ಕೆ.ಆರ್.ಪೇಟೆ ವಕೀಲ ಅಮಿತ್ ಮೇಲೆ ದಬ್ಬಾಳಿಕೆ: ಪಾಂಡವಪುರ ಎಸಿ ವಿರುದ್ಧ ವಕೀಲರ ಪ್ರತಿಭಟನೆ

KannadaprabhaNewsNetwork | Published : Mar 13, 2025 12:52 AM

ಸಾರಾಂಶ

ಕಂದಾಯ ಸಮಸ್ಯೆಗಳನ್ನು ಹೇಳಿಕೊಂಡು ವಕೀಲ ಅಮಿತ್ ಅವರು ಉಪ ವಿಭಾಗಾಧಿಕಾರಿಯನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದ ವೇಳೆ ಏಕಾಏಕಿ ಪಾಂಡವಪುರ ಉಪ ವಿಭಾಗಾಧಿಕಾರಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ದರ್ಪದಿಂದ ನಡೆದುಕೊಂಡಿದ್ದಲ್ಲದೇ, ಗೌರವಾನ್ವಿತ ವಕೀಲರಿಗೆ ಕನಿಷ್ಠ ಗೌರವವನ್ನೂ ನೀಡದೆ ಪೊಲೀಸರಿಗೆ ಕರೆ ಮಾಡಿ, ಕಚೇರಿಗೆ ಕರೆಸಿಕೊಂಡು ವಕೀಲರನ್ನು ಪೊಲೀಸ್ ಕಸ್ಟಡಿಗೆ ಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆ.ಆರ್.ಪೇಟೆ ವಕೀಲ ಅಮಿತ್ ಅವರ ಮೇಲೆ ಪಾಂಡಪುರ ಉಪ ವಿಭಾಗಾಧಿಕಾರಿ ದೌರ್ಜನ್ಯ ಎಸಗಿರುವುದನ್ನು ಖಂಡಿಸಿ ವಕೀಲರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ವಕೀಲರ ಸಂಘದ ಆವರಣದಲ್ಲಿ ಸೇರಿದ ವಕೀಲರು, ಉಪ ವಿಭಾಗಾಧಿಕಾರಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.

ಕಂದಾಯ ಸಮಸ್ಯೆಗಳನ್ನು ಹೇಳಿಕೊಂಡು ವಕೀಲ ಅಮಿತ್ ಅವರು ಉಪ ವಿಭಾಗಾಧಿಕಾರಿಯನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದ ವೇಳೆ ಏಕಾಏಕಿ ಪಾಂಡವಪುರ ಉಪ ವಿಭಾಗಾಧಿಕಾರಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ದರ್ಪದಿಂದ ನಡೆದುಕೊಂಡಿದ್ದಲ್ಲದೇ, ಗೌರವಾನ್ವಿತ ವಕೀಲರಿಗೆ ಕನಿಷ್ಠ ಗೌರವವನ್ನೂ ನೀಡದೆ ಪೊಲೀಸರಿಗೆ ಕರೆ ಮಾಡಿ, ಕಚೇರಿಗೆ ಕರೆಸಿಕೊಂಡು ವಕೀಲರನ್ನು ಪೊಲೀಸ್ ಕಸ್ಟಡಿಗೆ ಕೊಟ್ಟಿರುವುದನ್ನು ಖಂಡಿಸಿದರು.

ಬಳಿಕ ಪೊಲೀಸರು ಸುಮಾರು ೨ ರಿಂದ ೩ ಗಂಟೆಗಳ ಕಾಲ ಠಾಣೆಯಲ್ಲಿ ಕಾನೂನುಬಾಹಿರವಾಗಿ ಬಂಧನದಲ್ಲಿಟ್ಟುಕೊಂಡು ದೌರ್ಜನ್ಯವೆಸಗಿರುವುದು ಮಹಾ ಅಪರಾಧವಾಗಿರುತ್ತದೆ ಎಂದು ಆರೋಪಿಸಿದರು.

ಒಬ್ಬ ವಕೀಲರ ಮೇಲೆ ಈ ರೀತಿ ದೌರ್ಜನ್ಯವೆಸಗಿರುವ ಪಾಂಡವಪುರ ಉಪ ವಿಭಾಗಾಧಿಕಾರಿ ಇನ್ನು ಜನಸಾಮಾನ್ಯರು ಮತ್ತು ರೈತರ ಜೊತೆ ಯಾವ ರೀತಿ ವರ್ತಿಸಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಈ ತಕ್ಷಣ ಜಾರಿಗೆ ಬರುವಂತೆ ಪಾಂಡವಪುರ ಉಪ ವಿಭಾಗಾಧಿಕಾರಿಯನ್ನು ಅಮಾನತ್ತುಗೊಳಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ವಕೀಲರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಂದೆ ಇಂತಹ ಘಟನೆಗಳು ನಡೆಯದಂತೆ ಎಲ್ಲ ಅಧಿಕಾರಿಗಳಿಗೂ ಎಚ್ಚರಿಕೆ ನೀಡಬೇಕು. ದರ್ಪದಿಂದ ನಡೆದುಕೊಂಡಿರುವ ಪಾಂಡವಪುರ ಉಪ ವಿಭಾಗಾಧಿಕಾರಿ ವಿರುದ್ಧ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಿ ವಕೀಲ ಅಮಿತ್ ಅವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ, ಪದಾಧಿಕಾರಿಗಳಾದ ಸಿದ್ದರಾಜು, ಮಹೇಶ, ಮರಿಸ್ವಾಮಿ, ರಾಮಚಂದ್ರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share this article