಾ.ಪಂ.ವ್ಯಾಪ್ತಿಗೆ ಒಳಪಡುವ, ಅರಣ್ಯದ ದಾರಿಯ ಮಧ್ಯೆ ಇರುವ, ಪ್ರಚಾರವೇ ಇಲ್ಲದ ಈ ದೇವಾಲಯಕ್ಕೆ ತೆರಳಿ ಡಿಕೆಶಿಯವರು ಪೂಜೆ ಸಲ್ಲಿಸಿರುವುದು ಅಂದು ಕುತೂಹಲಕ್ಕೆ ಕಾರಣವಾಗಿತ್ತು.