ಕನ್ನಡಪ್ರಭ ವಾರ್ತೆ ಆಲೂರು
ಶಾಸಕರು ತಡವಾಗಿ ಬರುವುದಾಗಿ ತಿಳಿಸಿದ ಕಾರಣ ಕಾರ್ಯಕ್ರಮವನ್ನು ಪ್ರಾರಂಭಿಸಿದ ತಾಲೂಕು ಆಡಳಿತ ಕೇವಲ ತಹಸೀಲ್ದಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಯನ್ನು ಮಾತ್ರ ವೇದಿಕೆಗೆ ಆಹ್ವಾನಿಸಿದರು. ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಸಮಾಜದ ಹಿರಿಯ ಮುಖಂಡರನ್ನಾಗಲಿ ಹಾಗೂ ಇತರೆ ಸಮಾಜದ ಯಾವುದೇ ಮುಖಂಡರನ್ನಾಗಲಿ ವೇದಿಕೆಗೆ ಆಹ್ವಾನಿಸದ ಕಾರಣ ರೊಚ್ಚಿಗೆದ್ದ ಮಾದಿಗ ದಂಡೋರ ಸಮಿತಿಯ ಅಧ್ಯಕ್ಷ ವೆಂಕಟಯ್ಯ,ಜೆಡಿಎಸ್ ಮುಖಂಡ ಕೆ.ಎಸ್. ಮಂಜೇಗೌಡರು, ಇದಕ್ಕೆಲ್ಲ ಶಾಸಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೇ ಮುಖ್ಯ ಕಾರಣ. ಉದ್ದೇಶಪೂರ್ವಕವಾಗಿಯೇ ವೇದಿಕೆಗೆ ಆಹ್ವಾನಿಸದೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು. ಇದರಿಂದಲೂ ಸಮಾಧಾನಗೊಳ್ಳದ ಮುಖಂಡರು ಮಾತನಾಡಿ, ತಾಲೂಕು ಆಡಳಿತದವರು ಕಾರ್ಯಕ್ರಮವನ್ನು ಬೇಕಾಬಿಟ್ಟಿ ಆಯೋಜಿಸಿದ್ದಾರೆ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡದೆ ಕಾರ್ಯಕ್ರಮ ಆರಂಭಿಸಿದ್ದು ಅಂಬೇಡ್ಕರ್ ರವರಿಗೆ ಮಾಡಿದ ಅವಮಾನವಾಗಿದೆ. ಬಾಬು ಜಗಜೀವನ್ ರಾಮ್ ರವರು ದೇಶ ಕಂಡ ಮಹಾನ್ ನಾಯಕರಾಗಿದ್ದು, ಕನಿಷ್ಠ ಆಹ್ವಾನ ಪತ್ರಿಕೆಯನ್ನು ಸಹ ಮಾಡಿಸಿಲ್ಲ. ಇವರಿಗೆ ಆಹ್ವಾನ ಪತ್ರಿಕೆಯನ್ನು ಮಾಡಿಸಲು ಹಣವಿಲ್ಲ ಎಂದಿದ್ದರೆ ಆಹ್ವಾನ ಪತ್ರಿಕೆಯನ್ನು ನಾವೇ ಮಾಡಿಸಿ ಕೊಡುತ್ತಿದ್ದೆವು. ದೇಶ ಕಂಡ ಒಬ್ಬ ಮಹಾನ್ ನಾಯಕನ ಕಾರ್ಯಕ್ರಮವನ್ನು ಈ ರೀತಿ ಮಾಡುವುದಾದರೆ ನಾವು ಕಾರ್ಯಕ್ರಮವನ್ನೇ ಬಹಿಷ್ಕರಿಸಿ ಹೊರ ನಡೆಯುವುದಾಗಿ ತಿಳಿಸಿದರು.ಮಧ್ಯಪ್ರವೇಶಿಸಿದ ತಹಸೀಲ್ದಾರ್ ಮಲ್ಲಿಕಾರ್ಜುನ್ ಹಾಗೂ ಸಿಡಿಪಿಒ ಮಲ್ಲೇಶ್ ಮುಖಂಡರನ್ನು ಸಮಾಧಾನಪಡಿಸಿ, ವೇದಿಕೆಗೆ ಎಲ್ಲರನ್ನೂ ಆಹ್ವಾನಿಸಿ ಕಾರ್ಯಕ್ರಮವನ್ನು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಪ್ರಾರಂಭಿಸಿದರು.
ಶಾಸಕ ಸೀಮೆಂಟ್ ಮಂಜು ತಡವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.