''''ಆಧುನಿಕ ಭಗೀರಥರ 57ರ ಸಂಭ್ರಮ'''' ಕಾರ್ಯಕ್ರಮ । ನೀರಿಗಾಗಿ ಪರಿತಪಿಸಿದ್ದ ರೈತರಲ್ಲಿ ಈಗ ಸಂತಸದ ನಗೆ
ಬರದ ನಾಡು ಎಂಬ ಹಣೆಪಟ್ಟಿ ಹೊತ್ತಿದ್ದ ಜಗಳೂರು ವಿಧಾನಸಭಾ ಕ್ಷೇತ್ರದ 57 ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿದಿರುವುದು ಈ ಭಾಗದ ಕೃಷಿ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ದಶಕಗಳ ಕಾಲ ನೀರಿಗಾಗಿ ಪರಿತಪಿಸಿದ್ದ ಜಗಳೂರು ರೈತರ ಮೊಗದಲ್ಲಿ ಇದೀಗ ಸಂತಸದ ನಗೆ ಮೂಡಿದೆ. ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆತಿದೆ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಮಾಡ್ರಳ್ಳಿ (ಗುರುಸಿದ್ದಾಪುರ) ಗ್ರಾಮದ ಚೌಡೇಶ್ವರಿ ದೇವಿ ಸನ್ನಿಧಿಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ನೇತೃತ್ವದಲ್ಲಿ ಆಯೋಜಿಸಿದ್ದ ''''ಆಧುನಿಕ ಭಗೀರಥರ 57ರ ಸಂಭ್ರಮ'''' ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ರೈತರಿಗೆ ರೈತರೇ ಶತ್ರುಗಳಾಗಬೇಡಿ:
ರೈತರು ತಮ್ಮ ಕೆರೆಗಳಿಗೆ ಜಾಸ್ತಿ ನೀರು ಬರಲಿ ಎಂದು ವಾಲ್ವ್ ತಿರುವುತ್ತಿರುವವರ ಕುರಿತು ನುಡಿದ ಶ್ರೀಗಳು, ನಮಗೆ ಇಲ್ಲದಿದ್ದರೂ ಪರವಾಗಿಲ್ಲ, ಇನ್ನೊಬ್ಬರಿಗೆ ದೊರೆಯಲಿ ಎನ್ನುವ ವಿಶಾಲ ಭಾವನೆ ಇರುವುದು ನಿಜವಾದ ಮಾನವೀಯತೆ. ಇಂತಹ ಉದಾತ್ತ ಮನೋಭಾವ ಪ್ರತಿಯೊಬ್ಬ ರೈತರು ಬೆಳೆಸಿಕೊಳ್ಳಬೇಕು ಎಂದು ಬುದ್ಧಿವಾದ ಹೇಳೀದರು.
ಶಾಸಕ ದೇವೇಂದ್ರಪ್ಪ ಮಾತನಾಡಿ, ಒಂದು ತುತ್ತಿಗೂ ಗತಿಯಿಲ್ಲದ ಬಡ ಕುಟುಂಬದಲ್ಲಿ ಜನಿಸಿದ ನಾನು ಇಂದು ಶಾಸಕನಾಗಲು ಹಾಗೂ ಐಎಎಸ್ ಅಧಿಕಾರಿಯಾಗಲು ಪರಮಪೂಜ್ಯರ ಮಾರ್ಗದರ್ಶನವೇ ಕಾರಣ. ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ವಿಯಾಗಿದೆ. ಕಳೆದ ವರ್ಷ ವರುಣನ ಕೃಪೆಯಿಂದ ಕೆರೆಗಳು ಕೋಡಿ ಬಿದ್ದಿದ್ದವು. ಈ ವರ್ಷ ಪ್ರಕೃತಿಯ ಮುನಿಸಿನಿಂದ ಕೆರೆಗಳಿಗೆ ನೀರು ಬಂದಿರಲಿಲ್ಲ. ನೀರಾವರಿ ನಿಗಮದ ಎಂಜಿನಿಯರ್ಗಳು ಹಾಗೂ ಗುತ್ತಿಗೆದಾರರ ಸಹಕಾರದಿಂದ ಗುರುಸಿದ್ದಾಪುರದ ಎರಡು ಕೆರೆಗಳು, ಮಾಗಡಿ ಹಾಗೂ ಅಗಸನಹಳ್ಳಿ ಕೆರೆಗಳಿಗೆ ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಲು ಸಾಧ್ಯವಾಗಿದೆ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಮತ ನೀಡಿದ ಜನರ ಅಭ್ಯುದಯವನ್ನು ರಾಜಕಾರಣಿಗಳಾದ ನಾವು ಬಯಸೋಣ. ಎಲ್ಲ ಕೆರೆಗಳಿಗೂ ನೀರು ಹರಿದ ಮೇಲೆ ಶ್ರೀಗಳನ್ನು ಕರೆಸಿ ದೊಡ್ಡಮಟ್ಟದ ಕಾರ್ಯಕ್ರಮ ಮಾಡಿರುವುದು ಖುಷಿಯ ವಿಚಾರ. ಈ ಯೋಜನೆಗೆ ಸಹಕರಿಸಿದ ಮೂರೂ ಅವಧಿಗಳ ಜನ ಮುಖ್ಯಮಂತ್ರಿಗಳು, ಆಯಾ ಕಾಲದ ಜಲ ಸಂಪನ್ಮೂಲ ಸಚಿವರು, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್ ಅವರ ಶ್ರಮ ಅಪಾರವಾದುದು ಎಂದು ಸ್ಮರಿಸಿದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ಅರಣ್ಯ ಇಲಾಖೆಯ ಕಾನೂನು ತೊಡಕುಗಳನ್ನು ಇತ್ಯರ್ಥಗೊಳಿಸಿ ಕೆರೆಗಳಿಗೆ ನೀರು ಹರಿಸಿದ ಕೀರ್ತಿ ಶಾಸಕ ಬಿ.ದೇವೇಂದ್ರಪ್ಪ ಹಾಗೂ ಅವರ ಪುತ್ರ ಕೀರ್ತಿಕುಮಾರ್ ಅವರಿಗೆ ಸಲ್ಲುತ್ತದೆ. ನನ್ನ ಆಡಳಿತಾವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಜನೆಗೆ ₹250 ಕೋಟಿ ಮಂಜೂರು ಮಾಡಿದಾಗ, ಉಳಿದ ಅನುದಾನ ಬಿಡುಗಡೆಗಾಗಿ ರಾಜೀನಾಮೆ ನೀಡಲೂ ಸಿದ್ಧನಾಗಿದ್ದೆ. ಸಿರಿಗೆರೆ ಶ್ರೀಗಳು ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂಬುದಕ್ಕೆ ತಕ್ಷಣವೇ ₹650 ಕೋಟಿ ಬಿಡುಗಡೆ ಮಾಡಿದ್ದು ಹಾಗೂ ನ್ಯಾಯಾಲಯದಲ್ಲಿದ್ದ ರೈತರ ತಡೆಯಾಜ್ಞೆ ತೆರವುಗೊಂಡಿದ್ದೇ ಸಾಕ್ಷಿ. ಕೊಂಡಕುರಿ ಅಭಯಾರಣ್ಯವನ್ನು ಕೊಂಡಕುರಿ ಧಾಮ ಹಾಗೂ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿ ರೂಪಿಸುವಲ್ಲಿಯೂ ಕಾಳಜಿ ವಹಿಸಿದ್ದೇನೆ. ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಯೂ ಅಷ್ಟೇ ಮುಖ್ಯ ಎಂದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, 2018ರಲ್ಲಿ ₹1,150 ಕೋಟಿ ವೆಚ್ಚದ ಭರಮಸಾಗರದ 45 ಕೆರೆಗಳು ಹಾಗೂ ಜಗಳೂರಿನ 57 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಜನ್ಮ ನೀಡಲಾಗಿತ್ತು. ಸಿರಿಗೆರೆ ಶ್ರೀಗಳ ಸಂಕಲ್ಪದಂತೆ ಆಡಳಿತ ನಡೆಸಿದ ಸರ್ಕಾರಗಳ ಪಕ್ಷಾತೀತ ಸಹಕಾರದಿಂದ ಇಂದು ಎರಡೂ ಯೋಜನೆಗಳು ಯಶಸ್ವಿಯಾಗಿ ನೀರು ಹರಿಸುತ್ತಿವೆ. ರಾಜ್ಯದ ಹಲವು ಕಡೆ ಏತ ನೀರಾವರಿ ಯೋಜನೆಗಳು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಆದರೆ, ಭರಮಸಾಗರ ಮತ್ತು ಜಗಳೂರಿನಲ್ಲಿ ಯಶಸ್ವಿ ಆಗಿರುವುದು ಹೆಮ್ಮೆಯ ಸಂಗತಿ. ಸಿರಿಗೆರೆ ಶ್ರೀಗಳು ಫಸಲ್ ಭೀಮಾ ಯೋಜನೆ ಜಾರಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
57 ಎತ್ತಿನ ಬಂಡಿಗಳೊಂದಿಗೆ ವೈಭವದ ಮೆರವಣಿಗೆ:
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಕೆ.ಮಂಜುನಾಥ್, ಕೆ.ಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಪಿ.ಸುರೇಶ್ ಗೌಡ, ಬಿಸ್ತುವಳ್ಳಿ ಬಾಬು, ಚಟ್ನಹಳ್ಳಿ ರಾಜಣ್ಣ, ಶಶಿಧರ, ವೇಣುಗೋಪಾಲರೆಡ್ಡಿ, ಷಂಷೀರ್ ಅಹಮ್ಮದ್, ವಕೀಲ ಪ್ರಕಾಶ್, ಮಡ್ರಹಳ್ಳಿ ಪ್ರಕಾಶ್, ರಮೇಶ್, ಗಿರೀಶ್, ಮಾಗಡಿ ಮಂಜಪ್ಪ, ದೀಪಕ್ ಪಟೇಲ್, ಗಡಿಮಾಕುಂಟೆ ಸಿದ್ದೇಶ್, ಶೇಖರಪ್ಪ ಇತರರು ಉಪಸ್ಥಿತರಿದ್ದರು.