ಜಾಗೃತಿ ಕೊರತೆ: ಕುರಿಗಾಹಿಗಳ ಮೌಢ್ಯಕ್ಕೆ ಕುರಿ ಬಲಿ

KannadaprabhaNewsNetwork |  
Published : Apr 06, 2025, 01:48 AM IST
ಪೋಟೊ4ಕೆಎಸಟಿ2: ಕುಷ್ಟಗಿ ಪಟ್ಟಣದಿಂದ ದೋಟಿಹಾಳ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯೆ ಇರುವ ಗಿಡಕ್ಕೆ ಮೇಕೆಯನ್ನು ನೇತು ಹಾಕಿರುವದು. | Kannada Prabha

ಸಾರಾಂಶ

ದೋಟಿಹಾಳ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ ಟಕ್ಕಳಕಿ ಗ್ರಾಮದ ಹತ್ತಿರ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಗಿಡಕ್ಕೆ ರೋಗ ಕಾಣಿಸಿಕೊಂಡ ಕುರಿಯನ್ನು ನೇತು ಹಾಕಿದ್ದು, ಇಂತಹ ದೃಶ್ಯಗಳನ್ನು ಹಲವೆಡೆ ಕಾಣಬಹುದಾಗಿದೆ. ಅಕ್ಕಪಕ್ಕದ ಹೊಲದ ರೈತರು, ವಾಹನ ಸವಾರರು ಕುರಿ ನೇತು ಹಾಕಿರುವ ದೃಶ್ಯ ನೋಡಿ ಮನಕಲುಕಿದರೆ, ಇನ್ನೂ ಕೆಲವರು ಭಯಭೀತರಾಗಿದ್ದಾರೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಕುರಿ ಮತ್ತು ಮೇಕೆಗಳಿಗೆ ರೋಗ ಬಾರದಿರಲಿ ಎಂಬ ಉದ್ದೇಶದಿಂದ ರೋಗ ಕಾಣಿಸಿಕೊಂಡ ಜೀವಂತ ಕುರಿಗಳನ್ನು ಗಿಡಗಳಿಗೆ ನೇತು ಹಾಕುವ ಮೌಢ್ಯತೆಯು ಇನ್ನೂ ಕುರಿಗಾಹಿಗಳಲ್ಲಿ ಜೀವಂತವಾಗಿದೆ.

ಕುರಿ ಹಿಂಡಿನಲ್ಲಿ ರೋಗ ಕಾಣಿಸಿಕೊಂಡ ಕುರಿಯಿಂದ ಕುರಿಗಳಿಗೆ ಸಾಂಕ್ರಾಮಿಕವಾಗಿ ಹರಡಬಾರದೆಂಬ ಕಾರಣಕ್ಕೆ ಈ ಪದ್ಧತಿ ಅನುಸರಿಸುತ್ತಿದ್ದಾರೆ.

ಪಟ್ಟಣದಿಂದ ದೋಟಿಹಾಳ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ ಟಕ್ಕಳಕಿ ಗ್ರಾಮದ ಹತ್ತಿರ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಗಿಡಕ್ಕೆ ರೋಗ ಕಾಣಿಸಿಕೊಂಡ ಕುರಿಯನ್ನು ನೇತು ಹಾಕಿದ್ದು, ಇಂತಹ ದೃಶ್ಯಗಳನ್ನು ಹಲವೆಡೆ ಕಾಣಬಹುದಾಗಿದೆ. ಅಕ್ಕಪಕ್ಕದ ಹೊಲದ ರೈತರು, ವಾಹನ ಸವಾರರು ಕುರಿ ನೇತು ಹಾಕಿರುವ ದೃಶ್ಯ ನೋಡಿ ಮನಕಲುಕಿದರೆ, ಇನ್ನೂ ಕೆಲವರು ಭಯಭೀತರಾಗಿದ್ದಾರೆ.

ಸಾಮಾನ್ಯವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ವೇಳೆ ಮೂರ್ನಾಲ್ಕು ರಸ್ತೆ ಸೇರುವ ತಿರುವಿನ ಸಮೀಪದ ಗಿಡಕ್ಕೆ ಕುರಿಮರಿಯ ಹಿಂಗಾಲಿಗೆ ಹಗ್ಗದಿಂದ ಕಟ್ಟಿ ನೇತು ಹಾಕುತ್ತಾರೆ. ನಂತರ ಪೂಜೆ ಮಾಡಿ ಅದನ್ನು ತಿರುಗಿ ನೋಡದಂತೆ ಅಲ್ಲಿಂದ ಹೋಗುತ್ತಾರೆ. ನೇತು ಬಿಟ್ಟ ಕುರಿಯ ಇಡೀ ದೇಹದ ಭಾರ ತಲೆಯ ಮೇಲೆ ಬಿದ್ದು ಕಣ್ಣಿನಿಂದ ರಕ್ತ ಸೋರಲಾರಂಭಿಸುತ್ತದೆ. ಆಗ ಕುರಿಯು ಹಿಂಸೆಯಿಂದ ಒದ್ದಾಡಿ ಪ್ರಾಣ ಬಿಡುತ್ತದೆ.

ತಾಲೂಕಿನ ಮದಲಗಟ್ಟಿ, ಹಿರೆಬನ್ನಿಗೋಳ, ಶಾಖಾಪೂರು, ನೆರೆಬೆಂಚಿ, ಬ್ಯಾಲಿಹಾಳ, ಶಿರಗುಂಪಿ, ಟಕ್ಕಳಕಿ, ಬಿಜಕಲ್, ಹೆಸರೂರು, ಕ್ಯಾದಿಗುಪ್ಪ ಸೇರಿದಂತೆ ಅನೇಕ ಗ್ರಾಮದ ಅರಣ್ಯ ಪ್ರದೇಶಗಳಲ್ಲಿ ಕುರಿಮರಿಯನ್ನು ಗಿಡಕ್ಕೆ ನೇತು ಹಾಕಿರುವ ದೃಶ್ಯಗಳು ಆಗಾಗ ಕಂಡು ಬರುತ್ತವೆ.

ಸದಾಕಾಲ ಅರಣ್ಯದಲ್ಲಿ ಕುರಿಗಳೊಂದಿಗೆ ವಾಸಿಸುವ, ವಿಶೇಷವಾಗಿ ಮಹಾರಾಷ್ಟ್ರದ ಸಾಂಗ್ಲಿ, ನಿಪ್ಪಾಣಿ, ಕೊಲ್ಲಾಪುರಗಳಿಂದ ಕುರಿ ಮೇಯಿಸುತ್ತ ಬರುವ ಸಂಚಾರಿ ಕುರುಬರು ಇಂತಹ ಮೂಢನಂಬಿಕೆ ಆಚರಿಸುತ್ತಾರೆ.

ಜಾಗೃತಿ ಅಗತ್ಯ:

ಕುರಿಗಳಲ್ಲಿ ಯಾವುದೇ ರೋಗಗಳು ಕಾಣಿಸಿಕೊಂಡರೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸುವುದು ಬಿಟ್ಟು ಪೂಜೆ ಮಾಡುವುದು, ಮಂತ್ರ ಹಾಕಿಸುವ ಮೂಢನಂಬಿಕೆಗಳತ್ತ ಕುರಿಗಾಹಿಗಳು ವಾಲುತ್ತಿದ್ದಾರೆ. ಹೀಗಾಗಿ ರೋಗ ಉಲ್ಬಣಿಸಿ ಕುರಿ-ಮೇಕೆಗಳು ಸಾಯುವ ಸಂಖ್ಯೆ ಹೆಚ್ಚುತ್ತದೆ. ಜೀವಂತ ಅಥವಾ ಸತ್ತ ಕುರಿಗಳನ್ನು ಮರಕ್ಕೆ ನೇತು ಹಾಕುವುದರಿಂದ ರೋಗ ನಿವಾರಣೆ ಆಗುವುದಿಲ್ಲ ಎಂಬ ಮೌಢ್ಯತೆ ದೂರ ಮಾಡಲು ಜಾಗೃತಿ ಮೂಡಿಸುವ ಅಗತ್ಯ ಇದೆ.

ಕುರಿ ಮರಿ ಬಲಿ ಕೊಡುವುದರಿಂದ ರೋಗಗಳು ಬರುವುದಿಲ್ಲ ಎಂಬುದು ತಪ್ಪು ಕಲ್ಪನೆ. ಇದೊಂದು ಮೂಢನಂಬಿಕೆಯಾಗಿದ್ದು ಸಾಮಾನ್ಯವಾಗಿ ಎಲ್ಲ ರೋಗಗಳಿಗೂ ಚಿಕಿತ್ಸೆಯು ದೊರಕುತ್ತಿದ್ದು, ಕುರಿಗಾಹಿಗಳು ಮೌಢ್ಯಕ್ಕೆ ಬಲಿಯಾಗದೆ ರೋಗ ಕಾಣಿಸಿಕೊಂಡ ಕುರಿಯನ್ನು ವೈದ್ಯರ ಹತ್ತಿರ ತಂದು ಚಿಕಿತ್ಸೆ ಕೊಡಿಸಬೇಕು.

ಡಾ. ಸಿದ್ಧಲಿಂಗಯ್ಯ ಶಂಕೀನ್, ಹಿರಿಯ ಪಶುವೈದ್ಯಾಧಿಕಾರಿ ಕುಷ್ಟಗಿ

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...