;Resize=(412,232))
ಬೆಳಗಾವಿ : ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಗಿಯುವ ಮುನ್ನಾ ದಿನವಾದ ಗುರುವಾರವೂ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಡಿನ್ನರ್ ಪಾರ್ಟಿ ಮುಂದುವರಿದಿದೆ.
ಬುಧವಾರ ರಾತ್ರಿಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಅವರ ಆಪ್ತರಿಗೆ ಖಾಸಗಿ ಹೋಟೆಲ್‌ವೊಂದರಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಿದ್ದ ಸಚಿವ ಸತೀಶ ಜಾರಕಿಹೊಳಿ, ಗುರುವಾರ ರಾತ್ರಿ ತಮ್ಮ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ತಮ್ಮ ಆಪ್ತ ಅಹಿಂದ ನಾಯಕರು, ಸಚಿವರು, ಶಾಸಕರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ್ದು ಗಮನ ಸೆಳೆಯಿತು. ಮಾತ್ರವಲ್ಲ, ಅಧಿವೇಶನ ಮುಗಿಯುವ ಹಂತದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯನ್ನು ವರಿಷ್ಠರು ಕೈಗೆತ್ತಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಡಿನ್ನರ್ ಪಾರ್ಟಿ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಮೂಲಕ ಅಹಿಂದ ನಾಯಕತ್ವ ಬದಲಾವಣೆ ಮಾಡದಂತೆ ಪರೋಕ್ಷ ಸಂದೇಶವನ್ನು ನೀಡುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಬೆಳಗಾವಿಯ ಕುವೆಂಪು ನಗರದಲ್ಲಿರುವ ಸತೀಶ ಜಾರಕಿಹೊಳಿ ಅವರ ಮನೆಯಲ್ಲಿಯೇ ಔತಣಕೂಟ ಆಯೋಜಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ, ಸಚಿವರಾದ ಡಾ.ಜಿ.ಪರಮೇಶ್ವರ, ಎಚ್.ಸಿ.ಮಹಾದೇವಪ್ಪ, ಕೆ.ಜೆ.ಜಾರ್ಜ್, ಶಾಸಕ ಕೆ.ಎನ್.ರಾಜಣ್ಣ ಸೇರಿದಂತೆ 15 ಜನ ನಾಯಕರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಮಟನ್, ಚಿಕನ್, ಮೀನು ಜೊತೆಗೆ 30ಕ್ಕೂ ಅಧಿಕ ತರಹೇವಾರಿ ಖಾದ್ಯ ಸಿದ್ಧಪಡಿಸಲಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಸ್ಯಾಹಾರ ಭೋಜನ ಸವಿದರು.
ಬೆಳಗಾವಿ ಅಧಿವೇಶನದ ಬಳಿಕ ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್‌ನಿಂದ ಸಿಎಂ, ಡಿಸಿಎಂಗೆ ದೆಹಲಿಯಿಂದ ಬಲಾವ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಭೇಟಿಗೂ ಮೊದಲೇ ಸತೀಶ ಜಾರಕಿಹೊಳಿ ಅವರು ಅಹಿಂದ ಟ್ರಂಪ್ ಕಾರ್ಡ್ ಬಳಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಸಚಿವಸ ತೀಶ ಅವರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಬಣ ರಣತಂತ್ರ ರೂಪಿಸಿದ್ದು, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಡದಂತೆ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿದೆ.