ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದವರು ಜಗದ್ಗುರು ರೇಣುಕಾಚಾರ್ಯರು: ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork |  
Published : Mar 13, 2025, 12:52 AM IST
ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಸಚಿವ ಎಚ್.ಕೆ. ಪಾಟೀಲ್ ಉದ್ಘಾಟಿಸಿದರು.

ಗದಗ: ಕಲಿಯುಗದಲ್ಲಿ ವೀರಶೈವ ಧರ್ಮ ಬೋಧಿಸಲು ಬಂದ ಆಚಾರ್ಯರಲ್ಲಿ ಜಗದ್ಗುರು ರೇಣುಕಾಚಾರ್ಯರು ಒಬ್ಬರು. ಅವರು ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಮಹಾಮಹಿಮರಾಗಿದ್ದಾರೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಲವಾರು ಮಹಾನ್ ವ್ಯಕ್ತಿಗಳ, ಯೋಗಿಗಳ ಜಯಂತಿಯನ್ನು ಆಚರಿಸುವ ಮೂಲ ಉದ್ದೇಶವೆಂದರೆ ಅವರ ಸಂದೇಶಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರಮುಖವಾಗಿರುತ್ತದೆ. ಸಮಾಜದಲ್ಲಿ ಅಸ್ಪೃಶ್ಯತೆ, ಮೂಢನಂಬಿಕೆಗಳನ್ನು ಹೋಗಲಾಡಿಸಿ ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆ ಬದುಕನ್ನು ಬೋಧಿಸಿ ಲೋಕಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಅವರು ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದ್ದಾರೆ ಎಂದರು.

ವೀರೇಶ್ವರ ಪುಣ್ಯಾಶ್ರಮದ ಶಿವಕುಮಾರ ಶಾಸ್ತ್ರಿ ಉಪನ್ಯಾಸ ನೀಡಿದರು. ಸಾನ್ನಿಧ್ಯ ವಹಿಸಿದ್ದ ನೆಗಳೂರು ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಮಹಾಸ್ವಾಮಿಗಳು ಮಾತನಾಡಿ, ದೇಶಾದ್ಯಂತ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಗುತ್ತದೆ. ಜಾತಿ, ಜಾತಿಗಳ ಕಂದಕಗಳನ್ನು ತೊಡೆದು ಭೂಮಿಗೆ ಶಿವಸಿದ್ಧಾಂತ ಬೋಧಿಸಿದವರು ರೇಣುಕಾಚಾರ್ಯ ಭಗವತ್ಪಾದರು. ಜಗದ್ಗುರು ರೇಣುಕಾಚಾರ್ಯರ ಕುರಿತು ಶ್ರದ್ಧೆಯಿಂದ ಅಧ್ಯಯನವಾಗಬೇಕು. ಇವರು ಧರ್ಮಕ್ಕೂ ಸಂವಿಧಾನ ಕೊಟ್ಟಿದ್ದಾರೆ. ರೇಣುಕಾಚಾರ್ಯರ ತತ್ವ-ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಮಕ್ಕಳಿಗೆ ಬೋಧನೆ ಮಾಡುವ ಸಂಕಲ್ಪ ಮಾಡಬೇಕು ಎಂದರು.

ರೇಣುಕಾಚಾರ್ಯ ಮಠದ ಚಂದ್ರಶೇಖರ ದೇವರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಡಿ.ಆರ್. ಪಾಟೀಲ, ಡಿಸಿ ಸಿ.ಎನ್. ಶ್ರೀಧರ್, ಜಿಪಂ ಸಿಇಒ ಭರತ್ ಎಸ್., ಹೆಚ್ಚುವರಿ ಎಸ್‌ಪಿ ಎಂ.ಬಿ. ಸಂಕದ, ಎಡಿಸಿ ಅನ್ನಪೂರ್ಣಾ ಎಂ., ಎಸಿ ಗಂಗಪ್ಪ ಎಂ., ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದ ಗಣ್ಯರು, ಹಿರಿಯರು ಹಾಜರಿದ್ದರು.

ಅಕ್ಷತಾ ಹಿರೇಮಠ ಮತ್ತು ತಂಡದವರಿಂದ ಸುಗಮ ಸಂಗೀತ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಸ್ವಾಗತಿಸಿದರು. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...